ADVERTISEMENT

ತೆಳ್ಳನೂರು: ಕೊಂಡೋತ್ಸವದಲ್ಲಿ ಕೆಂಡದ ನೈವೇದ್ಯ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2012, 19:30 IST
Last Updated 16 ಮಾರ್ಚ್ 2012, 19:30 IST

ಸಂತೇಮರಹಳ್ಳಿ (ಚಾಮರಾಜನಗರ ಜಿಲ್ಲೆ): ತಲೆಯ ಮೇಲೆ ಸುಡುವ ಕೆಂಡವನ್ನು ಸುರಿದುಕೊಂಡು ವಿಶಿಷ್ಟವಾಗಿ ಕೊಂಡೋತ್ಸವ ಹಬ್ಬವನ್ನು ಸಮೀಪದ ತೆಳ್ಳನೂರು ಗ್ರಾಮದಲ್ಲಿ ಶುಕ್ರವಾರ ಆಚರಿಸಲಾಯಿತು.

ಗ್ರಾಮದ ಹೊರವಲಯದಲ್ಲಿರುವ ಉರುಕಾತೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ಸುಡುತ್ತಿರುವ ಕೆಂಡವನ್ನು ರಾಶಿ ಹಾಕಲಾಗಿತ್ತು. ಪೂಜಾರಿ ಕೊಳಗದೊಂದಿಗೆ ಪ್ರದಕ್ಷಿಣೆ ಹಾಕಿ ಕೆಂಡವನ್ನು ಮೊಗೆದು ತಲೆಯ ಮೇಲೆ ಸುರಿದುಕೊಂಡು ಮತ್ತೊಂದು ಕೊಳಗ ಕೆಂಡವನ್ನು ತುಂಬಿಕೊಂಡು ದೇವಿಗೆ ನೈವೇದ್ಯ ಮಾಡುವುದು ವಿಶೇಷವಾಗಿ ಕಂಡು ಬಂತು.

  ಗ್ರಾಮದ ಜನತೆ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಕೊಂಡೋತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಗ್ರಾಮದಲ್ಲಿ ತಲೆತಲಾಂತರಗಳಿಂದ ಪ್ರತಿ ವರ್ಷ ಈ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ 9 ವರ್ಷಗಳಿಂದ ಹಬ್ಬವನ್ನು ಸ್ಥಗಿತಗೊಳಿಸಲಾಗಿತ್ತು.

ಕೊಂಡೋತ್ಸವದ ಹಿಂದಿನ ದಿನ ಪೂಜಾರಿ ಆಹಾರ ಸೇವಿಸುವುದಿಲ್ಲ. ಶುಕ್ರವಾರ ಬೆಳಗಿನ ಜಾವ ಪೂಜಾರಿಯ ಮೇಲೆ ದೇವಿ ಬಂದು ದೇವಸ್ಥಾನದಿಂದ ಜಮೀನುಗಳ ಕಡೆಗೆ ಹೋಗಿ, ಒಂದು ಮರವನ್ನು ತಬ್ಬಿದಾಗ ಆ ಹಸಿ ಮರವನ್ನು ಗ್ರಾಮಸ್ಥರು ತರಿದು ದೇವಸ್ಥಾನದ ಮುಂದೆ ತಂದು ರಾಶಿ ಮಾಡಿ ಬೆಂಕಿ ಹಾಕುತ್ತಾರೆ.
 
ಸಂಜೆವರೆಗೆ ಕೆಂಡ ಸಿದ್ಧವಾಗುತ್ತದೆ. ಗ್ರಾಮದ ಬೀದಿಗಳಿಂದ ಸತ್ತಿಗೆ, ಸೂರಿಪಾನಿಗಳೊಂದಿಗೆ ಮೆರವಣಿಗೆಯಲ್ಲಿ ಬಂದ ಪೂಜಾರಿ ಕೊಳಗದಲ್ಲಿ ಕೆಂಡ ತುಂಬಿಕೊಂಡು ತಲೆಯ ಮೇಲೆ ಸುರಿದುಕೊಂಡು, ಮತ್ತೊಂದು ಕೊಳಗದಲ್ಲಿ ದೇವಿಗೆ ನೈವೇದ್ಯ ಮಾಡುವುದು ವಿಶೇಷವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.