ಬೆಂಗಳೂರು: ಕಾಯ್ದೆಗೆ ಸೂಕ್ತ ತಿದ್ದುಪಡಿ ತರುವ ಮೂಲಕ ರಾಜ್ಯದಲ್ಲಿರುವ 652 ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಲಾಗುವುದು ಎಂದು ಕಂದಾಯ ಸಚಿವ ವಿ. ಶ್ರೀನಿವಾಸ ಪ್ರಸಾದ್ ವಿಧಾನಸಭೆಯಲ್ಲಿ ಸೋಮವಾರ ತಿಳಿಸಿದರು.
ಶೂನ್ಯವೇಳೆಯಲ್ಲಿ ಕಾಂಗ್ರೆಸ್‌ನ ಕೆ.ಶಿವಮೂರ್ತಿ ಮಾಡಿದ ಪ್ರಸ್ತಾವಕ್ಕೆ ಉತ್ತರಿಸಿದ ಅವರು, ಈಗಿರುವ ನಿಯಮಗಳ ಪ್ರಕಾರ 100 ಮನೆಗಳು ಹಾಗೂ 500ಕ್ಕಿಂತ ಅಧಿಕ ಜನಸಂಖ್ಯೆ ಇದ್ದರೆ ಮಾತ್ರ ಕಂದಾಯ ಗ್ರಾಮಗಳು ಎಂದು ಗುರುತಿಸಲಾಗುತ್ತದೆ. ಈ ಪ್ರಮಾಣದಲ್ಲಿ ಮನೆಗಳು, ಜನಸಂಖ್ಯೆ ಇಲ್ಲದ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಕಾಯ್ದೆಗೆ ತಿದ್ದುಪಡಿ ತರುವ ಅಗತ್ಯವಿದೆ ಎಂದರು.
ಹಿಂದೆ 893 ತಾಂಡಾಗಳು ಇದ್ದವು. ಈಗಾಗಲೇ 241 ತಾಂಡಾಗಳು ಪರಿವರ್ತನೆ ಆಗಿವೆ. ಕಾಯ್ದೆಗೆ ತಿದ್ದುಪಡಿ ಆದರೆ ಉಳಿದ ತಾಂಡಾಗಳನ್ನು ಪರಿವರ್ತಿಸಲು ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದರು. ಇದಕ್ಕೂ ಮುನ್ನ ಮಾತನಾಡಿದ ಶಿವಮೂರ್ತಿ, `ರಾಜ್ಯದಲ್ಲಿ 27 ಸಾವಿರ ಕುಗ್ರಾಮಗಳಿವೆ. ಗ್ರಾಮದ ಸ್ಥಾನಮಾನ ಇಲ್ಲದ ಕಾರಣ ಅಲ್ಲಿನ ಜನರು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.