ADVERTISEMENT

ಜೈಲಲ್ಲಿ ಪರಮೇಶ್ವರ್‌ ಸಂಗೀತ ಕಛೇರಿ!

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2015, 19:35 IST
Last Updated 4 ಡಿಸೆಂಬರ್ 2015, 19:35 IST

ಮೈಸೂರು: ಕೈದಿಗಳ ಗಾಯನಕ್ಕೆ ಗೃಹ ಸಚಿವರು ತಲೆಬಾಗಿದರೆ, ಗೃಹ ಸಚಿವರ ಹಾಡಿಗೆ ಕೈದಿಗಳು ಪುಳಕಿತರಾದ ವಿಶೇಷ ಪ್ರಸಂಗಕ್ಕೆ ಇಲ್ಲಿನ ಕೇಂದ್ರ ಕಾರಾಗೃಹ ಶುಕ್ರವಾರ ಸಾಕ್ಷಿಯಾಯಿತು.

ಕಾರಾಗೃಹ ಇಲಾಖೆಯ ವೀಕ್ಷಕ ಪ್ರಶಿಕ್ಷಣಾರ್ಥಿಗಳ 43ನೇ ತಂಡದ ನಿರ್ಗಮನ ಪಥಸಂಚಲನದ ಬಳಿಕ ಕೇಂದ್ರ ಕಾರಾಗೃಹ ವೀಕ್ಷಣೆಗೆ ತೆರಳಿದ ಗೃಹ ಸಚಿವ ಡಾ.ಜಿ. ಪರಮೇಶ್ವರ್‌, ಕನ್ನಡ ಗೀತೆಯೊಂದನ್ನು ಹಾಡಿ ಕೈದಿಗಳನ್ನು ರಂಜಿಸಿದರು.

ಅವರು ಕಾರಾಗೃಹ ಪ್ರವೇಶಿಸುತ್ತಿದ್ದಂತೆ ‘ಪರಿವರ್ತನಾ ಮೆಲೋಡಿಸ್’ ಆರ್ಕೆಸ್ಟ್ರಾ ತಂಡದ ಕೈದಿಗಳು ಚಲನ ಚಿತ್ರಗೀತೆ ಹಾಡಲು ಶುರು ಮಾಡಿದರು. ಸುಶ್ರಾವ್ಯವಾಗಿ ಹೊರಹೊಮ್ಮುತ್ತಿದ್ದ ಹಿನ್ನೆಲೆ ಸಂಗೀತಕ್ಕೆ ಕೈದಿ ಮಹೇಶ್‌ ಅವರ ಕಂಚಿನ ಕಂಠ ಸಾಥ್‌ ನೀಡಿತು. ಹಾಡು ಮುಗಿಯುವ ಹಂತಕ್ಕೆ ಬರುತ್ತಿದ್ದಂತೆ ಗೃಹ ಸಚಿವರು ಮೈಕ್‌ ಹಿಡಿದು ಧ್ವನಿಗೂಡಿಸಿದರು.

‘ಕರುನಾಡ ತಾಯಿ ಸದಾ ಚಿನ್ಮಯಿ.. ಈ ಪುಣ್ಯ ಭೂಮಿ ನಮ್ಮ ದೇವಾಲಯ...’ ಎಂಬ ಹಾಡು ಹಾಡಿದರು.
ಪರಮೇಶ್ವರ್ ಅವರು ಅನಿರೀಕ್ಷಿತವಾಗಿ ಧ್ವನಿಗೂಡಿಸಿದ್ದನ್ನು ಕಂಡ ಕೈದಿಗಳು ಪುಳಕಿತರಾದರು. ಆಗ ಮತ್ತಷ್ಟು ಹುಮ್ಮಸ್ಸಿನಿಂದ ಸಂಗೀತ ಹೊರಹೊಮ್ಮಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.