ADVERTISEMENT

ಟಿಪ್ಪು ಸ್ಮರಿಸಿದ ರಾಮನಾಥ ಕೋವಿಂದ್‌

ವಿಧಾನಸೌಧ ವಜ್ರ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2017, 7:25 IST
Last Updated 25 ಅಕ್ಟೋಬರ್ 2017, 7:25 IST
ರಾಷ್ಟ್ರಪತಿ ರಾಮನಾಥ ಕೋವಿಂದ್‌
ರಾಷ್ಟ್ರಪತಿ ರಾಮನಾಥ ಕೋವಿಂದ್‌   

ಬೆಂಗಳೂರು: ವಿಧಾನಸೌಧದ ವಜ್ರ ಮಹೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಷಣ ಮಾಡಿದ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಟಿಪ್ಪು ಸುಲ್ತಾನ್‌ ಸ್ಮರಿಸಿದ್ದಾರೆ.

ಬುಧವಾರ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಕೋವಿಂದ್‌, ‘ಟಿ‌ಪ್ಪು ಅಪ್ರತಿಮ ವೀರನಾಗಿದ್ದ. ಸೇನೆಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡಿದ್ದ’ ಎಂದು ಹೇಳಿದ್ದಾರೆ.

‘ಬ್ರಿಟಿಷರ ವಿರುದ್ದ ಹೋರಾಡಿ ವೀರಮರಣವನ್ನು ಅಪ್ಪಿದ ಟಿಪ್ಪು ಸುಲ್ತಾನ್ ಅವರು ನಾಡಿನ ಅಭಿವೃದ್ಧಿಯ ಪಥ ಬದಲಿಸಿ ಮುಂಚೂಣಿ ನೇತಾರ. ಯುದ್ಧಭೂಮಿಯಲ್ಲಿ ಮೈಸೂರು ರಾಕೆಟ್ ಬಳಸಿದ ಅಪ್ರತಿಮ ನಾಯಕ. ಟಿಪ್ಪು ರೂಪಿಸಿದ್ದ ರಾಕೆಟ್ ತಂತ್ರಜ್ಞಾನವನ್ನು ಯುರೋಪಿಯನ್ನರು ನಂತರ ಬಳಸಿಕೊಂಡರು’ ಎಂದು ಕೋವಿಂದ್ ಹೇಳಿದರು.

ಕೋವಿಂದ್‌ ಅವರು ಟಿಪ್ಪು ಬಗ್ಗೆ ಮಾತನಾಡುತ್ತಿದ್ದಂತೆ ಕಾಂಗ್ರೆಸ್ ಶಾಸಕರು ಮೇಜು ತಟ್ಟಿ ತಮ್ಮ ಹರ್ಷ ವ್ಯಕ್ತಪಡಿಸಿದರು. ಟಿಪ್ಪು ಜಯಂತಿಯನ್ನು ವಿರೋಧಿಸುತ್ತಿರುವ ಬಿಜೆಪಿ ಶಾಸಕರು ಈ ವೇಳೆ ಇರುಸುಮುರುಸು ಅನುಭವಿಸಿದರು.

‘ಕರ್ನಾಟಕವು ಭಾರತದ ಆರ್ಥಿಕತೆಯ ಎಂಜಿನ್ ಇದ್ದಂತೆ. ಸಾಂಸ್ಕೃತಿಕ ಮತ್ತು ಭಾಷಿಕ ವೈಶಿಷ್ಟ್ಯವನ್ನು ಉಳಿಸಿಕೊಂಡೇ ಇಡೀ ದೇಶದ ಯುವಕರನ್ನು ತನ್ನತ್ತ ಸೆಳೆಯುವ ಮೂಲಕ ಕರ್ನಾಟಕ ಮಿನಿ ಇಂಡಿಯಾ ಆಗಿದೆ. ಕರ್ನಾಟಕದ ಕನಸು ಇಲ್ಲಿಗೆ ಮಾತ್ರ ಸೀಮಿತವಲ್ಲ, ಇಲ್ಲಿನವರ ಕನಸು ಇಡೀ ಇಂಡಿಯಾದ ಅಭಿವೃದ್ಧಿ ಕಡೆಗೆ ಇರಲಿ’ ಎಂದು ಕೋವಿಂದ್ ನುಡಿದರು.

‘ಜಾಗತಿಕ ಆರ್ಥಿಕತೆ ಮತ್ತು ಅಂತರರಾಷ್ಟ್ರೀಯ ವ್ಯವಸ್ಥೆಗೆ ಹೆಚ್ಚು ಮಹತ್ವ ಇರುವ ಈ ಕಾಲದಲ್ಲಿ ಭಾರತ ಪ್ರಕಾಶಮಾನವಾಗಬೇಕಾದರೆ ಮತ್ತೊಮ್ಮೆ ನಾವು ಕರ್ನಾಟಕದ ಕಡೆಗೆ ನೋಡಬೇಕಾದ ಸಂದರ್ಭ ಇದಾಗಿದೆ. ತಂತ್ರಜ್ಞಾನ ಮತ್ತು ಏಕತೆಯ ಉದ್ದೇಶ ನಮ್ಮನ್ನು ಪ್ರಗತಿಯತ್ತ ಸಾಗಿಸುವುದೇ ಆಗಿದೆ. ಕರ್ನಾಟಕದ ಉಭಯ ಸದನಗಳ ಸದಸ್ಯರು ಮೇಲೆ ಹೆಚ್ಚಿನ ಜವಾಬ್ದಾರಿ ಇದೆ’ ಎಂದು ಅವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.