ADVERTISEMENT

ದೀಪಾವಳಿ: ರಾಕೆಟ್‌ನಂತೆ ಏರಿದ ಪ್ರಯಾಣ ದರ

ಸಾರಿಗೆ ನಿಗಮದಿಂದ 1,500 ವಿಶೇಷ ಬಸ್‌ * ರೈಲುಗಳ ಸೀಟುಗಳು ಬಹುತೇಕ ಭರ್ತಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2017, 19:30 IST
Last Updated 15 ಅಕ್ಟೋಬರ್ 2017, 19:30 IST
ದೀಪಾವಳಿ: ರಾಕೆಟ್‌ನಂತೆ ಏರಿದ ಪ್ರಯಾಣ ದರ
ದೀಪಾವಳಿ: ರಾಕೆಟ್‌ನಂತೆ ಏರಿದ ಪ್ರಯಾಣ ದರ   

ಬೆಂಗಳೂರು: ನಗರದಲ್ಲಿ ನೆಲೆಸಿರುವವರು ದೀಪಾವಳಿ ಹಬ್ಬಕ್ಕೆ ಊರಿಗೆ ಹೋಗಲು ಸಿದ್ಧತೆ ನಡೆಸಿದ್ದು, ಇದರಿಂದಾಗಿ ಬಸ್‌ಗಳಿಗೆ ಬೇಡಿಕೆ ಗಣನೀಯವಾಗಿ ಹೆಚ್ಚಿದೆ. ಪರಿಸ್ಥಿತಿಯ ಲಾಭ ಪಡೆಯಲು ಖಾಸಗಿ ಬಸ್‌ ಮಾಲೀಕರು ಪ್ರಯಾಣದರವನ್ನೂ ದುಪ್ಪಟ್ಟು ಮಾಡಿದ್ದಾರೆ.

ನಗರದಿಂದ ಇದೇ 14ರಿಂದಲೇ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ಸಾರಿಗೆ ನಿಗಮ ಹಾಗೂ ಖಾಸಗಿ ಸಂಸ್ಥೆಗಳ ಹೆಚ್ಚುವರಿ ಬಸ್‌ಗಳ ಸೇವೆ ಒದಗಿಸಿವೆ. ಬೇಡಿಕೆ ಹೆಚ್ಚಿರುವುದರಿಂದ ಖಾಸಗಿ ಸಂಸ್ಥೆಗಳು ಬಸ್‌ ಪ್ರಯಾಣ ದರವನ್ನೂ ಹೆಚ್ಚಿಸಿವೆ. ಇದೇ 18ರಿಂದ ಹಬ್ಬ ಆರಂಭವಾಗುವುದರಿಂದ 17ರಂದು ಬಸ್‌ಗಳ ಬೇಡಿಕೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈ ಕಾರಣಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆ.ಎಸ್‌.ಆರ್‌.ಟಿ.ಸಿ) ಅಂದು 1,500 ವಿಶೇಷ ಬಸ್‌ಗಳ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿದೆ. ಹೆಚ್ಚುವರಿ ಬಸ್‌ಗಳು ವಿಜಯನಗರ, ಯಶವಂತಪುರ ನಿಲ್ದಾಣಗಳಿಂದ ಹೊರಡಲಿವೆ. ನಿಗಮದ ಹಾಗೂ ಖಾಸಗಿ ಕಂಪೆನಿಗಳ ಬಸ್‌ ಪ್ರಯಾಣಕ್ಕಾಗಿ ಹಲವರು, ಈಗಾಗಲೇ ಆನ್‌ಲೈನ್‌ ಮೂಲಕ ಟಿಕೆಟ್‌ ಕಾಯ್ದಿರಿಸಿದ್ದಾರೆ.‌‌

17ರಂದು ರಾತ್ರಿ ಮೆಜೆಸ್ಟಿಕ್‌ ಸುತ್ತಮುತ್ತ ವಾಹನ ದಟ್ಟಣೆ ಉಂಟಾಗುವ ಸಾಧ್ಯತೆ ಇರುವುದರಿಂದ ಸಂಚಾರ ಪೊಲೀಸರು, ಅಂದು ಸಂಚಾರ ಮಾರ್ಗ ಬದಲಾವಣೆಗೆ ಸೂಚಿಸಿದ್ದಾರೆ. ಖಾಸಗಿ ವಾಹನಗಳು ಮೆಜೆಸ್ಟಿಕ್‌ ಬಸ್‌ ನಿಲ್ದಾಣದ ಪ್ರದೇಶವನ್ನು ಪ್ರವೇಶಿಸದಂತೆ ನಿರ್ಬಂಧ ವಿಧಿಸಿದ್ದಾರೆ.

ADVERTISEMENT

‘ಹಬ್ಬದ ಪ್ರಯುಕ್ತ ಹೆಚ್ಚಿನ ಸಂಖ್ಯೆಯ ಜನ ಬಸ್ಸಿನಲ್ಲಿ ಪ್ರಯಾಣಿಸಲಿದ್ದಾರೆ. ನಿಗಮಗಳ ಬಸ್‌ಗಳ ಪ್ರಯಾಣ ದರ ಅಷ್ಟೇನೂ ಹೆಚ್ಚಾಗಿಲ್ಲ. ಆದರೆ, ಖಾಸಗಿ  ಬಸ್‌ಗಳ ಪ್ರಯಾಣ ದರ ರಾಕೆಟ್‌ನಂತೆ ಏರಿಕೆ ಆಗಿದೆ. ಹವಾನಿಯಂತ್ರಿತ ಸ್ಲೀಪರ್‌, ನಾನ್‌ ಎ.ಸಿ ಸ್ಲೀಪರ್‌, ಎ.ಸಿ ಸೀಟರ್‌ ಹಾಗೂ ನಾನ್‌ ಎ.ಸಿ ಸೀಟರ್‌ ಬಸ್‌ಗಳ ಪ್ರಯಾಣ ದರವನ್ನು ಕಂಪೆನಿಗಳು ದುಪ್ಪಟ್ಟು ಮಾಡಿವೆ. ದುಬಾರಿ ಹಣ ಕೊಟ್ಟು ಊರಿಗೆ ಹೋಗಬೇಕಿದೆ’ ಎಂದು ಸಾಫ್ಟ್‌ವೇರ್‌ ಎಂಜಿನಿಯರ್‌ ಪಿ. ಲೋಕೇಶ್‌ ಅಳಲು ತೋಡಿಕೊಂಡರು.

ರೈಲು ಸೀಟುಗಳು ಬಹುತೇಕ ಭರ್ತಿ: ‘ಇದೇ 14ರಿಂದ 20ರವರೆಗೆ ನಗರದಿಂದ ಹೊರಡುವ ರೈಲುಗಳ  ಸೀಟುಗಳು ಭರ್ತಿ ಆಗಿವೆ. ಪ್ರತಿ ರೈಲಿನಲ್ಲೂ 300ರಿಂದ 500ರಷ್ಟು ಮಂದಿಯ ಹೆಸರುಗಳು ವೇಟಿಂಗ್‌ ಲಿಸ್ಟ್‌ನಲ್ಲಿವೆ.’

‘ಉತ್ತರ ಕರ್ನಾಟಕದ ಜಿಲ್ಲೆಗಳು ಹಾಗೂ ಹೊರರಾಜ್ಯಗಳಿಗೆ ಹೋಗುವ ರೈಲುಗಳ ಸೀಟುಗಳು ಭರ್ತಿಯಾಗಿವೆ. ರೈಲು ಹೊರಡುವ ಒಂದು ದಿನ ಮುನ್ನ ತತ್ಕಾಲ್‌ ಅಡಿ ಟಿಕೆಟ್‌ ಕಾಯ್ದಿರಿಸುವ ವ್ಯವಸ್ಥೆ ಇದೆ. ಈ ಸೀಟುಗಳು ಬೇಗನೇ ಭರ್ತಿಯಾಗುತ್ತಿವೆ’ ಎಂದು ರೈಲ್ವೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

***

‘ಪ್ರಯಾಣ ದರ ನಿಯಂತ್ರಣ– ಶೀಘ್ರ ತೀರ್ಮಾನ’

‘ಖಾಸಗಿ ಬಸ್‌ ಕಂಪೆನಿಗಳು ವಿಶೇಷ ದಿನಗಳಲ್ಲಿ ಪ್ರಯಾಣದರವನ್ನು ಶೇ 200ರಿಂದ 300ರಷ್ಟು ದರ ಏರಿಕೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ದರ ನಿಯಂತ್ರಣ ಸಂಬಂಧ ಕಠಿಣ ನಿಯಮ ರೂಪಿಸುವ ಸಂಬಂಧ ಸದ್ಯದಲ್ಲೇ ಅಧಿಕಾರಿಗಳ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಿದ್ದೇನೆ’  ಎಂದು ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರಯಾಣ ದರ ನಿಗದಿ ವಿಷಯದಲ್ಲಿ ಖಾಸಗಿ ಸಂಸ್ಥೆಗಳನ್ನು ನಿಯಂತ್ರಿಸುವ ಅಧಿಕಾರ ನಮಗಿಲ್ಲ. ಖಾಸಗಿ ಬಸ್‌ಗಳು ಪರವಾನಗಿಯ ನಿಯಮ ಉಲ್ಲಂಘಿಸಿದರೆ, ಅವುಗಳನ್ನು ತಡೆದು ಪ್ರಕರಣ ದಾಖಲಿಸುವ ಅಧಿಕಾರ ಮಾತ್ರ ನಮಗಿದೆ’ ಎಂದರು.

‘ಖಾಸಗಿ ಕಂಪೆನಿಗಳಿಗಿಂತ ಸಾರಿಗೆ ನಿಗಮದ ಬಸ್‌ಗಳ ಪ್ರಯಾಣ ದರ ಕಡಿಮೆ ಇದೆ. ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಬಸ್‌ ಸೌಕರ್ಯ ಕಲ್ಪಿಸಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.