ADVERTISEMENT

ತಹಶೀಲ್ದಾರ್‌ಗೆ ಘೇರಾವ್‌: ಮೊಕದ್ದಮೆ

ಮುಖ್ಯಮಂತ್ರಿ ಭೇಟಿ ಸಂದರ್ಭದಲ್ಲಿ ಗಲಾಟೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2014, 19:30 IST
Last Updated 15 ಮಾರ್ಚ್ 2014, 19:30 IST

ಅಥಣಿ:  ಅಕಾಲಿಕ ಮಳೆಯಿಂದಾದ ಬೆಳೆ ಹಾನಿ ವೀಕ್ಷಿಸಲು ಜಿಲ್ಲೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರವಾಸದಲ್ಲಿ ಕೆಲವು ಹಳ್ಳಿ­ಗಳನ್ನು ತಹಶೀಲ್ದಾರ್‌ ಉದ್ದೇಶ­ಪೂರ್ವ­ಕವಾಗಿ ಕೈಬಿಟ್ಟಿದ್ದಾರೆಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದ ರೈತರ ವಿರುದ್ಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಪ್ರತಿಭಟನೆ ವೇಳೆ ತಹಶೀಲ್ದಾರ್ ಜೀಪ್ ತಡೆದು, ಕಲ್ಲು ತೂರಿ, ಅವ­ರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಒಡ್ಡಿದ ಮತ್ತು ಸರ್ಕಾರಿ ಕೆಲ­ಸಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ರೈತ ಮುಖಂಡರಾದ ಕಿರಣ­ಗೌಡ ಪಾಟೀಲ, ಮಹೇಶ ಕುಮಟಳ್ಳಿ, ಎಸ್.ಎಂ. ನಾಯಿಕ, ಅರ್ಷದ್ ಹುಸೇನ್ ಗದ್ಯಾಳ, ಅನಿಲ ಸುಣ­ಧೋಳಿ, ಸುನೀಲ ಸಂಕ, ಮಹದೇವ ಕೋರೆ, ಸಲಾಂ ಕಲ್ಲಿ, ಬಸನಗೌಡ ಪಾಟೀಲ, ದೇಸಾಯಿ ಮತ್ತು ಇತರರ ವಿರುದ್ಧ ಅಥಣಿ ಸಬ್‌ಇನ್ಸ್‌ಪೆಕ್ಟರ್‌ ಎಸ್.ಎಂ. ಶಿರಗುಪ್ಪಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

ಅಲ್ಲದೇ ಈ ಪ್ರಕರಣದ ಸಂಬಂಧ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ಬಸನಗೌಡ ಪಾಟೀಲ ಅವರನ್ನು ಶನಿವಾರ ವಶಕ್ಕೆ ತೆಗೆದುಕೊಂಡಿದ್ದಾರೆ. ರಡ್ಡೇರಹಟ್ಟಿ, ಸಂಕೋನಹಟ್ಟಿ ಮತ್ತು ಅವರಖೋಡ ಗ್ರಾಮಗಳಿಗೂ ಮುಖ್ಯ­ಮಂತ್ರಿ ಭೇಟಿ ಕಾರ್ಯ­ಕ್ರಮ­ವಿತ್ತು. ಆದರೆ ಈ ಹಳ್ಳಿಗಳಿಗೆ ಅವರು ಭೇಟಿ ನೀಡದೆ ಇರಲು ತಹಶೀಲ್ದಾರ್ ಅವರೇ ಕಾರಣವೆಂದು ಆರೋಪಿಸಿ ಶುಕ್ರವಾರ ರೈತರು ಪ್ರತಿಭಟಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.