ADVERTISEMENT

ದಾಖಲೆಗಳಿದ್ದರೆ ಬಹಿರಂಗಪಡಿಸಿ - ಲಾಡ್

ಎಸ್.ಆರ್‌.ಹಿರೇಮಠ್‌ಗೆ ಸಚಿವ ಸಂತೋಷ್‌ ಲಾಡ್‌ ಮನವಿ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2013, 19:59 IST
Last Updated 15 ಸೆಪ್ಟೆಂಬರ್ 2013, 19:59 IST

ಹುಬ್ಬಳ್ಳಿ: ‘ಅಕ್ರಮ ಗಣಿ ಹಗರಣದಲ್ಲಿ ನನ್ನ ಬಗ್ಗೆ ವೃಥಾ ಆರೋಪ ಮಾಡುವುದನ್ನು ಬಿಟ್ಟು ದಾಖಲೆಗಳಿದ್ದರೆ ಬಹಿರಂಗಪಡಿಸಿ’ ಎಂದು ಧಾರವಾಡದ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್‌. ಹಿರೇಮಠ ಅವರಿಗೆ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ವಾರ್ತಾ ಸಚಿವ ಸಂತೋಷ್‌ ಲಾಡ್‌ ಮನವಿ ಮಾಡಿಕೊಂಡರು.

‘ಹಿರಿಯರಾದ ಎಸ್‌ .ಆರ್‌. ಹಿರೇಮಠ ಅವರ ಬಗ್ಗೆ ಗೌರವ ಇದ್ದು, ಅದೇ ಕಾರಣಕ್ಕೆ ಮನವಿ ಮಾಡುತ್ತಿದ್ದೇನೆ. ಅಕ್ರಮ ಗಣಿಗಾರಿಕೆ ಕುರಿತಾದ ಸಿಒಡಿ, ಸಿಬಿಐ ಅಥವಾ ಲೋಕಾಯುಕ್ತ ವರದಿಯಲ್ಲಿ ನನ್ನ ಹೆಸರು ಇದ್ದರೆ ತೋರಿಸಿಕೊಡಲಿ’ ಎಂದು ಭಾನುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘ಹಿರೇಮಠ ಅವರ ಆರೋಪದಿಂದ ವೈಯಕ್ತಿಕವಾಗಿ ನೋವಾಗಿದೆ. ಹಗರಣದಲ್ಲಿ ಅನಗತ್ಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರನ್ನು ಎಳೆದು ತರುತ್ತಿರುವುದು ಸರಿಯಲ್ಲ. ಅವರ ವ್ಯಕ್ತಿತ್ವದ ಬಗ್ಗೆ ಇಡೀ ರಾಜ್ಯಕ್ಕೆ ಗೊತ್ತಿದೆ. ಅಕ್ರಮ ಗಣಿಗಾರಿಕೆ ವಿಷಯದಲ್ಲಿ ಯಾವುದೇ ಕಳಂಕಿತರನ್ನು ಮುಖ್ಯಮಂತ್ರಿ ರಕ್ಷಿಸುತ್ತಿಲ್ಲ’ ಎಂದು  ಹೇಳಿದರು.

ಹಿರೇಮಠ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಿರಾ’ ಎಂಬ ಸುದ್ದಿಗಾರರ ಪ್ರಶ್ನೆಗೆ ‘ಅಂತಹ ಯೋಚನೆ ಇಲ್ಲ. ಹಿರೇಮಠ ಅವರೊಂದಿಗೆ ಚರ್ಚಿಸಿ ಅವರಲ್ಲಿನ ಗೊಂದಲಗಳನ್ನು ಪರಿಹರಿಸುವುದಾಗಿ’ ಲಾಡ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.