ADVERTISEMENT

ಜೆಡಿಎಸ್‌ ಸೇರಿದ ಎಚ್‌.ವಿಶ್ವನಾಥ್‌

ನನಗೆ ಮುಖ್ಯಮಂತ್ರಿ ಆಗೋ ಕನಸು ಇಲ್ಲ: ಎಚ್‌.ಡಿ. ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2017, 19:30 IST
Last Updated 4 ಜುಲೈ 2017, 19:30 IST
ಜೆಡಿಎಸ್‌ ಸೇರಿದ ಎಚ್‌.ವಿಶ್ವನಾಥ್‌ ಅವರಿಗೆ ಪಕ್ಷದ ಧ್ವಜ ನೀಡುತ್ತಿರುವ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ.  ಮಾಜಿ ಶಾಸಕರಾದ ಎಚ್‌.ಡಿ.ಬಸವರಾಜ್‌, ಬಸವರಾಜ ಕುನ್ನೂರ್ ಮತ್ತು  ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಇದ್ದರು
ಜೆಡಿಎಸ್‌ ಸೇರಿದ ಎಚ್‌.ವಿಶ್ವನಾಥ್‌ ಅವರಿಗೆ ಪಕ್ಷದ ಧ್ವಜ ನೀಡುತ್ತಿರುವ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ. ಮಾಜಿ ಶಾಸಕರಾದ ಎಚ್‌.ಡಿ.ಬಸವರಾಜ್‌, ಬಸವರಾಜ ಕುನ್ನೂರ್ ಮತ್ತು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಇದ್ದರು   

ಬೆಂಗಳೂರು: ಕಾಂಗ್ರೆಸ್‌ ತ್ಯಜಿಸಿದ್ದ ಲೋಕಸಭೆ ಮಾಜಿ ಸದಸ್ಯ ಎಚ್‌. ವಿಶ್ವನಾಥ್‌ ಮಂಗಳವಾರ ಜೆಡಿಎಸ್‌ಗೆ  ಸೇರ್ಪಡೆಗೊಂಡರು.

ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಮತ್ತು ರಾಜ್ಯ ಘಟಕದ ಅಧ್ಯಕ್ಷ  ಎಚ್‌.ಡಿ. ಕುಮಾರಸ್ವಾಮಿ     ಇಲ್ಲಿಯ ಜೆ.ಪಿ.ಭವನದಲ್ಲಿ ವಿಶ್ವನಾಥ್‌ ಅವರಿಗೆ ಪಕ್ಷದ ಬಾವುಟ ನೀಡಿ  ಬರ ಮಾಡಿಕೊಂಡರು.

ಈ ಸಂದರ್ಭದಲ್ಲಿ ಭಾವುಕರಾಗಿ ಮಾತನಾಡಿದ ವಿಶ್ವನಾಥ್‌, ‘ಜೆಡಿಎಸ್‌ ಸೇರಿರುವುದು ಯೋಗಾಯೋಗ.  ನಾವು ಎಲ್ಲೆಲ್ಲಿ ಇರುತ್ತೇವೋ ಅಲ್ಲಿ ಇರುವುದು ಯೋಗವೆಂದು ಭಾವಿಸಿ ಎಲ್ಲರೊಡನೆ ಒಂದಾಗಿ ಕೆಲಸ ಮಾಡಬೇಕು.  ಶಾಸ್ತ್ರಗಳೂ ಇದೇ ಮಾತುಗಳನ್ನು  ಹೇಳಿವೆ. ಅದನ್ನು ಚಾಚೂ ತಪ್ಪದೆ ಪಾಲಿಸುತ್ತೇನೆ’ ಎಂದರು.

ADVERTISEMENT

‘ರಾಜಕಾರಣ ನಿಂತ ನೀರಲ್ಲ. ಜಡವಲ್ಲ ಅದು ಜಂಗಮ. ಆದ್ದರಿಂದಲೇ ಜೆಡಿಎಸ್‌  ಸೇರಿದ್ದೇನೆ’ ಎಂದು ಅವರು ಹೇಳಿದರು.

ಸಿದ್ದರಾಮಯ್ಯ ವಿರುದ್ಧ ಯಾವುದೇ ವೈಯಕ್ತಿಕ ಟೀಕೆಗಳನ್ನು ಮಾಡದ ವಿಶ್ವನಾಥ್, ‘ರಾಜಕಾರಣ, ಪಕ್ಷ, ಪರಿಸ್ಥಿತಿ, ಸನ್ನಿವೇಶ ಇವುಗಳನ್ನು ಪ್ರಶ್ನೆ ಮಾಡುತ್ತಾ ಹೋದರೆ ಲಾಭವಿಲ್ಲ. ಈಗ ಹೊಸ ಮನೆಗೆ ಪದಾರ್ಪಣೆ ಮಾಡಿದ್ದೇನೆ. 40 ವರ್ಷ ಕಾಂಗ್ರೆಸ್‌ನಲ್ಲಿ ಕಲಿತ ವಿದ್ಯೆಯನ್ನು  ಜೆಡಿಎಸ್‌ನಲ್ಲಿ ಬಳಸುತ್ತೇನೆ. ಅಲ್ಲಿ ಪಕ್ಷಕ್ಕೆ ಎಷ್ಟು ನಿಷ್ಠನಾಗಿದ್ದೆನೋ ಇಲ್ಲೂ ಅಷ್ಟೇ ನಿಷ್ಠನಾಗಿ ದುಡಿಯುತ್ತೇನೆ’ ಎಂದು ಹೇಳಿದರು.

ಜೆಡಿಎಸ್‌ ಸೇರಿದ ಇತರ ನಾಯಕರು: ವಿರಾಜಪೇಟೆ ಮಾಜಿ ಶಾಸಕ ಎಚ್‌.ಡಿ.ಬಸವರಾಜ್‌, ತೇರದಾಳದ  ಮಾಜಿ ಶಾಸಕ ಬಸವರಾಜ ಕನ್ನೂರು, ಕೆಪಿಸಿಸಿ ಸದಸ್ಯ ಎ.ಎಸ್‌.ಚನ್ನಬಸಪ್ಪ ಜೆಡಿಎಸ್‌ ಸೇರಿದ ಪ್ರಮುಖರು.

ಮುಖ್ಯಮಂತ್ರಿ ಆಗೋ  ಕನಸು ಇಲ್ಲ: ಇದೇ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ, ‘ನಾನು ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿಲ್ಲ. ಮುಖ್ಯಮಂತ್ರಿ ಆಗದೇ ಇದ್ದರೆ ತಲೆ ಮೇಲೆ ಚಪ್ಪಡಿ ಬೀಳುವುದಿಲ್ಲ’ ಎಂದು  ಹೇಳಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಕುರಿತು ವ್ಯಂಗ್ಯದ ಮಾತುಗಳನ್ನು ಆಡಿದ್ದಾರೆ. ನಡೆದು ಬಂದ ಹಾದಿಯನ್ನು ಮರೆತಿರುವ ಅವರು ಅಹಂಕಾರದ ಮಾತುಗಳನ್ನು ಆಡುತ್ತಿದ್ದಾರೆ’ ಎಂದು ಹರಿಹಾಯ್ದರು.

‘ನನಗೆ ಅಧಿಕಾರ ಸಿಗಬೇಕು ಎನ್ನುವುದಕ್ಕಿಂತ  ಎರಡೂ ರಾಷ್ಟ್ರೀಯ ಪಕ್ಷಗಳಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ತಪ್ಪಬೇಕು. ಇದಕ್ಕಾಗಿ  ಜೆಡಿಎಸ್‌ ರಾಜ್ಯಕ್ಕೆ  ಅನಿವಾರ್ಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.