ADVERTISEMENT

ಜೆಡಿಎಸ್ ನಾಯಕ, ಕಾರು ಚಾಲಕನ ಕೊಲೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2011, 19:30 IST
Last Updated 19 ಜನವರಿ 2011, 19:30 IST

ಆನೇಕಲ್: ಹಳೆಯ ದ್ವೇಷದ ಹಿನ್ನೆಲೆಯಲ್ಲಿ ತಾಲ್ಲೂಕಿನ ಬ್ಯಾಗಡದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂನಮಡಿವಾಳದಲ್ಲಿ ತಾಲ್ಲೂಕು ಜೆಡಿಎಸ್ ಯುವ ಘಟಕದ ಅಧ್ಯಕ್ಷ ಕೆ.ವಿ.ದೇವರಾಜ್(45) ಹಾಗೂ ಆತನ ಕಾರು ಚಾಲಕ ಸುಣವಾರದ ಮಂಜುನಾಥ್(25) ಅವರನ್ನು ಮಂಗಳವಾರ ನಡುರಾತ್ರಿ ಕೊಲೆ ಮಾಡಲಾಗಿದೆ.

ಘಟನೆಯಲ್ಲಿ ಕೂನಮಡಿವಾಳದ ಟೆಂಪೋ ಚಾಲಕ ನಾಗರಾಜ್ ಹೊಟ್ಟೆಗೆ ಚಾಕುವಿನಿಂದ ತಿವಿಯಲಾಗಿದ್ದು, ತೀವ್ರ ಗಾಯಗೊಂಡಿರುವ ಅವರನ್ನು ಬೊಮ್ಮಸಂದ್ರದ ಸ್ಪರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಹಿನ್ನೆಲೆ:  ತನ್ನ ಶಿಷ್ಯನೊಬ್ಬ ಸೃಷ್ಟಿಸಿಕೊಂಡಿದ್ದ ಜಗಳದ ನ್ಯಾಯ ಪಂಚಾಯಿತಿಗೆಂದು ದೇವರಾಜ್ ಕೂನಮಡಿವಾಳಕ್ಕೆ ಮಂಗಳವಾರ ರಾತ್ರಿ ಬಂದಿದ್ದರು.ಈ ಸಂದರ್ಭದಲ್ಲಿ ಮಾತುಕತೆಯ ವೇಳೆ ಜಗಳ ಆರಂಭವಾಯಿತು. ಟೆಂಪೊ ಚಾಲಕ ನಾಗರಾಜ್‌ಗೆ ದೇವರಾಜ್ ಕಡೆಯವರು ಚಾಕುವಿನಿಂದ ತಿವಿದಿದ್ದಾರೆ ಎನ್ನಲಾಗಿದೆ.

ಆಗ ಕುಪಿತಗೊಂಡ ಗ್ರಾಮದ ಮುನಿರಾಜು ಗುಂಪಿನ ಏಳೆಂಟು ಮಂದಿ ದೇವರಾಜು ಮತ್ತು ಸಹಚರರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂದರ್ಭದಲ್ಲಿ ದೇವರಾಜ್ ಮತ್ತು ಕಾರು ಚಾಲಕ ಮಂಜುನಾಥ್ ತಲೆಗೆ ಹೊಡೆಯಲಾಗಿದೆ. ಇಟ್ಟಿಗೆ ಮತ್ತು ಕಲ್ಲುಗಳಿಂದ ತಲೆಯನ್ನು ಜಜ್ಜಲಾಗಿದೆ. ಪರಿಣಾಮವಾಗಿ ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಮೂಲತಃ ಕೂನಮಡಿವಾಳದ ದೇವರಾಜು ಬೆಂಗಳೂರಿನ ಕೆ.ಆರ್.ಪುರಂನಲ್ಲಿ ವಾಸವಿದ್ದರು. ಆಗಿಂದಾಗ್ಗೆ ಗ್ರಾಮಕ್ಕೆ ಬಂದು ಹೋಗುತ್ತಿದ್ದರು. 1999ರಲ್ಲಿ ಗ್ರಾಮದ ಚಿಕ್ಕದೇವರಾಜು ಎಂಬುವರ ಕೊಲೆ ಸಂಬಂಧ ದೇವರಾಜು ಗ್ರಾಮವನ್ನು ತೊರೆದು ಬೆಂಗಳೂರು ಸೇರಿದ್ದರು.  ಈ ಸಂಬಂಧ ಆನೇಕಲ್ ಠಾಣೆಯಲ್ಲಿ ದೇವರಾಜು ವಿರುದ್ಧ ಪ್ರಕರಣ ಸಹ ದಾಖಲಾಗಿತ್ತು. ನಂತರ ಜೆಡಿಎಸ್ ಪಕ್ಷದೊಂದಿಗೆ ಗುರುತಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದರು. ಹಿಂದೆ ನಡೆದ ಕೊಲೆಯ ಪ್ರತಿಕಾರವಾಗಿ ದೇವರಾಜು ಕೊಲೆ ನಡೆದಿರಬಹುದು ಎಂಬ  ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.

‘ಗ್ರಾಮದಲ್ಲಿ  ಈ ಘಟನೆ ಸಂಭವಿಸಿದಾಗ ಯಾರೂ ಮನೆಯ ಬಾಗಿಲುಗಳನ್ನು ತೆರೆಯಲಿಲ್ಲ. ಪೊಲೀಸರು ಗ್ರಾಮಕ್ಕೆ ಬಂದರೂ ಸಹ ಯಾರೂ ಮನೆಯಿಂದ ಹೊರ ಬರಲಿಲ್ಲ. ಪೊಲೀಸರು ಮನೆಗಳ ಬಾಗಿಲನ್ನು ತಟ್ಟಿ ಎಬ್ಬಿಸಿದರೂ ಸಹ ಗ್ರಾಮಸ್ಥರು ಸ್ಪಂದಿಸಲಿಲ್ಲ’ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಹೆಚ್ಚುವರಿ ಎಸ್ಪಿ ಸುಭಾಷ್‌ಗುಡಿಮನಿ ಸುದ್ದಿಗಾರರಿಗೆ ತಿಳಿಸಿದರು.

ಆನೇಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಕೊಲೆಯಾದ ದೇವರಾಜು ಅಂತ್ಯಕ್ರಿಯೆ ಅತ್ತಿಬೆಲೆ ಸಮೀಪದ ದಾಸನಪುರದಲ್ಲಿ ಹಾಗೂ ಚಾಲಕ ಮಂಜುನಾಥ್ ಅಂತ್ಯಕ್ರಿಯೆ ಆನೇಕಲ್ ಸಮೀಪದ ಸುಣವಾರದ ಬಳಿ ಸಂಜೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.