ಗೋಣಿಕೊಪ್ಪಲು: ತಿತಿಮತಿ ಸಮೀಪದ ದೇವಮಚ್ಚಿ ಅಕ್ಕಿಮಾಳ ಅರಣ್ಯಕ್ಕೆ ಮಂಗಳವಾರ ಬಿದ್ದಿದ್ದ ಬೆಂಕಿ ಬುಧವಾರವೂ ಕಡಿಮೆಯಾಗಿಲ್ಲ.
ಬಿದಿರ ಹಿಂಡುಗಳಿಗೆ ಬಿದ್ದಿರುವ ಬೆಂಕಿ ಇಡೀ ಕಾಡನ್ನು ಆವರಿಸಿದ್ದು, ಅರಣ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.
ಒಣಗಿದ ಬಿದಿರು ಭೀಕರವಾಗಿ ಸಿಡಿಯುತ್ತಿದ್ದು, ಸುಮಾರು ಒಂದು ಕಿ.ಮೀ.ವರೆಗೆ ಬೆಂಕಿ ಕೆನ್ನಾಲೆಗೆ ಚಾಚುತ್ತಿದೆ. ನೂರಾರು ಮಂದಿ ಅರಣ್ಯ ಸಿಬ್ಬಂದಿ ಹಗಲು–ರಾತ್ರಿ ಕಾಳ್ಗಿಚ್ಚನ್ನು ತಹಬಂದಿಗೆ ತರಲು ಶ್ರಮಿಸುತ್ತಿದ್ದರೂ ಸಾಧ್ಯವಾಗಿಲ್ಲ. ಸ್ಥಳದಲ್ಲಿ ಎಸಿಎಫ್ ಕಾರ್ಯಪ್ಪ, ಆರ್ಎಫ್ಒ ಗೋಪಾಲ್ ಹಾಗೂ 80 ಮಂದಿ ಅರಣ್ಯ ಸಿಬ್ಬಂದಿ ಮತ್ತು ಸಾರ್ವಜನಿಕರು, ಡಿಸಿಎಫ್ ಮಾಲತಿಪ್ರಿಯ ಅವರ ನೇತೃತ್ವದಲ್ಲಿ ಬೆಂಕಿ ನಂದಿಸಲು ಶ್ರಮಿಸುತ್ತಿದ್ದಾರೆ.
ಗೋಣಿಕೊಪ್ಪಲಿನ ಅಗ್ನಿಶಾಮಕ ಮತ್ತು ತುರ್ತು ಸೇವೆ ವಾಹನ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪಾಲಿಬೆಟ್ಟ ಕಾಫಿ ಸಂಸ್ಥೆ ಎರಡು ನೀರಿನ ಟ್ಯಾಂಕುಗಳನ್ನು ನೀಡಿದೆ. ಇದರ ನೀರನ್ನು ಎರಚುವ ಮೂಲಕ ಕಾಡಿನಂಚಿನ ಮನೆಗಳಿಗೆ ಬೆಂಕಿ ಹರಡುವುದನ್ನು ತಹಬಂದಿಗೆ ತರಲಾಗುತ್ತಿದೆ.
ಇತ್ತ ಮಾವ್ಕಲ್ಲು ಅರಣ್ಯಕ್ಕೆ ಐದು ದಿನಗಳ ಹಿಂದೆ ಬಿದ್ದ ಬೆಂಕಿ ಕೂಡ ಸಂಪೂರ್ಣ ನಂದಿಲ್ಲ. ಅಲ್ಲಲ್ಲೇ ಹೊಗೆಯಾಡುತ್ತಿದ್ದು, ಗಾಳಿಗೆ ಮತ್ತೆ ಮತ್ತೆ ಜೀವ ಪಡೆಯುತ್ತಿದೆ. ದೇವಮಚ್ಚಿ ಹಾಗೂ ಮಾವ್ಕಲ್ಲು ಸೇರಿದಂತೆ ನೂರಾರು ಎಕರೆ ಅರಣ್ಯ ಬೆಂಕಿಗೆ ಆಹುತಿಯಾದಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.