ADVERTISEMENT

ದಕ್ಷಿಣ ಕನ್ನಡ ಗಲಭೆ: ಕೇಂದ್ರಕ್ಕೆ ರಾಜ್ಯಪಾಲರ ವರದಿ?

​ಪ್ರಜಾವಾಣಿ ವಾರ್ತೆ
Published 11 ಜುಲೈ 2017, 19:30 IST
Last Updated 11 ಜುಲೈ 2017, 19:30 IST
ದಕ್ಷಿಣ ಕನ್ನಡ ಗಲಭೆ:  ಕೇಂದ್ರಕ್ಕೆ ರಾಜ್ಯಪಾಲರ ವರದಿ?
ದಕ್ಷಿಣ ಕನ್ನಡ ಗಲಭೆ: ಕೇಂದ್ರಕ್ಕೆ ರಾಜ್ಯಪಾಲರ ವರದಿ?   

ಬೆಂಗಳೂರು: ಕೋಮುದ್ವೇಷಕ್ಕೆ ತುತ್ತಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಕಾನೂನು– ಸುವ್ಯವಸ್ಥೆ ಕುರಿತು ರಾಜ್ಯಪಾಲ ವಜುಭಾಯಿ ವಾಲಾ ಕೇಂದ್ರಕ್ಕೆ ವರದಿ ಕೊಡಲಿದ್ದಾರೆ.
ಬುಧವಾರ ದೆಹಲಿಗೆ ತೆರಳಲಿರುವ ವಾಲಾ ಅವರು, ರಾಷ್ಟ್ರಪತಿ ಪ್ರಣವ್ ಮುಖರ್ಜಿ ಹಾಗೂ ಗೃಹ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿ ಮಾಡಿ ಕೆಲವು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಗಲಭೆ ಕುರಿತು ವಿವರಿಸಲಿದ್ದಾರೆ.

ರಾಜ್ಯದ ಕಾನೂನು ಸುವ್ಯವಸ್ಥೆ, ಸರ್ಕಾರದ ಕಾರ್ಯವೈಖರಿ ಕುರಿತು ತಿಂಗಳಿಗೊಮ್ಮೆ ರಾಜಭವನದಿಂದ ರಾಷ್ಟ್ರಪತಿ ಮತ್ತು ಗೃಹ ಸಚಿವಾಲಯಕ್ಕೆ ವರದಿ ರವಾನಿಸುವುದು ಸಾಮಾನ್ಯ. ಆದರೆ, ದಕ್ಷಿಣ ಕನ್ನಡದಲ್ಲಿ  ಒಂದು ತಿಂಗಳಿನಿಂದ ತಣ್ಣಗಾಗದ ಕೋಮುಗಲಭೆ, ಎರಡು ಕೊಲೆ ಪ್ರಕರಣ ಹಾಗೂ ಏಳು ಚೂರಿ ಇರಿತದ ಪ್ರಕರಣಗಳನ್ನು ಉಲ್ಲೇಖಿಸಿ  ಖುದ್ದು ವರದಿ ಸಲ್ಲಿಸಲು ರಾಜ್ಯಪಾಲರು ಮುಂದಾಗಿದ್ದಾರೆ.

ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ನಿಷೇಧಾಜ್ಞೆ ಹೇರಿದ್ದರೂ ಪದೇ ಪದೇ ಗಲಭೆ, ಚೂರಿ ಇರಿತ ನಡೆಯುತ್ತಿರುವುದು, ಪರಿಸ್ಥಿತಿ ಶಾಂತ ಸ್ಥಿತಿ ಗೆ ಮರಳದೇ ಇರುವುದು, ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸರ್ಕಾರ ವಿಫಲವಾಗಿರುವುದಾಗಿ ವರದಿಯಲ್ಲಿ  ಪ್ರಸ್ತಾಪಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ದಕ್ಷಿಣ ಕನ್ನಡ ಜಿಲ್ಲೆ ಪ್ರತಿನಿಧಿಸುವ ಇಬ್ಬರು ಸಚಿವರ ಪ್ರಚೋದನೆಯಿಂದ ಕೋಮುಗಲಭೆ ಉಂಟಾಗಿದೆ. ಆರ್‌ಎಸ್‌
ಎಸ್‌, ಬಿಜೆಪಿ, ಬಜರಂಗದಳ ಕಾರ್ಯ ಕರ್ತರನ್ನು ಹತ್ಯೆ ಮಾಡಲಾಗುತ್ತಿದೆ. ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕಾದ ಸರ್ಕಾರ, ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಹೋರಾಟ ನಡೆಸುವವರನ್ನು ಬಂಧಿಸುತ್ತಿದೆ’ ಎಂದು ಬಿಜೆಪಿ ನಾಯಕರು ಆಪಾದಿಸುತ್ತಲೇ ಇದ್ದಾರೆ.
‘ಗೃಹ ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಸ್ಥಿತಿ ತಹಬಂದಿಗೆ ತರಲು ವಿಫಲರಾಗಿದ್ದು, ಅವರು ಕೂಡಲೇ ರಾಜೀನಾಮೆ ನೀಡಬೇಕು’ ಎಂದೂ ಬಿಜೆಪಿ ಆಗ್ರಹಿಸಿದೆ.

ಅರುಣ್‌ಕುಮಾರ್‌ ಬಂಟ್ವಾಳ ಎಎಸ್‌ಪಿ

ಬೆಂಗಳೂರು: ಹೊಳೆನರಸೀಪುರ ಎಎಸ್‌ಪಿ, ಐಪಿಎಸ್‌ ಅಧಿಕಾರಿ ಡಾ. ಕೆ. ಅರುಣ್‌ಕುಮಾರ್‌ ಅವರನ್ನು ಬಂಟ್ವಾಳ ಎಎಸ್‌ಪಿ ಆಗಿ ನೇಮಿಸ
ಲಾಗಿದೆ. ಈ ಸಂಬಂಧ ರಾಜ್ಯ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.

ವಾರದ ಹಿಂದೆ ವರ್ಗಾವಣೆಗೊಂಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ವೇದಮೂರ್ತಿ ಅವರ  ಜಾಗಕ್ಕೆ ಉಡುಪಿಯ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ವಿಷ್ಣುವರ್ಧನ್‌ ಅವರನ್ನು ನೇಮಿಸಲಾಗಿದೆ. ವಿಷ್ಣುವರ್ಧನ್‌ ಒಂದು ವಾರದಿಂದ ದಕ್ಷಿಣ ಕನ್ನಡದ ಪ್ರಭಾರಿಯಾಗಿದ್ದಾರು.
ಬಂಟ್ವಾಳ ಡಿವೈಎಸ್‌ಪಿ ಆಗಿದ್ದ ಸಿ.ಆರ್‌. ರವೀಶ್‌ ಅವರನ್ನು ಗಲಭೆಯ ಕಾರಣದಿಂದ ಮೊದಲೇ ವರ್ಗಾವಣೆ ಮಾಡಲಾಗಿತ್ತು.
ಕಳೆದ 3–4 ದಿನಗಳಿಂದ  ಪ್ರಕ್ಷುಬ್ಧ ವಾತಾವರಣ ನೆಲೆಸಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಕಾರಣಕ್ಕೆ ಹಿರಿಯ ಅಧಿಕಾರಿಗಳ ತಲೆದಂಡವಾಗಿದೆ ಎಂದು ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.