ADVERTISEMENT

ದತ್ತ ಪಾದುಕೆ ದರ್ಶನಕ್ಕೆ ಭಕ್ತರ ದಂಡು

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2012, 19:59 IST
Last Updated 27 ಡಿಸೆಂಬರ್ 2012, 19:59 IST

ಚಿಕ್ಕಮಗಳೂರು: ಗುರು ದತ್ತಾತ್ರೇಯ ಜಯಂತಿ ಪ್ರಯುಕ್ತ ದತ್ತಪೀಠಕ್ಕೆ ನಾಡಿನ ಮೂಲೆಮೂಲೆಯಿಂದ ಇರುಮುಡಿ ಹೊತ್ತು ಸಹಸ್ರಾರು ಸಂಖ್ಯೆಯಲ್ಲಿ ಬಂದಿದ್ದ ದತ್ತ ಮಾಲಾಧಾರಿಗಳು ಗುರುವಾರ ಶ್ರದ್ಧಾ ಭಕ್ತಿಯಿಂದ ದತ್ತ ಪಾದುಕೆಗಳ ದರ್ಶನ ಪಡೆದರು.

ಸಂಘ ಪರಿವಾರದ ನೇತೃತ್ವದಲ್ಲಿ ಮೂರು ದಿನಗಳ ಕಾಲ ನಡೆದ ದತ್ತ ಜಯಂತಿ ಉತ್ಸವಕ್ಕೆ ಇನಾಂ ದತ್ತಾತ್ರೇಯ ಪೀಠದಲ್ಲಿ ಶಾಂತಿಯುತ ತೆರೆಬಿದ್ದಿತು. ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ಮಡಿಕೇರಿ, ಬೆಂಗಳೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ ಸೇರಿದಂತೆ ವಿವಿಧ ಜಿಲ್ಲೆಗಳಿಂದ ದತ್ತಮಾಲಾಧಾರಿಗಳು ಇರುಮುಡಿ ಹೊತ್ತು ಪೀಠಕ್ಕೆ ಬಂದಿದ್ದರು. ಗುಹೆಗೆ ಹೋಗುವ ಮಾರ್ಗದಲ್ಲಿ ಅಂದಾಜು ಒಂದು ಕಿ.ಮೀ. ದೂರದವರೆಗೂ ಮಾಲಾಧಾರಿಗಳ ಸರದಿ ಸಾಲು ಕಾಣಿಸುತ್ತಿತ್ತು. ದತ್ತ ಭಜನೆ, ದೇಶ ಭಕ್ತಿಗೀತೆ ಹಾಡುತ್ತಾ ಸರದಿ ಸಾಲಿನಲ್ಲಿ ಗುಹೆ ಪ್ರವೇಶಿಸಿದ ಭಕ್ತರು ದತ್ತ ಪಾದುಕೆ ದರ್ಶನ ಪಡೆದು, ಕಾಣಿಕೆ ಅರ್ಪಿಸಿ, ಹರಕೆ ತೀರಿಸಿದರು.

ಇದಕ್ಕೂ ಮೊದಲು ನಗರದಿಂದ ವಾಹನಗಳಲ್ಲಿ ಹೊರಟ ಭಕ್ತರು ಹೊನ್ನಮ್ಮನ ಹಳ್ಳದಲ್ಲಿ ಮಿಂದು ಮಡಿಯಿಂದ ಪೀಠಕ್ಕೆ ಆಗಮಿಸಿದರು. ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ ಮತ್ತು ಬಿಜೆಪಿ ರಾಜ್ಯ ಯುವ ಮೋರ್ಚಾ ಅಧ್ಯಕ್ಷ ವಿ.ಸುನೀಲ್ ಕುಮಾರ್ ಪೀಠಕ್ಕೆ ಸುಮಾರು 8 ಕಿ.ಮೀ. ದೂರದಲ್ಲಿರುವ ಹೊನ್ನಮ್ಮನ ಹಳ್ಳದಿಂದ ನಡೆದುಬಂದು ಪಾದುಕೆಗಳ ದರ್ಶನ ಪಡೆದರು.

ಮಾಲೆ ಧರಿಸಿ ಬಂದಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಎನ್.ಜೀವರಾಜ್, ರಾಜ್ಯ ಅರಣ್ಯ ಮತ್ತು ವಸತಿಧಾಮ ನಿಗಮದ ಅಧ್ಯಕ್ಷ ಎಂ.ಕೆ.ಪ್ರಾಣೇಶ್, ಬಜರಂಗದಳದ ರಾಷ್ಟ್ರೀಯ ಸಹ ಸಂಚಾಲಕ ರಾಜೇಶ್ ಪಾಂಡೆ, ರಾಜ್ಯ ಸಂಚಾಲಕ ಸೂರ್ಯನಾರಾಯಣ, ಸಂಘ ಪರಿವಾರದ ಮುಖಂಡರಾದ ಮುನಿಯಪ್ಪ, ಮಂಜುನಾಥ್, ನಗರಸಭೆ ಅಧ್ಯಕ್ಷ ಸಿ.ಆರ್.ಪ್ರೇಮ್‌ಕುಮಾರ್, ಸಿಡಿಎ ಅಧ್ಯಕ್ಷ ಬಿ.ರಾಜಪ್ಪ, ಮುಖಂಡರಾದ ಎಚ್.ಡಿ.ತಮ್ಮಯ್ಯ,  ವರಸಿದ್ದಿ ವೇಣುಗೋಪಾಲ್, ಸ್ಥಳೀಯ ಪ್ರಮುಖರಾದ ಶಿವಶಂಕರ್, ಪ್ರೇಮ್‌ಕಿರಣ್, ಖಾಂಡ್ಯ ಪ್ರವೀಣ್, ರಘು ಇನ್ನಿತರರು ಪಾದುಕೆಗಳ ದರ್ಶನ ಪಡೆದರು.

ಇದಕ್ಕೂ ಮೊದಲು ಬೆಳಿಗ್ಗೆ ದರ್ಶನ ಶುರುವಾದಾಗ ಕಲ್ಯಾಣ ನಗರದ ಜಯಬಸವಾನಂದ ಸ್ವಾಮೀಜಿ, ಶಂಕರದೇವರ ಮಠದ ಚಂದ್ರಶೇಖರ ಸ್ವಾಮೀಜಿ, ಕಡೂರಿನ ಯಳನಾಡು ಮಠದ ಜ್ಞಾನಪ್ರಭು ಸಿದ್ದರಾಮ ಸ್ವಾಮೀಜಿ, ಬೇರುಗಂಡಿ ಮಠದ ರೇಣುಕಾ ಮಹಾಂತ ಶಿವಾಚಾರ್ಯ ಸ್ವಾಮೀಜಿ, ರುದ್ರಮುನಿ ಸ್ವಾಮೀಜಿ, ನಂದಿ ಮಠದ ವೃಷಭೇಂದ್ರ ಸ್ವಾಮೀಜಿ ದತ್ತ ಪಾದುಕೆಗಳಿಗೆ ಪುಷ್ಪಾರ್ಚನೆ ಮಾಡಿದರು.

ನ್ಯಾಯಾಲಯ ನಿರ್ಬಂಧ ವಿಧಿಸಿರುವ ಗುಹೆಯ ವ್ಯಾಪ್ತಿಯ ಹೊರಗೆ ನಿರ್ಮಿಸಿರುವ ತಾತ್ಕಾಲಿಕ ಶೆಡ್‌ನಲ್ಲಿ ಅವಧಾನಿ ರಘು ನೇತೃತ್ವದಲ್ಲಿ ಗಣ ಹೋಮ, ದತ್ತ ಹೋಮ ನಡೆಯಿತು.

ದತ್ತಾತ್ರೇಯ ಪೂಜಾ ಮೂರ್ತಿಗೆ ಸಚಿವರು ಮತ್ತು ಸಂಘ ಪರಿವಾರದ ಮುಖಂಡರು ಪೂಜೆ ಸಲ್ಲಿಸಿದರು. ನಾಲ್ಕು ವರ್ಷಗಳ ಹಿಂದೆ ಕುಸಿದಿದ್ದ ಗುಹೆಯ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು, ಭಕ್ತರ ದರ್ಶನಕ್ಕೆ ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮುಕ್ತ ಅವಕಾಶ ಕಲ್ಪಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.