ADVERTISEMENT

ಟ್ರೆಂಡ್‌ ಆಯ್ತು #ತಾಯ್ನುಡಿ_ಕಲಿಕೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2018, 15:00 IST
Last Updated 11 ಜೂನ್ 2018, 15:00 IST
ಟ್ರೆಂಡ್‌ ಆಯ್ತು #ತಾಯ್ನುಡಿ_ಕಲಿಕೆ
ಟ್ರೆಂಡ್‌ ಆಯ್ತು #ತಾಯ್ನುಡಿ_ಕಲಿಕೆ   

ಬೆಂಗಳೂರು: ಮಕ್ಕಳ ಶಿಕ್ಷಣ ಮಾಧ್ಯಮ ಯಾವುದಿರಬೇಕು? ಮಾತೃ ಭಾಷೆಯಾ? ಆಂಗ್ಲ ಭಾಷೆಯಾ? ಎಂಬೆಲ್ಲಾ ಪ್ರಶ್ನೆಗಳು ಮಕ್ಕಳ ಶಾಲಾ ಪ್ರವೇಶಾತಿ ವೇಳೆ ಪೋಷಕರಿಗೆ ಎದುರಾಗುವುದು ಸಾಮಾನ್ಯ. ಈ ಬಗ್ಗೆ ತಲೆಕೆಡಿಸಿಕೊಂಡವರೂ ಅನೇಕ.

ಈಗ ಅಂತರ್ಜಾಲ ತಾಣದಲ್ಲಿ ಹ್ಯಾಷ್ ಟ್ಯಾಗ್‌ನೊಂದಿಗೆ #ತಾಯ್ನುಡಿ_ಕಲಿಕೆ ಟ್ರೆಂಡ್ ಸೃಷ್ಟಿಸಿದೆ.

ಈ ಚರ್ಚೆ ನಡೆಯುತ್ತಿರುವ ಸಂರ್ಭದಲ್ಲಿ ಸ್ಮರಣೀಯ ಎನಿಸುವ ನುಡಿ ಎಂದರೆ ‘ತಾಯ್ನುಡಿಯಲ್ಲಿ ಕಲಿಸದಿದ್ದರೆ ಬಹುತೇಕ ಭಾರತೀಯರು ಕಲಿಕೆಯಿಂದ ದೂರವಾಗುತ್ತಾರೆ’ ಎಂದು ಹೇಳಿದ್ದ ನೋಬೆಲ್‌ ಪ್ರಶಸ್ತಿ ಪುರಸ್ಕೃತ ರಾಷ್ಟ್ರಕವಿ ರವೀಂದ್ರನಾಥ್‌ ಟ್ಯಾಗೋರ್‌ ಅವರ ಮುತ್ತಿನಂತ ಮಾತು.

ADVERTISEMENT

‘ಮಕ್ಕಳನ್ನು ಕನ್ನಡದಲ್ಲೇ ಓದಿಸಬೇಕು. ಮಾತೃಭಾಷೆ ಮೂಲಕ ವಿಷಯ ಗ್ರಹಿಸಿಕೊಳ್ಳುವುದು ತುಂಬಾ ಸುಲಭ. ಹೀಗಾಗಿ ವಿಜ್ಞಾನವನ್ನು ಕನ್ನಡದಲ್ಲೇ ಕಲಿತೆ. ನನ್ನ ಸಾಧನೆಗೆ ಕನ್ನಡದ ಹಿನ್ನೆಲೆಯೇ ಕಾರಣ’ ಎಂದು ಭಾರತ ರತ್ನ ಪುರಸ್ಕಾರಕ್ಕೆ ಭಾಜನರಾದ ರಾಸಾಯನ ವಿಜ್ಞಾನಿ ಪ್ರೊ.ಸಿಎನ್‌ಆರ್‌ ರಾವ್‌ ಅವರು ರಾಜ್ಯದ ಜನತೆಗೆ ಕೊಟ್ಟ ಸಂದೇಶದ ‘ಪ್ರಜಾವಾಣಿ’ ವರದಿಯೊಂದಿಗೆ ಟ್ವೀಟ್‌ ಮಾಡಿ ಗಮನ ಸೆಳೆದಿದ್ದಾರೆ. 

#ತಾಯ್ನುಡಿ_ಕಲಿಕೆ ಹ್ಯಾಷ್‌ ಟ್ಯಾಗ್‌ನೊಂದಿಗೆ ಸಾವಿರಾರು ಕನ್ನಡಿಗರು ತಮ್ಮ ಕಲಿಕೆಯ ಅನುಭವ ಹಾಗೂ ಸಾಧನೆ ಹೆಮ್ಮೆಯಿಂದಲೇ ಕನ್ನಡಲ್ಲೇ ಟ್ವೀಟ್‌ ಮಾಡಿದ್ದಾರೆ. ಕನ್ನಡ ಶಾಲೆಯಲ್ಲಿನ ಕಲಿಕೆ, ಐಎಎಸ್‌, ಐಪಿಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳೂ ಕನ್ನಡದಲ್ಲಿಯೇ ನಡೆಯುವಂತಾಗಬೇಕು. ಆಗ ಕನ್ನಡಕ್ಕೆ ಮತ್ತಷ್ಟು ಮೆರಗು ಬತುತ್ತದೆ ಎಂದೂ ಹೇಳಿದ್ದಾರೆ. ಇನ್ನೂ ಕೆಲವರು ಆಂಗ್ಲ ಭಾಷೆಯಲ್ಲೇ ಟ್ವೀಟ್‌ ಮಾಡಿ ತಮ್ಮ ಕನ್ನಡದ ಬಗೆಗಿನ ಅಭಿಮಾನವನ್ನು ಮೆರೆದಿದ್ದಾರೆ.

'ಎಲ್ಲರಿಗೂ ಗುಣಮಟ್ಟ, ಸಮಾನ ಮತ್ತು ಜೀವನ ಪರ್ಯಂತ ಕಲಿಕೆಗೆ ಆದ್ಯತೆ ನೀಡುವ ಹೊಸ ಜಾಗತಿಕ ಶಿಕ್ಷಣ ಕಾರ್ಯಸೂಚಿಯೊಂದಿಗೆ, ಬೋಧನೆ ಮತ್ತು ಕಲಿಕೆಯಲ್ಲಿ ಮಾತೃಭಾಷೆಯ ಬಳಕೆಗೆ ಸಂಪೂರ್ಣ ಗೌರವವನ್ನು ಪ್ರೋತ್ಸಾಹಿಸಲು ಮತ್ತು ಭಾಷಾ ವೈವಿಧ್ಯತೆಯನ್ನು ಉತ್ತೇಜಿಸುವುದು ಅಗತ್ಯವಾಗಿದೆ’ ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರು #ತಾಯ್ನುಡಿ_ಕಲಿಕೆ ಯೊಂದಿಗೆ ಆಂಗ್ಲ ಭಾಷೆಯಲ್ಲಿ ಟ್ವೀಟ್‌ ಮಾಡಿದ್ದಾರೆ.

ತಾಯ್ನುಡಿ ಕನ್ನಡಾಭಿಮಾನದ ಸಾಲು ಸಾಲು ಟ್ವೀಟ್‌ಗಳು ಹೀಗಿವೆ ನೋಡಿ...


ಕನ್ನಡ ಶಾಲೆ ಕುರಿತು ‘ವಿಚಿತ್ರ!’ ಎಂದವರು ಮಕ್ಕಳನ್ನು ಕನ್ನಡ ಶಾಲೆಗೇ ಸೇರಿಸಿದ್ದಾರೆ
‘2 ವರುಷದ ಹಿಂದೆ ನನ್ನ ಮಗ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದುತ್ತಿದ್ದಾನೆ ಅಂದಾಗ ಮನೆಯ ಬಳಿ ಇರುವವರೊಬ್ಬರು "ಇದೇನಿದು ವಿಚಿತ್ರ!" ಅನ್ನುವ ಹಾಗೆ ನೋಡುತ್ತಿದ್ದರು, ಹಲವಾರು ಪ್ರಶ್ನೆಗಳನ್ನು ಕೇಳುತ್ತಿದ್ದರು. ಈ ವರುಷ ಅವರೂ ಕನ್ನಡ ಮಾಧ್ಯಮ ಶಾಲೆಗೇ ತಮ್ಮ ಮಗುವನ್ನ ಸೇರಿಸಿದ್ದಾರೆ’ ಎಂದು ವಲ್ಲಿಶ್‌ ಕುಮಾರ್‌ ಎಂಬುವರು #ತಾಯ್ನುಡಿ_ಕಲಿಕೆ ಯೊಂದಿಗೆ ಟ್ವೀಟ್‌ ಮಾಡಿದ್ದಾರೆ. 

ಕನ್ನಡವನ್ನ ಉದ್ದಾರ ಮಾಡಲು ಕನ್ನಡ ಮಾಧ್ಯಮದಲ್ಲಿ ಓದಿಸಬೇಕಿಲ್ಲ, ನಮ್ಮ ಮಕ್ಕಳು ಉದ್ದಾರ ಆಗಲು ಆ ಮೂಲಕ ಕನ್ನಡ ನಾಡು ಏಳ್ಗೆ ಹೊಂದಲು ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ಓದಿಸಬೇಕು ಎಂದು ಮಲ್ಲೇಶ್‌ ಬೆಳವಡಿ ಟ್ವೀಟ್‌ ಮಾಡಿದ್ದಾರೆ.  

#ತಾಯ್ನುಡಿ_ಕಲಿಕೆ ಹ್ಯಾಶ್ಟ್ಯಾಗ್ ಹುಡುಕಾಟದ ಫಲಿತಾಂಶದ ಪರದೆಮೇಲೆ ನೋಡೋದೇ ಒಂದು ಖುಷಿ.. ಎಲ್ಲ ಟ್ವೀಟುಗಳೂ ಕನ್ನಡದಲ್ಲೇ..
ಹೀಗೇ ಎಲ್ಲ ಕನ್ನಡಮಯವಾದ್ರೆ ಕನ್ನಡಶಾಲೆಗಳಿಗೆ ತಾನಾಗೇ ಪ್ರಾಮುಖ್ಯತೆ ಸಿಗುತ್ತೆ.. ಎಂದು ಕೃಷ್ಣಕತೆ ಹೆಸರಿನಲ್ಲಿ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.