ADVERTISEMENT

`ಡಿಎಫ್‌ಆರ್‌ಎಲ್'ನಿಂದ ಆಹಾರ

​ಪ್ರಜಾವಾಣಿ ವಾರ್ತೆ
Published 20 ಜೂನ್ 2013, 19:59 IST
Last Updated 20 ಜೂನ್ 2013, 19:59 IST

ಮೈಸೂರು: ಮಹಾಮಳೆಗೆ ತತ್ತರಿಸಿರುವ ಉತ್ತರಾಖಂಡ ರಾಜ್ಯಕ್ಕೆ ಆಹಾರ ಪದಾರ್ಥಗಳನ್ನು ಪೂರೈಸಲು ನಗರದ ರಕ್ಷಣಾ ಆಹಾರ ಸಂಶೋಧನಾಲಯ (ಡಿಎಫ್‌ಆರ್‌ಎಲ್) ಸಿದ್ಧತೆ ಮಾಡಿಕೊಳ್ಳುತ್ತಿದೆ. ಡಿಎಫ್‌ಆರ್‌ಎಲ್ ಕೇಂದ್ರ ಸ್ಥಾನದಿಂದ ಮಾಹಿತಿ ಬಂದಿರುವ ಹಿನ್ನೆಲೆಯಲ್ಲಿ ಆಹಾರ ಪದಾರ್ಥಗಳನ್ನು ಭರದಿಂದ ಸಿದ್ಧ ಮಾಡಲಾಗುತ್ತಿದೆ.

`3 ಸಾವಿರ ಪ್ಯಾಕೆಟ್‌ನಷ್ಟು ಆಹಾರ ಸಿದ್ಧಪಡಿಸುವಂತೆ ಡಿಎಫ್‌ಆರ್‌ಎಲ್ ನವದೆಹಲಿ ಮುಖ್ಯ ಕೇಂದ್ರದಿಂದ ಗುರುವಾರ ಸಂಜೆ ಮಾಹಿತಿ ಬಂತು. ಹಾಗಾಗಿ, ವೆಜ್ ಪಲಾವ್, ಉಪ್ಪಿಟ್ಟು ಮತ್ತು ರವೆ ಹಲ್ವ ಸಿದ್ಧಮಾಡಲಾಗುತ್ತಿದೆ.

ಜೂನ್ 27ರಂದು ಮೈಸೂರಿನಿಂದ ಉತ್ತರಾಖಂಡಕ್ಕೆ ಆಹಾರ ಪದಾರ್ಥಗಳನ್ನು ಕಾಲ ಮಿತಿಯೊಳಗೆ ಪೂರೈಕೆ ಮಾಡಲಾಗುವುದು. ಒಂದು ಕೆಜಿ ಪ್ಯಾಕೆಟ್‌ನಷ್ಟು ಆಹಾರವನ್ನು ಬಿಸಿ ನೀರಿನಲ್ಲಿ ಮಿಶ್ರಣ ಮಾಡಿದಲ್ಲಿ 3 ಕೆಜಿಯಷ್ಟು ಆಹಾರ ಸಿದ್ಧವಾಗುತ್ತದೆ. 1 ಕೆ.ಜಿ. ಪೊಟ್ಟಣದಿಂದ ಸುಮಾರು 2,500ರಿಂದ 3 ಸಾವಿರ ಪೊಟ್ಟಣಗಳನ್ನು ಸರಬರಾಜು ಮಾಡಲಾಗುವುದು' ಎಂದು ಡಿಎಫ್‌ಆರ್‌ಎಲ್ ಡಾ.ಹರ್ಷ ವಿ. ಬಾತ್ರ ತಿಳಿಸಿದರು.

ಸುರಕ್ಷಿತ ಸ್ಥಳಕ್ಕೆ ಜನರನ್ನು ತಲುಪಿಸಿದ ನಂತರ ಒಮ್ಮೆಲೇ ಸಹಸ್ರಾರು ಜನರಿಗೆ ಆಹಾರ ಪೂರೈಕೆ ಮಾಡುವುದು ಕಷ್ಟ. ಪ್ರಾಕೃತಿಕ ವಿಪತ್ತು ಆದಂತಹ ಸಂದರ್ಭದಲ್ಲಿ ಮೈಸೂರು ಮೂಲದ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ (ಸಿಎಫ್‌ಟಿಆರ್‌ಐ) ಮತ್ತು ಡಿಎಫ್‌ಆರ್‌ಎಲ್‌ಗೆ ಆಹಾರ ಪೂರೈಕೆ ಮಾಡುವಂತೆ ಕೋರಿಕೆ ಬರುತ್ತವೆ.

`ಆಹಾರ ಪೂರೈಕೆ ಮಾಡುವಂತೆ ಉತ್ತರಾಖಂಡ ರಾಜ್ಯದಿಂದ ಇದುವರೆಗೂ ಯಾವುದೇ ಮಾಹಿತಿ ಬಂದಿಲ್ಲ. ಒಂದು ವೇಳೆ ಮಾಹಿತಿ ಬಂದರೆ ಆಹಾರ ಪದಾರ್ಥ ಪೂರೈಕೆ ಮಾಡಲಾಗುವುದು. 3 ಟನ್‌ನಷ್ಟು ಆಹಾರ ಸಿದ್ಧಪಡಿಸಲು ಎರಡು ದಿನಗಳು ಬೇಕು. ಯಾವುದೇ ಸಂದರ್ಭದಲ್ಲೂ ಆಹಾರ ಪೂರೈಸಲು ಸಂಸ್ಥೆ ಸಿದ್ಧ' ಎಂದು ಸಿಎಫ್‌ಟಿಆರ್‌ಐನ ಮಾಹಿತಿ ಮತ್ತು ಪ್ರಚಾರ ವಿಭಾಗದ ಎ.ಎಸ್.ಕೆ.ವಿ.ಎಸ್. ಶರ್ಮಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.