ADVERTISEMENT

ಜ್ಞಾನಭಾರತಿ ಅತ್ಯಾಚಾರ ಪ್ರಕರಣ

ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2013, 19:59 IST
Last Updated 10 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ಜ್ಞಾನಭಾರತಿ ಆವರಣ ದಲ್ಲಿ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ನೇಪಾಳ ಮೂಲದ ವಿದ್ಯಾರ್ಥಿನಿ ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣದ ಮತ್ತೊಬ್ಬ ಆರೋಪಿ ರಾಜ ಅಲಿ ಯಸ್‌ ಮುತ್ತುರಾಜ (24) ಎಂಬಾತ ನನ್ನು ಜ್ಞಾನಭಾರತಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

‘ಅತ್ಯಾಚಾರ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿದ್ದ ರಾಮ ನಗರ ತಾಲ್ಲೂಕಿನ ಕೈಲಂಚ ಬಳಿಯ ಮೆಟಾರಿದೊಡ್ಡಿ ಗ್ರಾಮದ ರಾಜ, ಒಂಬತ್ತು ತಿಂಗಳಿನಿಂದ ತಲೆ ಮರೆಸಿ­ಕೊಂಡಿದ್ದ. ಘಟನೆ ನಂತರ ಆತ ಆನೇಕಲ್‌ ತಾಲ್ಲೂಕಿನ ಕೆಬ್ಬೆದೊಡ್ಡಿ ಗ್ರಾಮದಲ್ಲಿ ಅಡುಗೆ ಕೆಲಸ ಮಾಡಿ ಕೊಂಡಿದ್ದ’ ಎಂದು ನಗರ ಪೊಲೀಸ್ ಕಮಿಷನರ್‌ ರಾಘವೇಂದ್ರ ಔರಾದಕರ್‌ ಮಂಗಳವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

‘ಗಣೇಶ ಹಬ್ಬದ ದಿನದಂದು ಆತ ಪತ್ನಿಯ ತವರೂರು ಹಾರೋಹಳ್ಳಿ ಸಮೀಪದ ಇಳಿಗರಪಾಳ್ಯಕ್ಕೆ ಬರಬಹು­ದೆಂಬ ಮಾಹಿತಿ ಇತ್ತು. ಆದರೆ, ಆತ ಇಳಿಗರಪಾಳ್ಯಕ್ಕೆ ಬರದೆ, ಕೆಬ್ಬೆದೊಡ್ಡಿ ಗ್ರಾಮದಲ್ಲೇ ಉಳಿದುಕೊಂಡಿದ್ದ. ಮಂಗಳ­­ವಾರ ಬೆಳಗಿನ ಜಾವ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಲಾಗಿದೆ’ ಎಂದರು.

2012ರ ಅ.12ರ ರಾತ್ರಿ ಜ್ಞಾನಭಾರತಿ ಆವರಣದಲ್ಲಿ ಗಂಧದ­ಮರ ಕಳವು ಮಾಡಲು ಬಂದಿದ್ದ 8 ಮಂದಿ ಆರೋಪಿಗಳು, ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ ಯೂನಿ­ವರ್ಸಿಟಿಯ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ್ದರು. ಘಟನೆ ನಡೆದ ಒಂದು ವಾರದಲ್ಲಿ ಒಬ್ಬ ಬಾಲ ಆರೋಪಿ ಸೇರಿದಂತೆ 7 ಮಂದಿಯನ್ನು ಪೊಲೀಸರು ಬಂಧಿಸಿದ್ದರು.

ಇದೇ ತಿಂಗಳ 6ರಂದು ನಗರದ 9ನೇ ಎಸಿಎಂಎಂ ನ್ಯಾಯಾಲಯವು ಆರು ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಆರೋಪಿಗಳ ಪತ್ತೆ ಮಾಡಿದ ಸಿಬ್ಬಂದಿ ಹಾಗೂ ಸರ್ಕಾರಿ ಅಭಿಯೋಜಕ ಚಂದ್ರಶೇಖರ್‌ ಹಿರೇಮಠ್ ಅವರಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಲಾಲ್‌ ರೋಕುಮಾ ಪಚಾವೊ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದರು.

‘ಕೃತ್ಯದ ಬಗ್ಗೆ ಪಶ್ಚಾತ್ತಾಪವಿಲ್ಲ’
‘ನಾವು ಎಂಟು ಮಂದಿ ಅತ್ಯಾಚಾರ ಮಾಡಬೇಕೆಂದು ನಿರ್ಧರಿಸಿ ಕೊಂಡಿದ್ದೆವು. ಹೀಗಾಗಿ ಕೃತ್ಯ ಎಸಗಿದ ಬಗ್ಗೆ ನನಗೆ ಯಾವುದೇ ಪಶ್ಚಾತ್ತಾಪವಿಲ್ಲ’ ನಗರ ಪೊಲೀಸ್ ಕಮಿಷನರ್‌ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯ ನಂತರ ಯಾವುದೇ ಅಳುಕಿಲ್ಲದೇ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಪಿ ರಾಜ ಹೇಳಿದ ಮಾತುಗಳಿವು. ‘ಕೃತ್ಯದ ಬಗ್ಗೆ ನನಗೆ ಯಾವುದೇ ಅಳುಕಿಲ್ಲ. ಅಂದುಕೊಂಡ ಕೆಲಸವನ್ನು ನಾವು ಮಾಡಿ ಮುಗಿಸಿದೆವು’ ಎಂದು ಆತ ಹೇಳಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT