ADVERTISEMENT

ತ್ರಿವೇಣಿ ಪುತ್ರಿಯಿಂದ ತಂದೆಯ ಅಸ್ಥಿ ವಿಸರ್ಜನೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2012, 19:30 IST
Last Updated 21 ಅಕ್ಟೋಬರ್ 2012, 19:30 IST
ತ್ರಿವೇಣಿ ಪುತ್ರಿಯಿಂದ ತಂದೆಯ ಅಸ್ಥಿ ವಿಸರ್ಜನೆ
ತ್ರಿವೇಣಿ ಪುತ್ರಿಯಿಂದ ತಂದೆಯ ಅಸ್ಥಿ ವಿಸರ್ಜನೆ   

ಶ್ರೀರಂಗಪಟ್ಟಣ: ಹೆಸರಾಂತ ಕಾದಂಬರಿಕಾರ್ತಿ ತ್ರಿವೇಣಿ ಅವರ ಏಕಮಾತ್ರ ಪುತ್ರಿ ಮೀರಾ ಭಾನುವಾರ ಇಲ್ಲಿಗೆ ಸಮೀಪದ ಪಶ್ಚಿಮ ವಾಹಿನಿಯಲ್ಲಿ ತಮ್ಮ ತಂದೆಯ ಅಸ್ಥಿ ವಿಸರ್ಜಿಸಿದರು.

ಬೆಳಿಗ್ಗೆ 10.15ಕ್ಕೆ ಪುತ್ರಿ ಅನುಷಾ ಜತೆ ಇಲ್ಲಿಗೆ ಆಗಮಿಸಿದ ಮೀರಾ ಕುಡಿಕೆಯಲ್ಲಿ ತಂದಿದ್ದ ತಮ್ಮ ತಂದೆ ಪ್ರೊ.ಎಸ್.ಎನ್.ಶಂಕರ್ ಅವರ ಚಿತಾಭಸ್ಮವನ್ನು ಪಶ್ಚಿಮ ಮುಖಿಯಾಗಿ ಹರಿಯುವ ಕಾವೇರಿ ನದಿಯಲ್ಲಿ ಲೀನಗೊಳಿಸಿದರು. ಅ.19 ರಂದು ಮೈಸೂರಿನಲ್ಲಿ ಮೃತಪಟ್ಟಿದ್ದ ಶಂಕರ್ ಅವರ ಅಂತ್ಯಸಂಸ್ಕಾರ ಅ.20ರಂದು ನಡೆದಿತ್ತು. ಹಿಂದೂ ಸಂಪ್ರದಾಯದಲ್ಲಿ ಪಿತೃಗಳ ಅಸ್ಥಿ ವಿಸರ್ಜನೆ, ಪಿಂಡ ಪ್ರಧಾನ, ಕೇಶ ಮುಂಡನ ಇತರ ಕೈಂಕರ್ಯಗಳನ್ನು ಗಂಡು ಮಕ್ಕಳು ಮಾಡುವುದು ರೂಢಿ. ಗಂಡು ಸಂತಾನ ಇಲ್ಲದಿದ್ದರೆ ಸೋದರ ಸಂಬಂಧಿಗಳಿಂದ ಇಂತಹ ಕಾರ್ಯ ಮಾಡಿಸಲಾಗುತ್ತದೆ. ತ್ರಿವೇಣಿ ಅವರ ಪುತ್ರಿ ಈ ಸಂಪ್ರದಾಯ ದಾಟಿದ್ದಾರೆ.

ಶನಿವಾರ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸ್ಮಶಾನದಲ್ಲಿ ತಮ್ಮ ತಂದೆಯ ಚಿತೆಗೆ ದರ್ಬೆ ಇಟ್ಟು, ಅಗ್ನಿ ಸ್ಪರ್ಶ ಮಾಡಿದ್ದರು. ಭಾನುವಾರ ಅಸ್ಥಿಯನ್ನು ತಾವೇ ವಿಸರ್ಜಿಸಿದರು.

`ಮೈಸೂರಿನ ಆರ್ಯ ಸಮಾಜದ ಮಹೇಶ್ವರಿ ಅವರ ಮಾರ್ಗದರ್ಶನದಂತೆ ನಮ್ಮ ತಂದೆಯ ಅಸ್ಥಿ ವಿಸರ್ಜನೆ ಮಾಡಿದ್ದೇನೆ. ಆರ್ಯ ಸಮಾಜದ ಪದ್ಧತಿಯ ಪ್ರಕಾರ ಪಿತೃಗಳಿಗಾಗಿ ಹೆಣ್ಣು ಮಕ್ಕಳಾಗಲಿ, ಗಂಡು ಮಕ್ಕಳಾಗಲಿ ಕೇಶ ಮುಂಡನ ಮಾಡಿಸಿಕೊಳ್ಳುವ ಅಗತ್ಯ ಇಲ್ಲ. ಹಾಗಾಗಿ ನಾನೂ ಕೇಶ ಮುಂಡನ ಮಾಡಿಸಿಕೊಳ್ಳುವುದಿಲ್ಲ. ಅದು ಅರ್ಥವಿಲ್ಲದ ಆಚರಣೆ~ ಎಂದು ಮೀರಾ `ಪ್ರಜಾವಾಣಿ~ಗೆ ತಿಳಿಸಿದರು.

`ತ್ರಿವೇಣಿ ಮಂಡ್ಯದವರು. ಅವರು ತೀರಿಕೊಂಡಾಗ (1963) ನಾನು ಕೇವಲ 10 ತಿಂಗಳ ಮಗು. ಸ್ಪಷ್ಟವಾಗಿ ತಾಯಿಯ ಮುಖವನ್ನೇ ಕಂಡಿರದ ನನಗೆ ತಂದೆ ಶಂಕರ್, ತಾಯಿಯಾಗಿಯೂ ನನ್ನನ್ನು ಪೋಷಣೆ ಮಾಡಿದ್ದಾರೆ. ಹಾಗಾಗಿ ಪಿತೃ ತರ್ಪಣ ಇತರ ಅಂತಿಮ ಕಾರ್ಯಗಳನ್ನು ನಾನೇ ಮಾಡುತ್ತೇನೆ~ ಎಂದು ಹೇಳುವಾಗ ಮೀರಾ ಅವರ ಕಣ್ಣಾಲಿಗಳು ತುಂಬಿ ಬಂದಿದ್ದವು.  ಮೀರಾ ಅವರ ಪತಿ    ಹರೀಶ್ ಕುಮಾರ್ ಅಮೆರಿಕದಲ್ಲಿ ಉದ್ಯೋಗದಲ್ಲಿದ್ದಾರೆ. ಪುತ್ರ ಅಜಯ್ ತಂದೆಯ ಜತೆಯಲ್ಲೇ ಇದ್ದು ಕಾನೂನು ಪದವಿ ಓದುತ್ತಿದ್ದಾರೆ. ಪುತ್ರಿ ಅನುಷಾ ಬೆಂಗಳೂರಿನಲ್ಲಿ 12ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ.

ಲಿಂಗ ಅಸಮಾನತೆ ಏಕೆ?
`ನನ್ನ ತಾಯಿ ತ್ರಿವೇಣಿಯವರ 24 ಕಾದಂಬರಿಗಳ ಪೈಕಿ `ಸೋತು ಗೆದ್ದವಳು~ ಕಾದಂಬರಿಯಲ್ಲಿ ಮಹಿಳೆ ಪುರುಷನಿಗೆ ಸರಿಸಮನಾಗಿ ಬೆಳೆದು ನಿಲ್ಲುವ ಕಥಾವಸ್ತು ನನ್ನ ಮೇಲೆ ಗಾಢ ಪರಿಣಾಮ ಬೀರಿದೆ. ಈ ಲಿಂಗ ಅಸಮಾನತೆ ಏಕೆ ಎಂಬುದು ಇನ್ನೂ ಅರ್ಥವಾಗಿಲ್ಲ. ತಂದೆಯ ಅಂತ್ಯಸಂಸ್ಕಾರ ನಡೆಸುವುದು ನನ್ನ ಜನ್ಮಸಿದ್ಧ ಹಕ್ಕು. ಅದನ್ನು ಮಗಳಾಗಿ ನೆರವೇರಿಸಿದ್ದೇನೆ. ಅ.30ರಂದು ಪುಣ್ಯತಿಥಿಯನ್ನು ಮೈಸೂರಿನ ನಿವಾಸದಲ್ಲಿ ನಡೆಸಲಾಗುವುದು~
-ಮೀರಾ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.