ADVERTISEMENT

ದಿನಕ್ಕೊಂದು `ರಹಸ್ಯ' ಸ್ಥಳದಲ್ಲಿ ಚೆಕ್‌ಪೋಸ್ಟ್!

ಚುನಾವಣಾ ಅಕ್ರಮ ತಡೆಯಲು ಆಯೋಗದ ಕ್ರಮ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2013, 19:59 IST
Last Updated 9 ಏಪ್ರಿಲ್ 2013, 19:59 IST

ದಾವಣಗೆರೆ:  ನಿರ್ದಿಷ್ಟ ಸ್ಥಳದಲ್ಲಿ `ಚೆಕ್‌ಪೋಸ್ಟ್' ಇರುತ್ತದೆ ಎಂಬುದು ಮುಂಚಿತವಾಗಿ ಗೊತ್ತಾಗಿಬಿಟ್ಟರೆ, ರಾಜಕೀಯ ಪಕ್ಷದವರು, ಕಣದಲ್ಲಿರುವ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಚೆಕ್‌ಪೋಸ್ಟ್ ಸಿಬ್ಬಂದಿಯ ಕಣ್ತಪ್ಪಿಸಿ ಚುನಾವಣಾ ಅಕ್ರಮಗಳನ್ನು ನಡೆಸಬಹುದು. ಆದರೆ, ದಿನಕ್ಕೊಂದು ಕಡೆ ರಹಸ್ಯವಾಗಿ ಚೆಕ್‌ಪೋಸ್ಟ್ ಸ್ಥಾಪಿಸಿದರೆ?!

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಇಂಥದೊಂದು ಹೊಸ ಯೋಚನೆಯನ್ನು ಚುನಾವಣಾ ಆಯೋಗ ಮಾಡಿದೆ.
ಆಯೋಗದ ಸೂಚನೆಯಂತೆ, ದಿನಕ್ಕೊಂದು ಸ್ಥಳದಲ್ಲಿ, ಸಾರ್ವಜನಿಕರಿಗೆ ಸುಲಭವಾಗಿ ಗೊತ್ತಾಗದಂತೆ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲು ಹಾಗೂ ಈ ಮೂಲಕ ನೀತಿಸಂಹಿತೆ ಸಮರ್ಪಕ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾಮಟ್ಟದಲ್ಲಿ ಎಸ್‌ಎಸ್‌ಟಿ (ಸ್ಟಾಟಿಕ್ ಸರ್ವೆಲನ್ಸ್ ಟೀಮ್) ಕಾರ್ಯಾಚರಣೆ ನಡೆಸಲಿವೆ.

ಏನಿದು ತಂಡ?: `ಎಸ್‌ಎಸ್‌ಟಿ'ಯಲ್ಲಿ ಅಧಿಕಾರಿಯೊಬ್ಬರನ್ನು ಒಬ್ಬ ವಿಶೇಷ ದಂಡಾಧಿಕಾರಿಯನ್ನಾಗಿ ನೇಮಿಸಲಾಗುವುದು. ಅವರೊಂದಿಗೆ ಸಂಬಂಧಿಸಿದ ಪೊಲೀಸ್ ಠಾಣೆಯ ಮೂವರು ಕಾನ್‌ಸ್ಟೆಬಲ್‌ಗಳು ಇರುತ್ತಾರೆ. ಈ ತಂಡ, ತಾತ್ಕಾಲಿಕವಾಗಿ ಚೆಕ್‌ಪೋಸ್ಟ್‌ಗಳನ್ನು ರಚಿಸಿ ನಿಗಾ ವಹಿಸುತ್ತದೆ.

ನಿತ್ಯವೂ ಜಿಲ್ಲೆಯ 24 ವಿವಿಧ ಸ್ಥಳಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಹಾಕಲಾಗುವುದು. ವಾಹನಗಳಲ್ಲಿ ಅನುಮಾನಾಸ್ಪದ ವಸ್ತುಗಳನ್ನು ಸಾಗಿಸುವುದು, ಅನಧಿಕೃತವಾಗಿ ಭಾರಿ ಪ್ರಮಾಣದ ಹಣ, ಸೀರೆ, ಬಟ್ಟೆ, ಮದ್ಯ ಮೊದಲಾದವುಗಳನ್ನು ಸಾಗಣೆ ಮಾಡುವುದರ ಮೇಲೆ ದಿಢೀರ್ ತಪಾಸಣೆ ನಡೆಸಿ, ಪರಿಶೀಲಿಸಲಾಗುವುದು. ತಂಡದೊಂದಿಗೆ ಇರುವ ವಿಡಿಯೊಗ್ರಾಫರ್, ಎಲ್ಲ ಪ್ರಕ್ರಿಯೆಗಳನ್ನು ದಂಡಾಧಿಕಾರಿ ಸಮ್ಮುಖದಲ್ಲಿ ಚಿತ್ರೀಕರಿಸುತ್ತಾರೆ.

ಯಾವ ದಿನ, ಎಲ್ಲೆಲ್ಲಿ  ಎಷ್ಟು ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಬೇಕು ಎಂಬುದನ್ನು ತಂಡದ ಮುಖ್ಯಸ್ಥರೇ ನಿರ್ಧರಿಸುತ್ತಾರೆ. ಹಿಂದೆ, ಚಿತ್ರೀಕರಣ ಮಾಡುತ್ತಿರಲಿಲ್ಲ. ಈಗ, ಎಲ್ಲವನ್ನೂ `ದಾಖಲಿಸಲಾಗುವುದು'. ಇದರಿಂದ ಸಾಕ್ಷಿ ಇರುತ್ತದೆ. ಅಲ್ಲದೇ, ತಂಡದ ಮುಖ್ಯಸ್ಥರಿಗೆ ತಹಶೀಲ್ದಾರರಿಗೆ ಇರುವಷ್ಟು ಅಧಿಕಾರ ನೀಡಲಾಗಿರುತ್ತದೆ ಎಂದು ಜಿಲ್ಲಾ ಚುನಾವಣಾ ವಿಭಾಗದ ಮೂಲಗಳು `ಪ್ರಜಾವಾಣಿ 'ಗೆ ಮಾಹಿತಿ ನೀಡಿವೆ.

ಒಬ್ಬ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ, ಒಬ್ಬರು ಸಬ್ ಇನ್‌ಸ್ಪೆಕ್ಟರ್ ಹಾಗೂ ಮೂವರು ಕಾನ್‌ಸ್ಟೆಬಲ್ ಇರುವ ವಿಶೇಷ ದಳವೊಂದನ್ನು ರಚಿಸಲಾಗುತ್ತಿದೆ. ಈ ತಂಡ, ಮತದಾರರಿಗೆ ಆಮಿಷ ಒಡ್ಡುವುದರ ಕುರಿತು ದೂರು ಬಂದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತದೆ ಮತ್ತು ಇಡೀ ಪ್ರಕ್ರಿಯೆಯನ್ನು ವಿಡಿಯೊ ಮಾಡಿಕೊಳ್ಳುತ್ತದೆ. ಅಕ್ರಮ ಕಂಡುಬಂದಲ್ಲಿ ಸಂಬಂಧಿಸಿದವರ ವಿರುದ್ಧ ಪ್ರಕರಣ ದಾಖಲಿಸುತ್ತದೆ.

ಮೂರನೇ ಕಣ್ಣು ಕಾವಲು: ನೀತಿಸಂಹಿತೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ದಾಖಲೆ ಸಮೇತ ಮಾಹಿತಿ ಸಂಗ್ರಹಿಸಲು ಎರಡು ತಂಡಗಳು ಅಭ್ಯರ್ಥಿಗಳು ಹಾಗೂ ರಾಜಕೀಯ ಚಟುವಟಿಕೆಗಳ ಮೇಲೆ ಕಣ್ಣಿಡಲಿವೆ. ವಿವಿಟಿ (ವಿಡಿಯೊ ವೀವಿಂಗ್ ಟೀಮ್) ಹಾಗೂ ವಿಎಸ್‌ಟಿ (ವಿಡಿಯೊ ಸರ್ವೆಲನ್ಸ್ ಟೀಮ್) ನಿಗಾ ವಹಿಸುತ್ತವೆ. ವಿಎಸ್‌ಟಿ, ರಾಜಕೀಯ ಪಕ್ಷದವರು ಕೈಗೊಳ್ಳುವ ರ‍್ಯಾಲಿ, ಸಮಾವೇಶ, ರೋಡ್ ಷೋ ಮೊದಲಾದ ಕಾರ್ಯಕ್ರಮಗಳ ಸ್ಥಳದಲ್ಲಿ ಎಲ್ಲ ಪ್ರಕ್ರಿಯೆಗಳನ್ನು ಸೆರೆ ಹಿಡಿಯುತ್ತದೆ. ಚುನಾವಣಾ ಸಿಬ್ಬಂದಿ, ವಿಡಿಯೊಗ್ರಾಫರ್ ಒಳಗೊಂಡ ಈ ತಂಡ, ಇಡೀ ಕಾರ್ಯಕ್ರಮ ದಾಖಲಿಸುತ್ತದೆ.

ಕಾರ್ಯಕ್ರಮಕ್ಕೆ ಎಷ್ಟು ವಾಹನಗಳು ಬಂದ್ದ್ದಿದವು, ಅವುಗಳ ನೋಂದಣಿ ಸಂಖ್ಯೆ ಏನು? ಬಂದಿದ್ದ ಮುಖಂಡರು ಯಾರು ಯಾರು? ತಾರಾ ಪ್ರಚಾರಕರೇ, ಸ್ಥಳೀಯ ಮುಖಂಡರೇ, ಎಷ್ಟು ಕುರ್ಚಿಗಳನ್ನು ಹಾಕಲಾಗಿತ್ತು. ಪೆಂಡಾಲ್‌ನ ಅಳತೆ ಎಷ್ಟು... ಹೀಗೆ ಎಲ್ಲ ಸಂಗತಿಗಳನ್ನು ವಿಡಿಯೊ ಮಾಡುತ್ತದೆ. ಈ ಸಿಡಿಯನ್ನು 'ವಿವಿಟಿ' ಮುಖ್ಯಸ್ಥರಿಗೆ ನೀಡಲಾಗುತ್ತದೆ. ಈ ತಂಡ, ಸಿಡಿ ವೀಕ್ಷಿಸಿ `ಆ ಕಾರ್ಯಕ್ರಮ'ಕ್ಕೆ ಖರ್ಚೆಷ್ಟು ಎಂಬುದನ್ನು ಅಂದಾಜಿಸುತ್ತದೆ.

ಆರ್‌ಒ (ರಿಟರ್ನಿಂಗ್ ಆಫೀಸರ್) ನೇತೃತ್ವದ `ಲೆಕ್ಕಾಚಾರ ತಂಡ' ಇಷ್ಟು ಖರ್ಚಾಗಿದೆ ಎಂದು `ಷರಾ' ಬರೆಯುತ್ತದೆ. ಇದನ್ನು ಎಸ್‌ಒಆರ್ (ಶ್ಯಾಡೋ ಅಬ್ಸರ್ವೇಷನ್ ರಿಜಿಸ್ಟರ್)ನಲ್ಲಿ ನಮೂದಿಸಲಾಗುತ್ತದೆ. ಅಭ್ಯರ್ಥಿ ತೋರಿಸಿದ ವೆಚ್ಚ ಹಾಗೂ `ಎಸ್‌ಒಆರ್'ನಲ್ಲಿರುವ ಮಾಹಿತಿ ಹೋಲಿಕೆ ಮಾಡಲಾಗುತ್ತದೆ. ವ್ಯತ್ಯಾಸ ಕಂಡುಬಂದಲ್ಲಿ, ಸಂಬಂಧಿಸಿದ ಅಭ್ಯರ್ಥಿಗೆ ನೋಟಿಸ್ ಜಾರಿ ಮಾಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.