ADVERTISEMENT

ಜೆಸಿಂತಾಗೆ ಕಣ್ಣೀರ ವಿದಾಯ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2012, 19:59 IST
Last Updated 17 ಡಿಸೆಂಬರ್ 2012, 19:59 IST
ಜೆಸಿಂತಾಗೆ ಕಣ್ಣೀರ ವಿದಾಯ
ಜೆಸಿಂತಾಗೆ ಕಣ್ಣೀರ ವಿದಾಯ   

ಉಡುಪಿ: ಲಂಡನ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ನರ್ಸ್ ಜೆಸಿಂತಾ ಅವರ ಅಂತ್ಯಕ್ರಿಯೆ ಉಡುಪಿ ಸಮೀಪ ಶಿರ್ವದ ಆರೋಗ್ಯ ಮಾತಾ ಚರ್ಚ್‌ನ ರುದ್ರಭೂಮಿಯಲ್ಲಿ ಸಕಲ ವಿಧಿ- ವಿಧಾನಗಳೊಂದಿಗೆ ಸೋಮವಾರ ಸಂಜೆ ನಡೆಯಿತು. ಜೆಸಿಂತಾ ಅವರ ಪತಿ ಬೆನೆಡಿಕ್ಟ್ ಬರ್ಬೋಜಾ, ಮಗ ಜುನಾಲ್, ಮಗಳು ಲಿಶಾ ಹಾಗೂ ಅಪಾರ ಬಂಧು ಮಿತ್ರರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಲಂಡನ್‌ನಿಂದ ಮುಂಬೈ ಮಾರ್ಗವಾಗಿ ಮಂಗಳೂರಿಗೆ ತಂದಿದ್ದ ಜೆಸಿಂತಾ ಅವರ ಮೃತದೇಹವನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಇಡಲಾಗಿತ್ತು. ಸೋಮವಾರ ಮಧ್ಯಾಹ್ನ 12.15ರ ಸುಮಾರಿಗೆ ಮೃತದೇಹವನ್ನು ಜೆಸಿಂತಾ ಅವರ ಪತಿ ಬೆನೆಡಿಕ್ಟ್ ಬರ್ಬೋಜಾ ಅವರ ಸೊರ್ಕಳದ ಮನೆಗೆ ತರಲಾಯಿತು. ಕುಟುಂಬ ಸದಸ್ಯರು ಅಂತಿಮ ದರ್ಶನ ಪಡೆದರು. ಸಾಮೂಹಿಕ ಪ್ರಾರ್ಥನೆಯೂ ನಡೆಯಿತು.

ಮಧ್ಯಾಹ್ನ 3.45ಕ್ಕೆ ಶಿರ್ವದ ಚರ್ಚ್‌ನಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಯಿತು. ಶಿರ್ವ ಊರಿನ ಜನ ಮತ್ತು ಬಂಧು- ಮಿತ್ರರು ನೂರಾರು ಸಂಖ್ಯೆಯಲ್ಲಿ ಅಂತಿಮ ದರ್ಶನ ಪಡೆದರು.

ಉಡುಪಿ ಧರ್ಮ ಪ್ರಾಂತ್ಯದ ಅಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರು ಜೆಸಿಂತಾ ಅವರ ಆತ್ಮಕ್ಕೆ ಶಾಂತಿ ಕೋರಿ ಬಲಿ ಪೂಜೆ ನಡೆಸಿದರು. ಸಾಮೂಹಿಕ ಪ್ರಾರ್ಥನೆಯಲ್ಲಿ ನೂರಾರು ಮಂದಿ ಪಾಲ್ಗೊಂಡರು. ಆರೋಗ್ಯ ಮಾತಾ ಚರ್ಚ್‌ನ ರುದ್ರಭೂಮಿಯಲ್ಲಿ ಸಂಜೆ 5.10ಕ್ಕೆ ಸರಿಯಾಗಿ ಸಕಲ ವಿಧಿ ವಿಧಾನಗಳೊಂದಿಗೆ ಸಂಸ್ಕಾರ ಮಾಡಲಾಯಿತು. ಶಿರ್ವ ಚರ್ಚ್ ಧರ್ಮಗುರು ರೆ.ಫಾ. ಸ್ಟ್ಯಾನಿ ತಾವ್ರೊ ಭಾಗವಹಿಸಿದ್ದರು. 

ಕಣ್ಣೀರಿಟ್ಟ ಮಕ್ಕಳು: ಸೊರ್ಕಳದ ಮನೆಯಿಂದ ಪಾರ್ಥಿವ ಶರೀರವನ್ನು ಚರ್ಚ್‌ಗೆ ಕೊಂಡೊಯ್ಯಲು ಆಂಬುಲೆನ್ಸ್‌ನಲ್ಲಿ ಇಡುವ ಸಂದರ್ಭದಲ್ಲಿ ಜುನಾಲ್ ಮತ್ತು ಲಿಶಾ ಕಣ್ಣೀರಿಟ್ಟರು. ಅಂತಿಮ ಸಂಸ್ಕಾರದ ವೇಳೆಯೂ ಅವರಿಗೆ ದುಃಖ ತಡೆಯಲಾಗಲಿಲ್ಲ. ಪತಿ ಬೆನೆಡಿಕ್ಟ್ ಬರ್ಬೋಜಾ ಅವರು ಮಾತ್ರ ಮೌನವಾಗಿದ್ದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಕಾಂಗ್ರೆಸ್ ಮುಖಂಡರಾದ ಜನಾರ್ದನ ಪೂಜಾರಿ, ಐವನ್ ಡಿಸೋಜಾ, ಎಂ.ಎ. ಗಫೂರ್, ಮಾಜಿ ಶಾಸಕ ಯು.ಆರ್. ಸಭಾಪತಿ, ಬಿಜೆಪಿ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ. ಉದಯ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಮಾಧ್ಯಮದವರ ದಂಡು: ಬೆನೆಡಿಕ್ಟ್ ಅವರ ಸೊರ್ಕಳದ ಮನೆಯ ಎದುರು ರಾಜ್ಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾಧ್ಯಮಗಳ ನೂರಕ್ಕೂ ಹೆಚ್ಚಿನ ಪ್ರತಿನಿಧಿಗಳು ಸೋಮವಾರ ಜಮಾಯಿಸಿದ್ದರು. ಮಧ್ಯಾಹ್ನ ಮನೆಯೊಳಗೆ ಹೋಗಲು ಯತ್ನಿಸಿದ ಮಾಧ್ಯಮ ಪ್ರತಿನಿಧಿಗಳನ್ನು ಪೊಲೀಸರು ತಡೆದರು. ಈ ಸಂದರ್ಭದಲ್ಲಿ ಪೊಲೀಸ್ ಮತ್ತು ಮಾಧ್ಯಮದವರ ಮಧ್ಯೆ ಮಾತಿಕ ಚಕಮಕಿ ನಡೆಯಿತು.

`ಬೆನೆಡಿಕ್ಟ್ ಅವರ ಕುಟುಂಬದವರು ಯಾರನ್ನೂ ಮನೆಯೊಳಗೆ ಬಿಡಬಾರದು ಎಂದು ಹೇಳಿದ್ದಾರೆ. ಛಾಯಾಗ್ರಹಣ ಮಾಡದಂತೆಯೂ ತಡೆಯಿರಿ ಎಂದು ಅವರು ಸೂಚನೆ ನೀಡಿದ್ದಾರೆ' ಎಂದು ಪೊಲೀಸರು ಸ್ಪಷ್ಟನೆ ನೀಡಿದರು. ಅಂತ್ಯಕ್ರಿಯೆ ಸಂದರ್ಭದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ನಂತರ ಪತ್ರಿಕಾಗೋಷ್ಠಿಯಲ್ಲಿ ಬೆನೆಡಿಕ್ಟ್ ಮತ್ತು ಅವರ ಸ್ನೇಹಿತರಾದ ಸ್ಟೀವನ್ ಅಲ್ಮೇಡಾ ಮತ್ತು ರಾಕ್ ಡಿಕುನ್ನಾ ಮಾತನಾಡಿದರು.

ಬೆನೆಡಿಕ್ಟ್ ಅವರ ಪರವಾಗಿ ಹೆಚ್ಚಿನ ಪ್ರಶ್ನೆಗಳಿಗೆ ಸ್ಟೀವನ್ ಅವರೇ ಉತ್ತರ ನೀಡಿದರು. ಪೊಲೀಸರು ಮಾರ್ಚ್ 26ರಂದು ತನಿಖಾ ವರದಿ ನೀಡುವ ನಿರೀಕ್ಷೆ ಇದೆ. ಆ ನಂತರ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. ಲಂಡನ್ ಪೊಲೀಸರು ನಿಷ್ಪಕ್ಷಪಾತವಾದ ತನಿಖೆ ಮಾಡುವ ಭರವಸೆ ನೀಡಿದ್ದಾರೆ. ತನಿಖೆ ನಡೆಯುವ ಸಂದರ್ಭದಲ್ಲಿ ಮಾತನಾಡುವುದು ಸರಿಯಲ್ಲ ಎಂದು ಅವರು ಹೇಳಿದರು.

ಕೃತಜ್ಞತೆ : `ನಾವು ಮತ್ತೆ ಇಂಗ್ಲೆಂಡ್‌ಗೆ ಮರಳುತ್ತೇವೆ. ಆದರೆ ಯಾವಾಗ ಹೋಗುವುದು ಎಂದು ಇನ್ನೂ ನಿರ್ಧಾರ ಮಾಡಿಲ್ಲ. ಮಗ ಜುನಾಲ್ ಸಹ ಅಲ್ಲಿಯೇ ಫುಟ್‌ಬಾಲ್ ರೆಫ್ರಿಯಾಗಿ ಕೆಲಸ ಮುಂದುವರಿಸಲಿದ್ದಾನೆ. ಮಗಳೂ ವಿದ್ಯಾಭ್ಯಾಸದಲ್ಲಿ ತೊಡಗಲಿದ್ದಾಳೆ' ಎಂದು ಬೆನೆಡಿಕ್ಟ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.