ADVERTISEMENT

ಡಾ. ಯತೀಂದ್ರ, ಸುನಿಲ್‌ ಬೋಸ್‌, ಸೌಮ್ಯಾ ರೆಡ್ಡಿ ಟಿಕೆಟ್‌ ಆಕಾಂಕ್ಷಿಗಳು

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2018, 19:30 IST
Last Updated 6 ಮಾರ್ಚ್ 2018, 19:30 IST
ಡಾ. ಯತೀಂದ್ರ
ಡಾ. ಯತೀಂದ್ರ   

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳಾಗಿರುವ ಮುಖ್ಯಮಂತ್ರಿ ಪುತ್ರ ಡಾ. ಯತೀಂದ್ರ (ವರುಣಾ), ಲೋಕೋಪಯೋಗಿ ಸಚಿವ ಎಚ್‌.ಸಿ. ಮಹದೇವಪ್ಪ ಪುತ್ರ ಸುನಿಲ್‌ ಬೋಸ್‌ (ಟಿ. ನರಸೀಪುರ) ಮತ್ತು ಗೃಹ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿ (ಜಯನಗರ) ಕೆಪಿಸಿಸಿಯಿಂದ ಅರ್ಜಿ ಪಡೆದುಕೊಂಡಿದ್ದಾರೆ.

ಸಿಂಧನೂರು ಕ್ಷೇತ್ರದಿಂದ ಟಿಕೆಟ್‌ ಬಯಸಿರುವ ರಾಜ್ಯ ಯುವ ಕಾಂಗ್ರೆಸ್‌ ಅಧ್ಯಕ್ಷ ಬಸನಗೌಡ ಬಾದರ್ಲಿ ಕೂಡಾ ಅರ್ಜಿ ಪಡೆದವರಲ್ಲಿ ಸೇರಿದ್ದಾರೆ. ಈ ಕ್ಷೇತ್ರವನ್ನು ಬಸನಗೌಡ ಬಾದರ್ಲಿ ಅವರ ಸಂಬಂಧಿ ಹಂಪನಗೌಡ ಬಾದರ್ಲಿ ಸದ್ಯ ಪ್ರತಿನಿಧಿಸುತ್ತಿದ್ದಾರೆ.

ಪ್ರದೇಶ ಕಾಂಗ್ರೆಸ್‌ ಸಮಿತಿ ಟಿಕೆಟ್‌ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದ್ದು, ಫೆ. 26ರಿಂದ ಈವರೆಗೆ 1,900 ಮಂದಿ ಅರ್ಜಿ ಪಡೆದುಕೊಂಡಿದ್ದಾರೆ. ಈ ಪೈಕಿ 250 ಮಂದಿ ಶುಲ್ಕ ಸಹಿತ ಅರ್ಜಿ ಮರಳಿಸಿದ್ದಾರೆ. ಪಕ್ಷದ ಹಲವು ಹಿರಿಯ ನಾಯಕರ ಕುಟುಂಬದ ಸದಸ್ಯರೂ ಅರ್ಜಿ ಪಡೆದುಕೊಂಡವರಲ್ಲಿ ಇದ್ದಾರೆ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.

ADVERTISEMENT

ಈ ಮಧ್ಯೆ, ಕೆಪಿಸಿಸಿಯಿಂದ ಅರ್ಜಿ ಪಡೆಯಲು ನಿಗದಿಗೊಳಿಸಿದ್ದ ಕೊನೆಯ ದಿನವನ್ನು ಮಾರ್ಚ್‌ 5ರಿಂದ 10ರವರೆಗೆ ವಿಸ್ತರಿಸಲಾಗಿದೆ. ಶುಲ್ಕ ಸಮೇತ ಅರ್ಜಿ ಸಲ್ಲಿಸುವ ಅಂತಿಮ ದಿನವನ್ನೂ ಪಕ್ಷ ಮುಂದೂಡಿದೆ.

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ ನೇತೃತ್ವದಲ್ಲಿ 43 ಸದಸ್ಯರನ್ನೊಳಗೊಂಡ ಚುನಾವಣಾ ಸಮಿತಿ ರಚಿಸಿದ ಬೆನ್ನಲ್ಲೆ ಟಿಕೆಟ್‌ ಆಕಾಂಕ್ಷಿಗಳಿಂದ ಪಕ್ಷ ಅರ್ಜಿ ಆಹ್ವಾನಿಸಿದೆ. ಈ ಸಮಿತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹಿರಿಯ ಕಾಂಗ್ರೆಸ್‌ ನಾಯಕಿ ಮಾರ್ಗರೆಟ್‌ ಆಳ್ವಾ ಕೂಡಾ ಇದ್ದಾರೆ.

ಸಲ್ಲಿಕೆಯಾದ ಅರ್ಜಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಬಳಿಕ ಪಕ್ಷದ ಹಿರಿಯ ಮುಖಂಡ ಮಧುಸೂಧನ್ ಮಿಸ್ತ್ರಿ ಅಧ್ಯಕ್ಷತೆಯ ಸ್ಕ್ರೀನಿಂಗ್‌
ಸಮಿತಿಗೆ ಕಳುಹಿಸಲಾಗುವುದು. ಈ ಸಮಿತಿಯಲ್ಲಿ ಸಂಸದರಾದ ತಮರಾಧ್ವಾಜ್ ಸಾಹು ಮತ್ತು ಗೌರವ್ ಗೊಗೋಯ್ ಇದ್ದಾರೆ. ಅಲ್ಲದೆ, ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌, ಪರಮೇಶ್ವರ ಮತ್ತು ಸಿದ್ದರಾಮಯ್ಯ ಕೂಡಾ ಸದಸ್ಯರು ಎಂದೂ ಮೂಲಗಳು ತಿಳಿಸಿವೆ.

ಮಾರ್ಚ್‌ ಎರಡನೇ ವಾರದ ಬಳಿಕ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲು ಕಾಂಗ್ರೆಸ್‌ ಚಿಂತನೆ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.