ADVERTISEMENT

ಟಿ.ಜೆ. ಅಬ್ರಹಾಂ ಕ್ಷಮೆ ಕೇಳಬೇಕು ಪ್ರಮೋದ್ ಮಧ್ವರಾಜ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2018, 19:30 IST
Last Updated 22 ಮಾರ್ಚ್ 2018, 19:30 IST
ಪ್ರಮೋದ್ ಮಧ್ವರಾಜ್
ಪ್ರಮೋದ್ ಮಧ್ವರಾಜ್   

ಉಡುಪಿ: ‘ಬ್ಯಾಂಕಿಗೆ ವಂಚನೆ ಮಾಡಿರುವುದಾಗಿ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿರುವ ಟಿ.ಜೆ. ಅಬ್ರಹಾಂ ಅವರು ಮೂರು ದಿನಗಳ ಒಳಗೆ ಬಹಿರಂಗವಾಗಿ ಕ್ಷಮೆ ಕೇಳಬೇಕು, ಇಲ್ಲದಿದ್ದರೆ ₹10 ಕೋಟಿ ಮೊತ್ತಕ್ಕೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ’ ಎಂದು ಕ್ರೀಡೆ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ನಾನು ಕಷ್ಟಪಟ್ಟು ಗಳಿಸಿರುವ ಹೆಸರನ್ನು ಒಂದು ಆರೋಪದ ಮೂಲಕ ಕೆಡಿಸುವ ಪ್ರಯತ್ನವನ್ನು ಮಾಡಿದ್ದಾರೆ. ಇದರಿಂದ ನನ್ನ ವರ್ಚಸ್ಸಿಗೆ ಧಕ್ಕೆಯಾಗಿದೆ. ಆದ್ದರಿಂದ ಮೊಕದ್ದಮೆ ಹೂಡುತ್ತೇನೆ. ಚುನಾವಣೆಗೆ ಸ್ಪರ್ಧಿಸುವಾಗ ನನ್ನ ಆಸ್ತಿ ಮತ್ತು ಸಾಲದ ವಿವರವನ್ನು ಚುನಾವಣಾ ಆಯೋಗಕ್ಕೆ ನೀಡುತ್ತೇನೆ’ ಎಂದರು.

‘ಎಷ್ಟು ಸಾಲ ಪಡೆದಿದ್ದೇನೋ ಅದಕ್ಕಿಂತ ಹೆಚ್ಚಿನ ಮೊತ್ತದ ಆಸ್ತಿಯ ಭದ್ರತೆಯನ್ನು ನೀಡಿದ್ದೇನೆ. ಅವರು ಕೇವಲ ಒಂದು ಆಸ್ತಿಯ ವಿವರವನ್ನು ಮಾತ್ರ ಹೇಳಿ
ದ್ದಾರೆ. ನಾನು ಹುಟ್ಟುವ ಮೊದಲೇ ನಮ್ಮ ಫಿಶ್‌ಮಿಲ್ ಇತ್ತು. ಅದನ್ನು ನಡೆಸಲು ಬೇಕಿರುವ ಎಲ್ಲ ಪರವಾನಗಿಗಳೂ ನನ್ನಲ್ಲಿ ಇವೆ. ಪೆಟ್ರೋಲ್ ಬಂಕ್ 1974ರಿಂದಲೂ ಇದೆ ಮತ್ತು ಅದು ತಾಯಿಯ ಹೆಸರಿನಲ್ಲಿದೆ. ಅದಕ್ಕೆ ಕಾನೂನಿನ ತೊಡಕು ಇದ್ದರೆ ಅದನ್ನು ಕಾನೂನಿನ ಮೂಲಕವೇ ಸರಿಪಡಿಸಲಾಗುವುದು’ ಎಂದರು.

ADVERTISEMENT

‘ನನ್ನ ವಿರುದ್ಧ ಬ್ಯಾಂಕ್ ವಂಚನೆ ಆರೋಪ ಮಾಡಿರುವುದರ ಹಿಂದೆ ಬಿಜೆಪಿಯ ಇಬ್ಬರು ಮಾಜಿ ಜನಪ್ರತಿನಿಧಿ ಗಳ ಕೈವಾಡ ಇದೆ. ಅದರಲ್ಲಿ ಒಬ್ಬರು ನಾನು ಬಿಜೆಪಿಗೆ ಹೋಗದಂತೆ ತಡೆವೊಡ್ಡಿದವರು ಇದ್ದಾರೆ ಎಂದರು.

ನಂಬರ್ ಒನ್ ಶಾಸಕ, ಅದಕ್ಕೇ ಬೇಡಿಕೆ ಇದೆ

‘ನಾನು ರಾಜ್ಯದಲ್ಲಿಯೇ ನಂಬರ್ ಒನ್ ಶಾಸಕನಾದ ಕಾರಣ ಬೇಡಿಕೆ ಇದೆ. ಅದೇ ಕಾರಣಕ್ಕೆ ಬೇರೆ ಪಕ್ಷಕ್ಕೆ ಹೋಗುತ್ತಾರೆ ಎಂಬ ಸುದ್ದಿಯಾಗುತ್ತದೆ’ ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

‘ಕಾಂಗ್ರೆಸ್‌ನಲ್ಲಿ ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಇಲ್ಲಿ ಯಾವುದೇ ತೊಂದರೆ ಇಲ್ಲ. ಈಗಾಗಲೇ ₹1 ಲಕ್ಷ ನೀಡಿ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದೇನೆ. ಟಿಕೆಟ್ ಸಿಕ್ಕರೆ ಸ್ಪರ್ಧೆ ಮಾಡುತ್ತೇನೆ. ಆದ್ದರಿಂದ ಬಿಜೆಪಿಗೆ ಹೋಗುವ ಪ್ರಶ್ನೆ ಈಗ ಉದ್ಭವಿಸದು’ ಎಂದರು.

‘ಪ್ರಮೋದ್ ಮಧ್ವರಾಜ್ ಅವರಿಗೆ ಬಿಜೆಪಿಯವರು ಹಿಂಸೆ ನೀಡುತ್ತಿದ್ದಾರೆ’ ಎಂಬ ಮುಖ್ಯಮಂತ್ರಿ ಅವರ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಯಾವ ಅರ್ಥದಲ್ಲಿ ಸಿಎಂ ಹಾಗೆ ಹೇಳಿದ್ದಾರೋ ನನಗೆ ಗೊತ್ತಿಲ್ಲ. ಅದಕ್ಕೆ ಸ್ಪಷ್ಟನೆಯನ್ನು ಅವರೇ ನೀಡಬೇಕು. ನನ್ನಿಂದಲೇ ಅವರಿಗೆ ಹಿಂಸೆ ಆಗುತ್ತಿದೆಯೋ ಗೊತ್ತಿಲ್ಲ. ಮುಖ್ಯಮಂತ್ರಿ ಅವರ ಬಳಿ ಗುಪ್ತಚರ ಇಲಾಖೆ ಇದೆ. ಆದ್ದರಿಂದ ನನಗಿಂತ ಹೆಚ್ಚು ಮಾಹಿತಿ ಅವರಿಗೆ ಇದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.