ADVERTISEMENT

ಡಬಲ್ ಬಜೆಟ್ ಮಂಡನೆಗೆ ಸಜ್ಜು

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2011, 18:40 IST
Last Updated 23 ಫೆಬ್ರುವರಿ 2011, 18:40 IST


ಬೆಂಗಳೂರು: ಶೇಕಡಾ ಒಂದರ ಬಡ್ಡಿ ದರದಲ್ಲಿ ಕೃಷಿ ಸಾಲ, 1.5 ಲಕ್ಷ ದಲಿತರ ಕೃಷಿ ಭೂಮಿಯನ್ನು ದತ್ತು ತೆಗೆದುಕೊಳ್ಳುವ ‘ವಾಜಪೇಯಿ ಕೃಷಿ ವಿಕಾಸ ಯೋಜನೆ’, ಕೃಷಿ ಯಂತ್ರೋಪಕರಣಗಳಿಗೆ ಸಬ್ಸಿಡಿ ಸೇರಿದಂತೆ ಹತ್ತು ಹಲವು ಜನಪರ ಕಾರ್ಯಕ್ರಮಗಳನ್ನು 2011-12ನೇ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಘೋಷಣೆ ಮಾಡುವ ನಿರೀಕ್ಷೆ ಇದೆ.

ಕೃಷಿಕರಿಗೆ ಪ್ರಸ್ತುತ ಶೇ 3ರ ಬಡ್ಡಿ ದರದಲ್ಲಿ ಸಾಲ ನೀಡುತ್ತಿದ್ದು, ಅದನ್ನು ದೇಶದಲ್ಲೇ ಮೊದಲ ಬಾರಿಗೆ ಶೇ 1ಕ್ಕೆ ಇಳಿಸಲು ನಿರ್ಧರಿಸಿದ್ದು, ಅಧಿಕೃತವಾಗಿ ಬಜೆಟ್‌ನಲ್ಲಿ ಪ್ರಕಟಿಸಲಿದ್ದಾರೆ. ಹಣಕಾಸು ಸಚಿವರೂ ಆದ ಯಡಿಯೂರಪ್ಪ ಅವರು ಸಾಮಾನ್ಯ ಬಜೆಟ್ ಜತೆಗೆ ಕೃಷಿ ಬಜೆಟ್ ಕೂಡ ಮಂಡಿಸುತ್ತಿದ್ದು, ಸಹಜವಾಗಿಯೇ ಕೃಷಿಗೆ ಬಂಪರ್ ಕೊಡುಗೆ ನೀಡುವ ಸಾಧ್ಯತೆ ಇದೆ. ಎರಡು ಎಕರೆಗಿಂತ ಕಡಿಮೆ ಜಮೀನು ಇರುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿದ ಕುಟುಂಬಗಳ ಕೃಷಿ ಭೂಮಿಯನ್ನು ಸರ್ಕಾರವೇ ದತ್ತು ತೆಗೆದುಕೊಂಡು, ಬಿತ್ತನೆ ಮಾಡುವ ಕೆಲಸ ಮಾಡಲಿದೆ. ಇದಕ್ಕೆ ವಾಜಪೇಯಿ ಕೃಷಿ ವಿಕಾಸ ಯೋಜನೆ ಎಂದು ಹೆಸರಿಟ್ಟಿದ್ದು, ಇದರ ಘೋಷಣೆ ಕೂಡ ಆಗಲಿದೆ.

ಕೃಷಿ ಕೂಲಿಕಾರರ ಸಮಸ್ಯೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ನಾಟಿ, ಕಟಾವು ಸೇರಿದಂತೆ ಇತರ ಕೆಲಸ ಮಾಡುವ ಯಂತ್ರೋಪಕರಣಗಳಿಗೆ ಭಾರಿ ಸಬ್ಸಿಡಿ ಘೋಷಿಸುವ ಸಾಧ್ಯತೆ ಇದೆ.

ನೀರಾವರಿಗೂ ಆದ್ಯತೆ ನೀಡಲು ತೀರ್ಮಾನಿಸಿದ್ದು, ಒಣ ಬೇಸಾಯಕ್ಕೆ ಸಾಕಷ್ಟು ಯೋಜನೆಗಳನ್ನು ಘೋಷಿಸುವ ಚಿಂತನೆ ನಡೆದಿದೆ. ಬಯಲು ಸೀಮೆಯಲ್ಲಿ ಅರಣ್ಯ ಅಭಿವೃದ್ಧಿಗೆ ಒತ್ತು ನೀಡುವ ಯೋಜನೆ ಪ್ರಕಟಿಸಲಿದ್ದಾರೆ.ಬಹುನಿರೀಕ್ಷಿತ ಬಸವೇಶ್ವರ ವಿಶ್ವವಿದ್ಯಾಲಯ ಸ್ಥಾಪನೆ ಬಗ್ಗೆಯೂ ಬಜೆಟ್‌ನಲ್ಲಿ ಘೋಷಿಸುವ ಸಾಧ್ಯತೆ ಇದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡ ಸಾಹಿತಿಗಳ ಎಲ್ಲ ಕೃತಿಗಳನ್ನು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲು ಹಣ ನಿಗದಿ, ಸಾಹಿತಿಗಳು, ಕಲಾವಿದರ ಮಾಶಾಸನ ಹೆಚ್ಚಳ ಮಾಡುವ ಬಗ್ಗೆಯೂ ಬಜೆಟ್‌ನಲ್ಲಿ ಪ್ರಕಟಿಸುವ ನಿರೀಕ್ಷೆ ಇದೆ.

ಗುಲ್ಬರ್ಗ ಮತ್ತು ಬೆಳಗಾವಿ ವಿಭಾಗದಲ್ಲಿ ಮಾತ್ರ ಇರುವ ವಾಜಪೇಯಿ ಆರೋಗ್ಯ ಶ್ರೀ ಯೋಜನೆಯನ್ನು ಈ ವರ್ಷ ಮೈಸೂರು ವಿಭಾಗಕ್ಕೂ ವಿಸ್ತರಿಸಲು ನಿರ್ಧರಿಸಲಾಗಿದೆ. ಹೊಸ ತೆರಿಗೆ ಇಲ್ಲದ ಹಾಗೂ ಕಳೆದ ವರ್ಷಕ್ಕಿಂತ 15 ಸಾವಿರ ಕೋಟಿ ರೂಪಾಯಿಗಿಂತ ಹೆಚ್ಚಿನ ಗಾತ್ರದ ಬಜೆಟ್ ಮಂಡನೆ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.ಅಂಗವಿಕಲರು, ವಿಧವೆಯರು, ವೃದ್ಧರಿಗೆ ನೀಡುತ್ತಿರುವ ಮಾಶಾಸನವನ್ನು 400 ರೂಪಾಯಿಗಳಿಂದ 600 ರೂಪಾಯಿಗೆ ಹೆಚ್ಚಿಸುವ ಬಗ್ಗೆಯೂ ಬಜೆಟ್‌ನಲ್ಲಿ ಪ್ರಕಟಿಸುವ ಸಾಧ್ಯತೆ ಇದೆ.

ಅಧಿವೇಶನದಲ್ಲಿ ಭಾಗಿ:ಈ ನಡುವೆ, ಸರ್ಕಾರದ ಹಗರಣಗಳ ಬಗ್ಗೆ ಹೋರಾಟ ನಿರಂತರವಾಗಿ ನಡೆಯುತ್ತದೆ ಎಂದು ಹೇಳಿರುವ ಕಾಂಗ್ರೆಸ್ ಈ ಸಲದ ಬಜೆಟ್ ಅಧಿವೇಶನದಲ್ಲಿ ಭಾಗವಹಿಸುವುದಾಗಿ ಘೋಷಣೆ ಮಾಡಿದೆ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT