ADVERTISEMENT

ತಾಲ್ಲೂಕು ಪಂಚಾಯ್ತಿ ಮಳಿಗೆ ದಾಖಲೆಗೆ ಹರಾಜು

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2017, 19:30 IST
Last Updated 12 ಅಕ್ಟೋಬರ್ 2017, 19:30 IST

ಲೋಕಾಪುರ: ಪಟ್ಟಣದಲ್ಲಿನ ಶಾಂತಿಪ್ರಿಯಾ ಹೊಟೇಲ್ ಪಕ್ಕದಲ್ಲಿನ ತಾಲ್ಲೂಕು ಪಂಚಾಯ್ತಿ ಐದು ಮಳಿಗೆಗಳು ಬಾಡಿಗೆಗಾಗಿ ಐದು ವರ್ಷದ ಅವಧಿಗೆ ದಾಖಲೆ ಮೊತ್ತಕ್ಕೆ ಹರಾಜಾಗಿದೆ.

ಐದು ಮಳಿಗೆಗಳಲ್ಲಿ ನಾಲ್ಕು ಮಳಿಗೆ ಸಾಮಾನ್ಯ ವರ್ಗದವರಿಗೆ ಮತ್ತು ಒಂದು ಮಳಿಗೆ ಹಿಂದುಳಿದ ವರ್ಗದವರಿಗೆ ಮೀಸಲಾಗಿತ್ತು.
ಲೋಕಾಪುರ ಪಟ್ಟಣದ ಹೃದಯ ಭಾಗದಲ್ಲಿರುವಂತ ತಾಲ್ಲೂಕು ಪಂಚಾಯ್ತಿಯ ಐದು ಮಳಿಗೆಗಳು ನಿರ್ಮಾಣವಾಗಿ ಸುಮಾರು 15 ವರ್ಷಗಳಿಂದ ಪ್ರತಿ ತಿಂಗಳಿಗೆ ₹ 2500 ರೂ.ಗಳ ಬಾಡಿಗೆ ದರದಲ್ಲಿ ಬಾಡಿಗೆ ಇದ್ದ ಮಳಿಗೆಗಳು ಏಕಕಾಲದಲ್ಲಿ ₹ 28000 ಬಾಡಿಗೆ ಹೋಗುವ ಮೂಲಕ ಸಾರ್ವಜನಿಕರ ಹುಬ್ಬೇರಿಸುವಂತೆ ಮಾಡಿದೆ.

ಬಹುದಿನಗಳಿಂದ ಮಳಿಗೆಗಳು ಹರಾಜಾಗಬೇಕು ಎಂಬ ಸಾರ್ವಜನಿಕರ ಬೇಡಿಕೆಯಾಗಿತ್ತು. ಅವಧಿ ಮುಗಿದ ಐದು ಮಳಿಗೆಗಳ ದಾಖಲೆ ಮೊತ್ತಕ್ಕೆ ಹರಾಜಾಗಿದ್ದು,ಸಾರ್ವಜನಿಕರಿಗೆ ಸಂತೋಷವೆನಿಸಿದರೆ, ಹಲವು ವರ್ಷಗಳಿಂದ ಬಾಡಿಗೆ ಇದ್ದ ಬಾಡಿಗೆದಾರರಿಗೆ ಅಸಮಾಧಾನವಾಗಿದೆ. ಮಳಿಗೆ ಹರಾಜು ಮಾಡದೆ ಬಾಡಿಗೆಯ ದರ ಹೆಚ್ಚಿಸಿ ಆ ಮಳಿಗೆಗಳನ್ನು ನಮಗೆ ಮುಂದುವರಿಸಬೇಕು ಎಂದು ಬಾಡಿಗೆದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ADVERTISEMENT

ಅಧಿಕಾರಿಗಳು ಕಾನೂನಿನ ಮೂಲಕ ಹರಾಜು ಮಾಡುವುದರೊಂದಿಗೆ ಸರ್ಕಾರದ ಬೊಕ್ಕಸಕ್ಕೆ ಆದಾಯ ಹೆಚ್ಚಿಸುವಂತೆ ಮಾಡಿರುವ ಕ್ರಮಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಳಿಗೆಯ ಅವಧಿ ಮುಗಿದ್ದಿದ್ದು ಅವುಗಳನ್ನು ಬಹಿರಂಗ ಹರಾಜು ಮೂಲಕ ಬಾಡಿಗೆ ನೀಡಿದ್ದು ದಾಖಲೆ ಮೊತ್ತಕ್ಕೆ ಹರಾಜಾಗಿದೆ ಎಂದು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಬಿ.ವಿ.ಅಡವಿಮಠ ಹೇಳಿದರು.

ಪಟ್ಟಣದಲ್ಲಿರುವ ವಾಣಿಜ್ಯ ಮಳಿಗೆಗಳಿಂದ ಬರುವ ಆದಾಯವನ್ನು ಲೋಕಾಪುರ ಪಟ್ಟಣದ ಮೂಲಸೌಲಭ್ಯಕ್ಕೆ ಖರ್ಚು ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.