ADVERTISEMENT

`ದಕ್ಷಿಣದ ಚಲನಚಿತ್ರ ಮಾರುಕಟ್ಟೆ ಬೆಳೆಯಲಿ'

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2012, 19:59 IST
Last Updated 23 ಡಿಸೆಂಬರ್ 2012, 19:59 IST
ಬೆಂಗಳೂರಿನಲ್ಲಿ ಭಾನುವಾರ ನಡೆದ ಐದನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಪ್ರಯುಕ್ತ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು ಹಿರಿಯ ಚಿತ್ರನಿರ್ದೇಶಕ ಕೆ.ವಿಶ್ವನಾಥ್ ಅವರಿಗೆ ಹಸ್ತಲಾಘವ ನೀಡಿದರು. ಚಿತ್ರೋತ್ಸವದ ನಿರ್ದೇಶಕ ಎಚ್.ಎನ್.ನರಹರಿರಾವ್, ಫ್ಯಾನ್ಸಿಕಾ ಸಿಲ್ವಾ, ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷೆ ತಾರಾ ಅನುರಾಧ ಚಿತ್ರದಲ್ಲಿದ್ದಾರೆ	-ಪ್ರಜಾವಾಣಿ ಚಿತ್ರ
ಬೆಂಗಳೂರಿನಲ್ಲಿ ಭಾನುವಾರ ನಡೆದ ಐದನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಪ್ರಯುಕ್ತ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು ಹಿರಿಯ ಚಿತ್ರನಿರ್ದೇಶಕ ಕೆ.ವಿಶ್ವನಾಥ್ ಅವರಿಗೆ ಹಸ್ತಲಾಘವ ನೀಡಿದರು. ಚಿತ್ರೋತ್ಸವದ ನಿರ್ದೇಶಕ ಎಚ್.ಎನ್.ನರಹರಿರಾವ್, ಫ್ಯಾನ್ಸಿಕಾ ಸಿಲ್ವಾ, ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷೆ ತಾರಾ ಅನುರಾಧ ಚಿತ್ರದಲ್ಲಿದ್ದಾರೆ -ಪ್ರಜಾವಾಣಿ ಚಿತ್ರ   

ಬೆಂಗಳೂರು: `ದಕ್ಷಿಣ ಭಾರತದಲ್ಲಿ ಚಲನಚಿತ್ರ ಮಾರುಕಟ್ಟೆ ಬೆಳೆದರೆ ಜಾಗತಿಕ ಮಟ್ಟದಲ್ಲಿ ಚಿತ್ರೋದ್ಯಮ ಗುರುತಿಸಿಕೊಳ್ಳಲು ಅನುಕೂಲವಾಗುತ್ತದೆ' ಎಂದು ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅಭಿಪ್ರಾಯಪಟ್ಟರು.
ಐದನೇ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದ ಅಂಗವಾಗಿ ನಗರದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

`ವಿದೇಶಿ ಚಿತ್ರೋತ್ಸವಗಳ ಸಂಘಟಕರಿಗೆ ಬಾಲಿವುಡ್ ಚಿತ್ರಗಳ ಹೊರತಾಗಿ ದೇಶದಲ್ಲಿ ಬೇರೆ ಭಾಷೆಗಳಲ್ಲಿ ಚಿತ್ರ ತಯಾರಾಗುತ್ತಿದೆ ಎಂಬ ಅರಿವಿರುವುದಿಲ್ಲ. ಮುಂಬೈನ ನಾಲ್ಕಾರು ಚಿತ್ರ ತಯಾರಕರನ್ನು ಹೊರತುಪಡಿಸಿದರೆ ಅವರಿಗೆ ಹೆಚ್ಚಿನ ಮಾಹಿತಿ ಲಭಿಸುವುದಿಲ್ಲ. ಬೇರೆ ಬೇರೆ ಭಾಷೆಗಳ ಮಾರುಕಟ್ಟೆ ಬೆಳೆದಾಗ ಮಾತ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುಲಭವಾಗಿ ಗುರುತಿಸಿಕೊಳ್ಳುವುದು ಸಾಧ್ಯವಾಗುತ್ತದೆ' ಎಂದರು.

`ಬ್ಯಾರಿಯಂಥ ಚಿಕ್ಕ ಭಾಷಿಕ ಸಮುದಾಯದಲ್ಲಿ ಚಿತ್ರವೊಂದು ನಿರ್ಮಾಣವಾಗಿದೆ ಎನ್ನುವುದೇ ದೊಡ್ಡ ಸುದ್ದಿಯಾಗಬೇಕಿತ್ತು. `ಸೈನೈಡ್'ನಂಥ ಚಿತ್ರಗಳು ಹೆಚ್ಚು ಜನರಿಗೆ ತಲುಪದೇ ಇರುವುದಕ್ಕೆ ಮಾರುಕಟ್ಟೆ ಅಭಿವೃದ್ಧಿಯಾಗದಿರುವುದೇ ಕಾರಣ. ಇವನ್ನೆಲ್ಲಾ ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ' ಎಂದರು.
`ಚಿತ್ರೋತ್ಸವಗಳಿಂದ ಸ್ಥಳೀಯ ಚಲನಚಿತ್ರಗಳಿಗೆ ಉತ್ತೇಜನ ದೊರೆಯುವುದರ ಜೊತೆಗೆ ಒಂದು ದೇಶದ ಭಾಷೆ ಪರಿಚಯಿಸುವುದು ಕೂಡ ಸಾಧ್ಯವಾಗುತ್ತದೆ. ಮುಖ್ಯವಾಗಿ ಅಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತದೆ. ಬಂಡವಾಳದ ಹರಿವು ಹೆಚ್ಚುತ್ತದೆ' ಎಂದು ತಿಳಿಸಿದರು.

`ಸ್ಥಾನಿಕ ಚಿತ್ರೋತ್ಸವಗಳು ನಡೆಯುತ್ತಿರುವಾಗಲೇ ಭಾರತೀಯ ಚಿತ್ರ ಸಂಸ್ಕೃತಿ ಬಿಂಬಿಸುವ  ಪನೋರಮಾ ಚಿತ್ರೋತ್ಸವಗಳು ಎಲ್ಲಾ ಊರುಗಳಿಗೆ ಸಂಚರಿಸಬೇಕು. ಬೇರೆ ದೇಶದ ಚಿತ್ರಗಳನ್ನು ಸವಿಯುವವರಿಗೆ ನಮ್ಮ ದೇಶದ ಬಗ್ಗೆ ಜಾಗೃತಿ ಮೂಡಲು ಇದರಿಂದ ಅನುಕೂಲವಾಗುತ್ತದೆ; ಎಂದರು.

`ಇದೇ ಮೊದಲ ಬಾರಿಗೆ ಉತ್ಸವದಲ್ಲಿ ರೆಟ್ರಾಸ್ಪೆಕ್ಟಿವ್ ವಿಭಾಗ ತೆರೆಯಲಾಗಿದೆ. ಇದರಿಂದ ಒಬ್ಬ ನಿರ್ದೇಶಕರ ಹಲವು ಚಿತ್ರಗಳನ್ನು ಒಟ್ಟಾಗಿ ನೋಡುವುದು ಸುಲಭವಾಗುತ್ತದೆ. ಕೇರಳ ಗೋವಾ ಚಿತ್ರೋತ್ಸವಗಳಲ್ಲಿ ಇದುವರೆಗೆ ಇಂತಹ ಸೌಲಭ್ಯವಿತ್ತು' ಎಂದು ಸ್ಮರಿಸಿದರು.

`ಚಿತ್ರೋತ್ಸವಗಳ ಕುರಿತು ಯುವಕರು ಹೆಚ್ಚು ಜಾಗೃತರಾಗಿರುವುದು ಒಳ್ಳೆಯ ಬೆಳವಣಿಗೆ. ಅಂತರ್ಜಾಲದ ಅರಿವಿರುವವರಂತೂ ಚಿತ್ರದ ಬಗ್ಗೆ ಹೆಚ್ಚು ತಿಳಿದುಕೊಂಡು ಬಂದಿರುತ್ತಾರೆ. ಇಂತಹ ಸಿದ್ಧತೆ ಪ್ರೇಕ್ಷಕನ ಜ್ಞಾನವನ್ನು ಹೆಚ್ಚಿಸಲಿದೆ' ಎಂದು ಹೇಳಿದರು.

ಇವಾನ್ಸ್ ವುಮನ್' ಚಿತ್ರದ ನಿರ್ದೇಶಕಿ ಫ್ರಾನ್ಸಿಸ್ಕಾ ಸಿಲ್ವಾ ತಮ್ಮ ಸಿನಿಮಾ ಅನುಭವಗಳನ್ನು ಹಂಚಿಕೊಂಡರು. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ತಾರಾ ಅನೂರಾಧ, ಉತ್ಸವದ ಕಲಾತ್ಮಕ ನಿರ್ದೇಶಕ ಎಚ್.ಎನ್. ನರಹರಿ ರಾವ್, ವಾರ್ತಾ ಇಲಾಖೆ ನಿರ್ದೇಶಕ ವಿಶುಕುಮಾರ್ ಈ ಸಂದರ್ಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.