ADVERTISEMENT

ಡಾ. ಮಲ್ಲಿಕಾ ಘಂಟಿ ಕನ್ನಡ ವಿ.ವಿ ಕುಲಪತಿ

ಕನ್ನಡ ವಿ.ವಿಗೆ ಮೊದಲ ಮಹಿಳಾ ಕುಲಪತಿ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2015, 19:48 IST
Last Updated 7 ಸೆಪ್ಟೆಂಬರ್ 2015, 19:48 IST

ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ  ಹಾಲಿ ಶಿವಮೊಗ್ಗ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ಮಲ್ಲಿಕಾ ಶಂಕ್ರಪ್ಪ ಘಂಟಿ ನೇಮಕಗೊಂಡಿದ್ದಾರೆ.ಬುಧವಾರ(ಸೆ.9) ಅಧಿಕಾರ ಸ್ವೀಕರಿಸಲಿದ್ದಾರೆ.

22 ವರ್ಷಗಳ ಈ ವಿಶ್ವವಿದ್ಯಾಲಯದ ಇತಿಹಾಸದಲ್ಲಿ ಇದುವರೆಗೆ ಪುರುಷರು ಮಾತ್ರ ಈ ಹುದ್ದೆ ಅಲಂಕರಿಸಿದ್ದರು. ಡಾ. ಮಲ್ಲಿಕಾ ಈ ವಿ.ವಿ.ಯ ಮೊದಲ ಮಹಿಳಾ ಕುಲಪತಿಯಾಗಲಿದ್ದಾರೆ.

ಮಹಿಳೆಯರಿಗೆ ಪ್ರವೇಶ ನಿಷಿದ್ಧವಿರುವ ಸಂಡೂರು ತಾಲ್ಲೂಕಿನ ಕುಮಾರಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶ ಕಲ್ಪಿಸಲು ಹೋರಾಟ ನಡೆಸಿ, ರಾಜ್ಯದಾದ್ಯಂತ ಗಮನ ಸೆಳೆದಿದ್ದರು. ಅದೇ ರೀತಿ ಸಂಡೂರಿನ ಊರಮ್ಮ ದೇವಸ್ಥಾನದಲ್ಲಿ ಪ್ರಾಣಿ ಬಲಿ ವಿರೋಧ ಹೋರಾಟ ನಡೆಸಿ, ಅದನ್ನೂ ತಡೆಯುವಲ್ಲಿ ಯಶಸ್ವಿಯಾಗಿದ್ದರು.

ವೈಯಕ್ತಿಕ ವಿವರ: ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ಅಗಸ ನಬಾಳು ಗ್ರಾಮದ ಡಾ. ಮಲ್ಲಿಕಾ, ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡೀನ್‌, ನಿರ್ದೇಶಕ, ಸಂಚಾಲಕ ಹೀಗೆ ಹಲವು ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ವಿಶ್ವವಿದ್ಯಾಲಯ ಹಾಗೂ ವಿವಿಧ ಅಕಾಡೆಮಿಗಳಲ್ಲಿ ಸದಸ್ಯ ಹಾಗೂ ನಿರ್ದೇಶಕರಾಗಿದ್ದರು. ಅಲ್ಲದೆ 8 ಸಂಶೋಧನಾ ವಿದ್ಯಾರ್ಥಿಗಳು ಹಾಗೂ 16 ಎಂ.ಫಿಲ್‌ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ. 5 ವಿಮರ್ಶಾ ಸಂಕಲನ ಕೃತಿಗಳು, 4 ಕವನ ಸಂಕಲನಗಳು, 2 ನಾಟಕಗಳು, 3 ಜೀವನ ಚರಿತ್ರೆಗಳು, 11 ಸಂಪಾದನಾ ಕೃತಿಗಳು, ಹಾಲುಮತ ಸಾಂಸ್ಕೃತಿಕ ಮಾಲಿಕೆಯ 10 ಕೃತಿಗಳು ಇವರ ಸಾಹಿತ್ಯ ಕೃಷಿಯ ಕೊಡುಗೆಗಳಾಗಿವೆ.

ಸಿಕ್ಕಿರುವ ಅವಕಾಶವನ್ನು ಪ್ರಾಮಾಣಿಕತೆಯಿಂದ ನಿಭಾಯಿಸುತ್ತೇನೆ. ವಿಶ್ವವಿದ್ಯಾಲಯದ ಉದ್ದೇಶಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳುತ್ತೇನೆ.-ಡಾ.ಮಲ್ಲಿಕಾ ಘಂಟಿ ನಿಯೋಜಿತ ಕುಲಪತಿ, ಹಂಪಿ ಕನ್ನಡ ವಿವಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.