ADVERTISEMENT

ದಂಡಾವತಿಗೆ ಸಿಗುವುದೇ ಕಾಯಕಲ್ಪ?

​ಪ್ರಜಾವಾಣಿ ವಾರ್ತೆ
Published 17 ಜನವರಿ 2011, 19:35 IST
Last Updated 17 ಜನವರಿ 2011, 19:35 IST

ಶಿವಮೊಗ್ಗ: ಕೃಷ್ಣಾ ನದಿ ನೀರು ಹಂಚಿಕೆ ನ್ಯಾಯಮಂಡಳಿ ಅಂತಿಮ ತೀರ್ಪು ಹೊರಬೀಳುತ್ತಿದ್ದಂತೆ ಶಿವಮೊಗ್ಗದ ದಂಡಾವತಿ, ಹಾವೇರಿಯ ಬ್ಯಾತನಾಳ ನೀರಾವರಿ ಯೋಜನೆಗಳು ಮರುಜೀವ ಪಡೆದಿವೆ. ಕೃಷ್ಣಾ ಕೊಳ್ಳದ ತುಂಗಭದ್ರಾ ಉಪಕಣಿವೆ ವ್ಯಾಪ್ತಿಯಲ್ಲಿ ಬರುವ ದಂಡಾವತಿ, ಬ್ಯಾತನಾಳ ಯೋಜನೆಗಳ ಅನುಷ್ಠಾನದ ಬಗ್ಗೆ ಚರ್ಚೆಗಳು ಈಗ ಆರಂಭವಾಗಿವೆ. 
ದಂಡಾವತಿ, ವರದಾ ನದಿಯ ಪ್ರಮುಖ ಉಪನದಿ. ಸೊರಬ ತಾಲ್ಲೂಕಿನ ಕುಪ್ಪೆ ಬಳಿ ಹೊನ್ನವಳ್ಳಿ ಗುಡ್ಡದ ಸಾಲಿನಲ್ಲಿ ಹುಟ್ಟಿ, ಬಂಕಸಾಣ ಬಳಿ ವರದಾ ನದಿ ಸೇರುತ್ತದೆ. ಇದೇ ವರದಾ ನದಿಗೆ ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ಬ್ಯಾತನಾಳದ ಬಳಿ ಅಣೆಕಟ್ಟೆ ಕಟ್ಟುವ ಉದ್ದೇಶವಿದೆ. ಆದರೆ, ಯೋಜನೆಯಿಂದಾಗಿ ಸಂತ್ರಸ್ತರಾಗುವವರು ಶಿವಮೊಗ್ಗ ಜಿಲ್ಲೆ ಸೊರಬದ ಆನವಟ್ಟಿ ಭಾಗದ ಜನರು.

ದಂಡಾವತಿಗೆ ಹಂಚಿಕೆಯಾಗಿದ್ದು 1.88 ಟಿಎಂಸಿ ನೀರು. ಬ್ಯಾತನಾಳಕ್ಕೆ 20.52 ಟಿಎಂಸಿ. ದಂಡಾವತಿ ಯೋಜನೆ ಜಾರಿಯಾದರೆ ಸೊರಬ ತಾಲ್ಲೂಕಿನ 12ಕ್ಕೂ ಹೆಚ್ಚಿನ ಹಳ್ಳಿಗಳು ಸೇರಿದಂತೆ ಅರಣ್ಯ, ವ್ಯವಸಾಯದ ಜಮೀನುಗಳು ಮುಳುಗಡೆಯಾಗುತ್ತವೆ. ಅಲ್ಲದೇ, ತಾಲ್ಲೂಕಿನ ಆನವಟ್ಟಿ ಭಾಗದ 44 ಹಳ್ಳಿ ಹಾಗೂ ಶಿಕಾರಿಪುರ ತಾಲ್ಲೂಕಿನ 6 ಹಳ್ಳಿಗಳು ನೀರಾವರಿಯಾಗುತ್ತವೆ. ಬ್ಯಾತನಾಳ ಯೋಜನೆ ಜಾರಿಯಾದರೆ ಹಾವೇರಿಯ 13 ಮತ್ತು ಶಿವಮೊಗ್ಗ ಜಿಲ್ಲೆ ಸೊರಬದ 18 ಗ್ರಾಮಗಳು ಮುಳುಗಡೆಯಾಗಲಿವೆ. 

ದಂಡಾವತಿ ನೀರಾವರಿ ಯೋಜನೆ ಜಾರಿ ಕುರಿತಂತೆ ಸ್ವಾತಂತ್ರ್ಯದ ಪೂರ್ವದಿಂದಲೂ ಚರ್ಚೆಗಳಿದ್ದವು. ಆದರೆ, ಈ ಯೋಜನೆ ಜಾರಿಗೊಳಿಸಲು ಯಾವ ಸರ್ಕಾರಗಳೂ ಮನಸ್ಸು ಮಾಡಿರಲಿಲ್ಲ. ಯಡಿಯೂರಪ್ಪ ಉಪ ಮುಖ್ಯಮಂತ್ರಿಯಾಗುತ್ತಿದ್ದಂತೆ ದಂಡಾವತಿಗೆ ಜೀವ ಕೊಟ್ಟರು. ಮುಖ್ಯಮಂತ್ರಿಯಾಗಿ ಚೊಚ್ಚಲ ಬಜೆಟ್‌ನಲ್ಲೇ 272 ಕೋಟಿ ರೂ ಮಂಜೂರು ಮಾಡಿದರು.  ‘ಹಳ್ಳಿಗಳನ್ನೇ ಮುಳುಗಿಸುವ ದಂಡಾವತಿ ನಮಗೆ ಬೇಡ’ ಎಂದು ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಯೋಜನೆ ವಿರೋಧಿಸಿದ್ದು, ಸಂತ್ರಸ್ತ ರೈತರು ಕೂಡ ದೊಡ್ಡ ಸಂಖ್ಯೆಯಲ್ಲಿ ಡ್ಯಾಂ ಬುಡದಲ್ಲೇ 100ಕ್ಕೂ ಹೆಚ್ಚು ದಿನ ಧರಣಿ ನಡೆಸಿ ಯೋಜನೆ ಪ್ರತಿಭಟಿಸಿದ್ದು, ಶಂಕುಸ್ಥಾಪನೆ ದಿನದಂದೇ ಸಂತ್ರಸ್ತ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಈಗ ಇತಿಹಾಸ.

ಈ ಮಧ್ಯೆ ದಂಡಾವತಿಗೆ ನೀರು ಹಂಚಿಕೆಗೆ ನ್ಯಾಯಾಧೀಕರಣದ ಅನುಮತಿ ಪಡೆದಿಲ್ಲ ಎಂದು ಕೃಷ್ಣಾ ನ್ಯಾಯಾಧೀಕರಣದ ಎದುರು ಕೆಲವರು ಆಕ್ಷೇಪ ಸಲ್ಲಿಸಿದಾಗ ನ್ಯಾಯಾಧೀಕರಣ ತನ್ನ ಮಧ್ಯಂತರ ತೀರ್ಪಿನಲ್ಲಿ ದಂಡಾವತಿ ಯೋಜನೆಗೆ ತಡೆಯಾಜ್ಞೆ ನೀಡಿತ್ತು. ಈಗ ಅಂತಿಮ ತೀರ್ಪು ಹೊರಬಿದ್ದಿರುವುದರಿಂದ ದಂಡಾವತಿ ಮತ್ತೆ ಜೀವ ಪಡೆದುಕೊಂಡಿದೆ.ಹಾಲಿ ನ್ಯಾಯಾಧೀಕರಣ ರಾಜ್ಯ ಕೇಳಿದ ಪಾಲಿಗಿಂತ 101 ಟಿಎಂಸಿ ನೀರು ಕಡಿಮೆ ಹಂಚಿಕೆ ಮಾಡಿದೆ. ಹಾಗಾಗಿ, ರಾಜ್ಯ ತನ್ನ ಪಾಲಿನ 911 ಟಿಎಂಸಿ ನೀರಿನಲ್ಲಿ ಕೃಷ್ಣಾ ಕೊಳ್ಳದಲ್ಲಿರುವ 20 ನೀರಾವರಿ ಯೋಜನೆಗಳಿಗೆ ಹಂಚಿಕೆ ಮಾಡುವ ಅನಿವಾರ್ಯತೆ ಎದುರಾಗಿದೆ. ಇದರಲ್ಲಿ ದಂಡಾವತಿಗೆ 1.88 ಟಿಎಂಸಿ ನೀರು ಹಂಚಬಹುದೇ ಎಂಬ ಪ್ರಶ್ನೆಗಳು ಗರಿಗೆದರಿವೆ.ದಂಡಾವತಿ ಪ್ರತಿ ಚುನಾವಣೆ ಸಂದರ್ಭದಲ್ಲಿ ಮಾತ್ರ ಸುದ್ದಿ ಮಾಡುತ್ತಿರುವುದರಿಂದ ಅದೀಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ.

‘ಎಂಜಿನಿಯರ್‌ಗಳೇ ಈ ಯೋಜನೆ ಸಾಧು ಅಲ್ಲ ಎಂಬ ವರದಿ ನೀಡಿದ್ದಾರೆ. ಆದರಲ್ಲೂ ದಂಡಾವತಿ ಪಶ್ಚಿಮಘಟ್ಟದ ವ್ಯಾಪ್ತಿಯಲ್ಲಿದೆ. ಅಷ್ಟಕ್ಕೂ ರಾಜ್ಯಕ್ಕೆ ಕೇವಲ 911 ಟಿಎಂಸಿ ನೀರು ಹಂಚಿಕೆ ಮಾಡಿರುವುದರಿಂದ ಸರ್ಕಾರ ಅಗತ್ಯ ಇರುವ ನೀರಾವರಿ ಯೋಜನೆಗಳ ಜಾರಿಗೆ ಮುಂದಾಗುತ್ತದೆ. ಇವುಗಳ ನಡುವೆಯೇ ಯೋಜನೆ ಜಾರಿಗೊಳಿಸಬೇಕಾದರೆ ಸೊರಬದ ಕೆರೆಗಳ ಹೂಳೆತ್ತಿ, ನೀರು ತುಂಬಿಸಿದರೆ ಉತ್ತಮ ನೀರಾವರಿ ಮಾಡಬಹುದು’ ಎನ್ನುತ್ತಾರೆ ದಂಡಾವತಿ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ವಾಮನಗೌಡರು.

‘ನಮಗೆ ನೀರಿನ ಮೂಲ ಯಾವುದೂ ಇಲ್ಲ. ಮಳೆ ಬಂದರೆ ಬೆಳೆ. ಹಾಗಾಗಿ, ದಂಡಾವತಿ ಯೋಜನೆ ತುರ್ತಾಗಿ ಜಾರಿಯಾಗಬೇಕು’ ಎಂಬ ಒತ್ತಾಯ ಆನವಟ್ಟಿ ಭಾಗದ ರೈತರದ್ದು.ಇನ್ನು ಬ್ಯಾತನಾಳ ಯೋಜನೆ ಜಾರಿಯಾದರೆ ಹಾವೇರಿ, ಗದಗ ಜಿಲ್ಲೆಗಳಿಗೆ ಅನುಕೂಲವಿದೆ. ಆದರೆ, ಮುಳುಗಡೆಯಾಗುವವರು ಮಾತ್ರ ಸೊರಬ ತಾಲ್ಲೂಕಿನವರು. ರ್ಕಾರಕ್ಕೆ ಈಗ ದಂಡಾವತಿ ಅಥವಾ ಬ್ಯಾತನಾಳ ಎಂಬ ಎರಡು ಆಯ್ಕೆಗಳಿವೆ. ಸರ್ಕಾರ, ಈ ಯೋಜನೆಗಳನ್ನು ರಾಜಕೀಯ ಲಾಭ- ನಷ್ಟಗಳ ತಕ್ಕಡಿಯಲ್ಲಿ ತೂಗದೆ ರೈತರ ಹಿತದೃಷ್ಟಿಯಲ್ಲಿ ತೆಗೆದುಕೊಳ್ಳಬೇಕಿದೆ ಎಂಬುದು ರೈತ ಮುಖಂಡರ ಸಲಹೆ.

ಸಾವಿರ ಎಕರೆ ಪ್ರದೇಶ ಮುಳುಗಿಸುವುದಕ್ಕಿಂತ ಮುಳುಗಡೆಯೇ ಆಗದ, ಪ್ರಸ್ತಾಪದಲ್ಲಿರುವ ಮೂಡಿ ಏತ ನೀರಾವರಿ ಯೋಜನೆ ಅಥವಾ ದಂಡಾವತಿ ತಿರುವು ಯೋಜನೆಗಳನ್ನು ಕೈಗೆತ್ತಿಕೊಳ್ಳಬಾರದೇಕೆ ಎಂಬ ಪ್ರಶ್ನೆಗಳಿವೆ. ಸೊರಬ ತಾಲ್ಲೂಕಿನಲ್ಲಿ 25ಎಕರೆಗೂ ಹೆಚ್ಚು ವಿಸ್ತೀರ್ಣದ 1,160ಕೆರೆಗಳಿವೆ. ಇವುಗಳನ್ನು ಬಳಸಿ ಹಲವು ಪ್ರದೇಶಗಳಿಗೆ ನೀರು ಕೊಡಬಹುದಾಗಿದೆ. ದಂಡಾವತಿ ನಾಲಾ ತಿರುವು ಯೋಜನೆ ಇದ್ದು, ಸಣ್ಣ ನೀರಾವರಿ ಇಲಾಖೆಯು ರೂ14ಕೋಟಿ ವೆಚ್ಚದ ಈ ಯೋಜನೆ ಸಿದ್ಧಪಡಿಸಿದೆ. ಂಡಾವತಿ ನದಿಗೆ ಅಲ್ಲಲ್ಲಿ ಸಣ್ಣಪುಟ್ಟ ಬ್ಯಾರೇಜ್‌ಗಳನ್ನು ನಿರ್ಮಿಸಿ ನೀರು ನೀಡುವ ಪ್ರಸ್ತಾವವೂ ಮುಂದಿದೆ. ಆಯ್ಕೆಗಳು ಸಾಕಷ್ಟಿವೆ. ತೀರ್ಮಾನ ಸರ್ಕಾರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.