ADVERTISEMENT

ದೂರದರ್ಶನ ಚಂದನ ಪ್ರಶಸ್ತಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2012, 19:30 IST
Last Updated 4 ನವೆಂಬರ್ 2012, 19:30 IST

ಮೈಸೂರು:  ಇದೇ ಪ್ರಥಮ ಬಾರಿಗೆ ಚಂದನ ವಾಹಿನಿಯು ನೀಡುತ್ತಿರುವ `ದೂರದರ್ಶನ ಚಂದನ ಪ್ರಶಸ್ತಿ~ಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಒಂಬತ್ತು ಮಂದಿಯನ್ನು ಆಯ್ಕೆ ಮಾಡಲಾಗಿದೆ ಎಂದು ಬೆಂಗಳೂರು ದೂರದರ್ಶನ ಕೇಂದ್ರದ ಹೆಚ್ಚುವರಿ ಮಹಾ ನಿರ್ದೇಶಕ ಡಾ.ಮಹೇಶ್ ಜೋಷಿ ಹೇಳಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚೆನ್ನವೀರ ಕಣವಿ (ಸಾಹಿತ್ಯ), ಡಾ.ಜಿ.ಎಸ್.ಪ್ರಕಾಶ್ (ಕೃಷಿ), ಮರೆಪ್ಪ ಮರೆಪ್ಪ ದಾಸರ (ಜಾನಪದ), ಪಂಡಿತ ಪಂಚಾಕ್ಷರಿ ಮತ್ತಿಗಟ್ಟಿ (ಸಂಗೀತ), ಡಾ.ಮಾಯಾರಾವ್ (ನೃತ್ಯ), ಡಾ.ಏಣಗಿ ಬಾಳಪ್ಪ (ನಾಟಕ), ಡಾ.ಆಶಾ ಬೆನಕಪ್ಪ (ಆರೋಗ್ಯ),  ಕರ್ನಾಟಕ ರಾಜ್ಯ ಈಜು ಸಂಸ್ಥೆ (ಕ್ರೀಡೆ), ಕ್ರೇಜಿ ಕರ್ನಲ್- ನಿರ್ಮಾಪಕ ಎಸ್. ಎನ್. ರಾಜೇಶ್ (ಧಾರಾವಾಹಿ) ಇವರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಪುರಸ್ಕಾರವು ಪ್ರಶಸ್ತಿ ಪತ್ರ ಮತ್ತು ಫಲಕವನ್ನು ಒಳಗೊಂಡಿರುತ್ತದೆ ಎಂದು ತಿಳಿಸಿದರು.

ಬೆಂಗಳೂರಿನ ಹೊಸೂರು ರಸ್ತೆಯ ಕ್ರೈಸ್ಟ್ ಕಾಲೇಜಿನ ಸಭಾಂಗಣದಲ್ಲಿ ನ.16ರಂದು ಸಂಜೆ 6 ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು ಪ್ರಶಸ್ತಿ ಪ್ರದಾನ ಮಾಡುವರು. ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್, ದೂರದರ್ಶನ ಕೇಂದ್ರದ ಮಹಾನಿರ್ದೇಶಕ ತ್ರಿಪುರಾರಿ ಶರಣ್ ಪಾಲ್ಗೊಳ್ಳುವರು ಎಂದರು.

ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ನ.19ರಂದು ರಾತ್ರಿ 9.30ಕ್ಕೆ ಚಂದನ ವಾಹಿನಿಯಲ್ಲಿ  ಪ್ರಸಾರ ಮಾಡಲಾಗುವುದು. ದೂರದರ್ಶನ ಚಂದನ ಪ್ರಶಸ್ತಿಗೆ ಆಯ್ಕೆಯಾಗಿರುವ ಸಾಧಕರ ಸಾಧನೆ ಹಾದಿಯ ಚಿತ್ರಣವನ್ನು ಚಂದನ ವಾಹಿನಿಯಲ್ಲಿ ಮುಂದಿನ ದಿನಗಳಲ್ಲಿ ಪ್ರಸಾರ ಮಾಡಲಾಗುವುದು ಎಂದು ಹೇಳಿದರು. 
 ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುವುದು. ಸೂಕ್ತ ಸಲಹೆಗಳಿದ್ದಲ್ಲಿ ಮುಂದಿನ ಬಾರಿ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯಲ್ಲಿ ಅಳವಡಿಸಿಕೊಳ್ಳಲಾಗುವುದು. ಮುಂದಿನ ಬಾರಿ ಶಿಕ್ಷಣ, ಕಲೆ ಇತ್ಯಾದಿ ಕ್ಷೇತ್ರಗಳಲ್ಲಿನ ಸಾಧಕರನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡುವ ಉದ್ದೇಶ ಇದೆ ಎಂದು ತಿಳಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.