ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಬ್ಯಾಂಕ್ ಖಾತೆಗಳನ್ನು ಆದಾಯ ತೆರಿಗೆ ಇಲಾಖೆ ಸ್ಥಗಿತಗೊಳಿಸಿದೆ. ಆದರೆ ಇದರಿಂದ ಬಸ್ ಸೇವೆಗಳಿಗೆ ಧಕ್ಕೆಯಾಗಲು ಅವಕಾಶ ನೀಡುವುದಿಲ್ಲ ಎಂದು ಸಾರಿಗೆ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
2009-10ನೇ ಸಾಲಿನ ಆದಾಯ ತೆರಿಗೆಯನ್ನು ಇದುವರೆಗೆ ಪಾವತಿ ಮಾಡದ ಕಾರಣ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಸಂಸ್ಥೆಗಳ ಬ್ಯಾಂಕ್ ಖಾತೆಗಳನ್ನು ಆದಾಯ ತೆರಿಗೆ (ಐ.ಟಿ.) ಇಲಾಖೆ ಇದೇ 16ರಂದು ಸ್ಥಗಿತಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.
`ಈ ವಿಚಾರದ ಕುರಿತು ತೆರಿಗೆ ಇಲಾಖೆಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಾಗುತ್ತಿದೆ. ಸೋಮವಾರ ನಡೆಯಲಿರುವ ಸಭೆಯಲ್ಲಿ ಈ ಸಮಸ್ಯೆಗೆ ಪರಿಹಾರ ದೊರೆಯಲಿದೆ. ಯಾವುದೇ ಕಾರಣಕ್ಕೂ ಬಸ್ ಸೇವೆಗಳಿಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು~ ಎಂದು ಕೆಎಸ್‌ಆರ್‌ಟಿಸಿಯ ಹಣಕಾಸು ವಿಭಾಗದ ನಿರ್ದೇಶಕ ಎಸ್. ಪದ್ಮನಾಭನ್ `ಪ್ರಜಾವಾಣಿ~ಗೆ ತಿಳಿಸಿದರು.
ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿಯನ್ನು ಈ ಹಿಂದೆ `ದತ್ತಿ ಸಂಸ್ಥೆ~ಗಳು ಎಂದು ನೋಂದಾಯಿಸಲಾಗಿತ್ತು. ಆದರೆ ವಾಣಿಜ್ಯ ವಹಿವಾಟಿನಿಂದ ಬರುವ ಲಾಭ 10 ಲಕ್ಷ ರೂಪಾಯಿಗಿಂತ ಹೆಚ್ಚಿರುವ ಹಿನ್ನೆಲೆಯಲ್ಲಿ, ತೆರಿಗೆ ಇಲಾಖೆ ಇವೆರಡೂ ಸಂಸ್ಥೆಗಳನ್ನು ದತ್ತಿ ಸಂಸ್ಥೆ ಪಟ್ಟಿಯಿಂದ ಹೊರಗಿಟ್ಟಿದೆ. 2009-10ನೇ ಸಾಲಿನಲ್ಲಿ ಕೆಎಸ್‌ಆರ್‌ಟಿಸಿ 23 ಕೋಟಿ ರೂಪಾಯಿ ಮತ್ತು ಬಿಎಂಟಿಸಿ 39.77 ಕೋಟಿ ರೂಪಾಯಿ ಆದಾಯ ತೆರಿಗೆ ಪಾವತಿಸಬೇಕಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಕಾರ್ಮಿಕರ ಸಂಘ ಖಂಡನೆ: ಸಾರಿಗೆ ಸಂಸ್ಥೆಗಳ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿರುವ ತೆರಿಗೆ ಇಲಾಖೆಯ ಕ್ರಮವನ್ನು ಖಂಡಿಸಿರುವ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮತ್ತು ಕಾರ್ಮಿಕರ ಸಂಘ, `ಇಲಾಖೆಯು ತಕ್ಷಣ ಬ್ಯಾಂಕ್ ಖಾತೆಗಳನ್ನು ಮುಕ್ತಗೊಳಿಸಬೇಕು. ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು~ ಎಂದು ಆಗ್ರಹಿಸಿದೆ.
ಸಾರಿಗೆ ಸಂಸ್ಥೆಗಳ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವ ಬದಲು ತೆರಿಗೆ ಇಲಾಖೆ ಸಮಸ್ಯೆಯ ಪರಿಹಾರಕ್ಕೆ ಕೇಂದ್ರ ಅಥವಾ ರಾಜ್ಯ ಸರ್ಕಾರದ ಮಧ್ಯಸ್ಥಿಕೆಗೆ ಒಲವು ತೋರಬಹುದಿತ್ತು ಎಂದು ಸಂಘದ ಜಂಟಿ ಕಾರ್ಯದರ್ಶಿ ಎಸ್. ನಾಗರಾಜು ಪತ್ರಿಕಾ ಹೇಳಿಕೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಎರಡು ಸಂಸ್ಥೆಗಳು ರಾಜ್ಯದಲ್ಲಿ ಜನಸಾಮಾನ್ಯರ ಬಳಕೆಗಾಗಿ ದೊಡ್ಡ ಪ್ರಮಾಣದ ಮೂಲಸೌಕರ್ಯ ನಿರ್ಮಿಸಿವೆ. ಇಂಥ ಸಂಸ್ಥೆಗಳನ್ನು ಲಾಭದ ಉದ್ದೇಶಕ್ಕಾಗಿ ಇರುವ ಕಾರ್ಪೊರೆಟ್ ಸಂಸ್ಥೆಗಳ ಜೊತೆ ಸಮೀಕರಿಸುವ ತೆರಿಗೆ ಇಲಾಖೆಯ ಕ್ರಮ ಸರಿಯಲ್ಲ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.