ಬೆಂಗಳೂರು: ‘ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಟಿಕೆಟ್ ನಿರಾಕರಿಸಿರುವುದನ್ನು ಭಾವನಾತ್ಮಕವಾಗಿ ತೆಗೆದುಕೊಳ್ಳಲು ನಾನೇನು ಸಣ್ಣ ಹುಡುಗನಲ್ಲ. ನಾನು ದೇಶ ಸೇವೆ ಮಾಡುವ ಬಯಕೆಯುಳ್ಳ ಜವಾಬ್ದಾರಿಯುತ ವ್ಯಕ್ತಿ. ಆ ಕೆಲಸ ಮಾಡುವುದಕ್ಕೆ ನನಗೆ ಹಲವು ದಾರಿಗಳಿವೆ’ ಎಂದು ಕಾಂಗ್ರೆಸ್ ಮುಖಂಡ ಸಿ.ಕೆ.ಜಾಫರ್ ಷರೀಫ್ ಹೇಳಿದರು.
ಹೈಕಮಾಂಡ್ ವಿರುದ್ಧ ಮುನಿಸಿಕೊಂಡಿರುವ ಅವರು ‘ಪ್ರಜಾವಾಣಿ’ ಜೊತೆ ಮಾತನಾಡುತ್ತ ತಮ್ಮ
ಅಸಮಾಧಾನ ಹೊರಹಾಕಿದರು.
‘ಭವಿಷ್ಯದ ಹಾದಿ ಕುರಿತು ನನ್ನ ತಲೆಯಲ್ಲಿ ಒಂದಷ್ಟು ಯೋಚನೆಗಳಿವೆ. ಆದರೆ, ತರಾತುರಿಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ. ನಾನು ಮೆಕ್ಕಾ ಯಾತ್ರೆಗೆ ಹೋಗುತ್ತಿದ್ದೇನೆ. ಅಲ್ಲಿ ದೇವರ ಬಳಿ ಸಲಹೆ ಕೇಳುತ್ತೇನೆ. ದೇವರು ಮುಂದಿನದನ್ನು ನಿರ್ಧರಿಸುತ್ತಾನೆ’ ಎಂದು ಮುಂದಿನ ನಡೆ ಕುರಿತು ಗುಟ್ಟು ಕಾಯ್ದುಕೊಂಡರು.
ರಿಜ್ವಾನ್‌ಗೆ ಟಿಕೆಟ್ ನೀಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ ಅವರು, ‘ಆತ (ರಿಜ್ವಾನ್) ಇನ್ನೂ ಯುವಕ. ಅವರಿಗೆ ದೀರ್ಘ ಕಾಲಾವಕಾಶ ದೊರೆಯುತ್ತದೆ. ಅವರಿಗೆ ನಾಯಕರ ಬೆಂಬಲ ಇದೆ ಎಂಬ ಕಾರಣಕ್ಕೆ ಕೆಲವು ಸಂದರ್ಭದಲ್ಲಿ
ಅಂತಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ’ ಎಂದು ಸಿಟ್ಟು ಹೊರಹಾಕಿದರು.
ಸಮಾಧಾನಕ್ಕೆ ಯತ್ನ
ರಾಜ್ಯ ಕಾಂಗ್ರೆಸ್‌ನ ಉಸ್ತುವಾರಿ ಎಐಸಿಸಿ ಕಾರ್ಯದರ್ಶಿಗಳಲ್ಲಿ ಒಬ್ಬರಾಗಿರುವ ಡಾ.ಎ.ಚೆಲ್ಲಕುಮಾರ್ ಅವರು ಸಿ.ಕೆ.ಜಾಫರ್ ಷರೀಫ್ ಅವರನ್ನು ಭೇಟಿಮಾಡಿ ಸಮಾಧಾನಪಡಿಸುವ ಪ್ರಯತ್ನ ಮಾಡಿದರು.
‘ನಿಮಗೆ ಅವಮಾನ ಮಾಡುವ ಉದ್ದೇಶದಿಂದ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್ ನಿರಾಕರಿಸಿಲ್ಲ. ಪಕ್ಷದ ಹಿತದೃಷ್ಟಿಯಿಂದ ರಿಜ್ವಾನ್ ಅರ್ಷದ್ ಅವರಿಗೆ ಅವಕಾಶ ನೀಡಲಾಗಿದೆ’ ಎಂದು ಹೈಕಮಾಂಡ್ ನಿರ್ಧಾರವನ್ನು ಷರೀಫ್ ಅವರಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದಾರೆ ಎಂದು ಗೊತ್ತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.