ADVERTISEMENT

ದೊರೆಯದ ಅನುಕಂಪ ಆಧಾರದ ನೌಕರಿ

ಎಸಿಎಫ್ ಮದನ ನಾಯಕ ಹತ್ಯೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 31 ಜನವರಿ 2013, 19:59 IST
Last Updated 31 ಜನವರಿ 2013, 19:59 IST
ಹತ್ಯೆಗೀಡಾದ ಎಸಿಎಫ್ ಮದನ ನಾಯಕ, ಪತ್ನಿ ಸುಮತಿ 	(ಸಂಗ್ರಹ ಚಿತ್ರ)
ಹತ್ಯೆಗೀಡಾದ ಎಸಿಎಫ್ ಮದನ ನಾಯಕ, ಪತ್ನಿ ಸುಮತಿ (ಸಂಗ್ರಹ ಚಿತ್ರ)   

ಕಾರವಾರ: `ನಾವು ಕೇಳಿದ ಹುದ್ದೆಯನ್ನು (ಎಸಿಎಫ್ ಅಥವಾ ಆರ್‌ಎಫ್‌ಓ) ಸರ್ಕಾರ ಕೊಡುತ್ತದೆ ಎನ್ನುವ ಭರವಸೆ ನಮಗಿಲ್ಲ. ಅದರ ಆಸೆಯನ್ನೂ ಕೈಬಿಟ್ಟಿದ್ದೇವೆ. ಕೊನೇ ಪಕ್ಷ ನನ್ನ ಪತಿಯನ್ನು ಕೊಂದವರಿಗೆ ಕಠಿಣ ಶಿಕ್ಷೆಯಾಗಲಿ. ಆಗಲೇ ನಮ್ಮ ಕುಟುಂಬಕ್ಕೆ ನೆಮ್ಮದಿ'.

ಇದು ಮೇ 9ರಂದು ಹತ್ಯೆಯಾದ ದಾಂಡೇಲಿ ವನ್ಯಜೀವಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಮದನ ನಾಯಕ ಅವರ ಪತ್ನಿ ಸುಮತಿ ಅವರ ಮನವಿ.

ಪತಿಯ ಹತ್ಯೆಯಿಂದ ನೊಂದು ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ಸುಮತಿ ಗುರುವಾರ `ಪ್ರಜಾವಾಣಿ'ಯೊಂದಿಗೆ ಮಾತನಾಡಿದರು. `ಮಕ್ಕಳ ಮನವಿಯೂ ಇದೇ ಆಗಿದೆ' ಎಂದರು.

`ಹತ್ಯೆ ನಂತರ ಸಾಂತ್ವನ ಹೇಳಲು ಮನೆಗೆ ಬಂದಿದ್ದ ಅರಣ್ಯ ಸಚಿವ ಸಿ.ಪಿ.ಯೋಗೇಶ್ವರ, ಮಗಳು ಮೇಘಳಿಗೆ ತಂದೆಯ ಹುದ್ದೆ ಕೊಡುವ ಭರವಸೆ ನೀಡಿದ್ದರು. ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಸಚಿವ ಸಂಪುಟದ ಮುಂದಿಟ್ಟು ಕಾನೂನು ತೊಡಕುಗಳನ್ನು ನಿವಾರಿಸುವುದಾಗಿ ಹೇಳಿದ್ದರು. ಅಂದು ಹಾಗೆ ಹೇಳಿದವರು ಈಗ ದಿನ ದೂಡುತ್ತಿದ್ದಾರೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.

`ಮಗಳ ಭವಿಷ್ಯಕ್ಕಾಗಿ ಒಂಬತ್ತು ತಿಂಗಳಿಂದ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ, ಮೀನುಗಾರಿಕೆ ಹಾಗೂ ಅರಣ್ಯ ಸಚಿವರ ಕಚೇರಿಗಳಿಗೆ ಅಲೆದಲೆದು ಸುಸ್ತಾಗಿದೆ. ಹತ್ಯೆಯಾಗಿರುವ ಒಬ್ಬ ಪ್ರಾಮಾಣಿಕ ಅಧಿಕಾರಿಗೆ ಸರ್ಕಾರ ನೀಡುತ್ತಿರುವ ಗೌರವ ಇದೇನಾ' ಎನ್ನುವಾಗ ಅವರ ಕಣ್ಣು ತೇವವಾಗಿತ್ತು.

`ಮುಖ್ಯಮಂತ್ರಿಗಳು ಸೇರಿದಂತೆ ನಾನು ಭೇಟಿ ಮಾಡಿರುವ ಎಲ್ಲ ಸಚಿವರು ಸಂಪುಟ ಸಭೆಯಲ್ಲಿ  ವಿಷಯ ಪ್ರಸ್ತಾಪಿಸುತ್ತೇವೆ' ಎಂದು ಹೇಳಿದ್ದನ್ನು ಬಿಟ್ಟರೆ ಬೇರೆ ಯಾವ ಪ್ರಕ್ರಿಯೆಗಳು ಆಗಲಿಲ್ಲ. ಈ ಕಾರಣಕ್ಕಾಗಿಯೇ ಅದರ ಬಗ್ಗೆ ವಿಚಾರ ಮಾಡುವುದನ್ನೇ ಬಿಟ್ಟಿದ್ದೇವೆ' ಎಂದು ನೋವಿನಿಂದ ನುಡಿದರು.

`ಸರಳ, ಶಾಂತ ಸ್ವಭಾವದ ಅಧಿಕಾರಿ ಮದನ ನಾಯಕ ಹೆಸರನ್ನು ಯಾವುದಾದರೊಂದು ಸ್ಥಳಕ್ಕೆ ಇಡಬೇಕು ಎಂದು ಮನವಿ ಮಾಡಿಕೊಂಡಿದ್ದೇನೆ. ಆದರೆ ಇಲಾಖೆ ಇಲ್ಲಿಯವರೆಗೆ ಅದಕ್ಕೂ ಸ್ಪಂದಿಸಿಲ್ಲ' ಎಂದರು.

`ಒಬ್ಬ ಅಧಿಕಾರಿಯನ್ನು ಕೊಂದವರಿಗೆ ಜಾಮೀನು ಸಿಕ್ಕಿರುವ ಸುದ್ದಿ ತಿಳಿದು ಆಘಾತವಾಯಿತು. ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡದಿದ್ದರೆ ಹೋರಾಟಕ್ಕೆ ಇಳಿಯುತ್ತೇನೆ' ಎಂದು ಸುಮತಿ ಹೇಳಿದರು.

`ಪತಿಯ ಸಾವಿಗೆ ದಾಂಡೇಲಿ ಡಿವೈಎಸ್‌ಪಿ ಸಾರಾ ಫಾತಿಮಾ, ಇನ್‌ಸ್ಪೆಕ್ಟರ್ ವಿದ್ಯಾಧರ ಬಾಯ್ಕೆರಿಕರ್, ಸಬ್‌ಇನ್‌ಸ್ಪೆಕ್ಟರ್ ಪ್ರವೀಣ ನೀಲಮ್ಮನವರ ಅವರೂ ಕಾರಣರಾಗಿದ್ದಾರೆ. ಅವರ ಮೇಲೆ ಇಲಾಖೆ ಇಲ್ಲಿಯವರೆಗೆ ಕ್ರಮ ಕೈಗೊಳ್ಳದೇ ಇರುವುದಕ್ಕೆ ಸುಮತಿ ಅಸಮಾಧಾನ ವ್ಯಕ್ತಪಡಿಸಿದರು.

ಜಾತಿ ನಿಂದನೆ ಪ್ರಕರಣ
ಮದನ ನಾಯಕ, ಪತ್ನಿ ಸುಮತಿ, ಮಕ್ಕಳಾದ ಮೇಘಾ ಹಾಗೂ ಶಿಶಿರ್ ಮೇಲೆ ಹಲ್ಲೆ ನಡೆಸಿದ್ದಲ್ಲದೇ  ಅವರ ವಿರುದ್ಧ ಜಾತಿ ನಿಂದನೆ ಪ್ರಕರಣವನ್ನೂ ದುಷ್ಕರ್ಮಿಗಳು ದಾಖಲಿಸಿದ್ದರು.

ಈ ಪ್ರಕರಣವನ್ನು ಹಿಂದೆ ಪಡೆಯಬೇಕು ಎಂದು ನಾಯಕ ಅವರ ಕುಟುಂಬ ಆಗ್ರಹಿಸಿತ್ತು. ಆದರೂ ಸರ್ಕಾರ ಈ ಬಗ್ಗೆ ಇದುವರೆಗೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಅವರ ಸಂಬಂಧಿಕರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.