ADVERTISEMENT

ದ್ವಿಪತ್ನಿತ್ವ: ಎಚ್‌ಡಿಕೆ ವಿರುದ್ಧ ಪಿಐಎಲ್

​ಪ್ರಜಾವಾಣಿ ವಾರ್ತೆ
Published 20 ಜನವರಿ 2012, 19:30 IST
Last Updated 20 ಜನವರಿ 2012, 19:30 IST

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ದ್ವಿಪತ್ನಿತ್ವ ಹಗರಣದಲ್ಲಿ ಸಿಲುಕಿದ್ದು, ಇವರ ವಿರುದ್ಧ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದೆ.

ಶಶಿಧರ ಬೆಳಗುಂಬ ಎನ್ನುವವರು ಈ ಅರ್ಜಿ ಸಲ್ಲಿಸ್ದ್ದಿದಾರೆ. ಮೊದಲ ಪತ್ನಿ ಅನಿತಾ ಬದುಕಿರುವಾಗಲೇ, ಚಿತ್ರನಟಿ ರಾಧಿಕಾರನ್ನು ಇವರು ವಿವಾಹವಾಗಿದ್ದಾರೆ ಎನ್ನುವುದು ಅವರ ಆರೋಪ.

ಹಿಂದು ವಿವಾಹ ಕಾಯ್ದೆಯನ್ನು ಉಲ್ಲಂಘಿಸಿ ಇವರು ಎರಡನೇ ಮದುವೆ ಆಗಿರುವ ಹಿನ್ನೆಲೆಯಲ್ಲಿ ಸಂಸದ ಸ್ಥಾನದಿಂದ ಅವರನ್ನು ವಜಾಗೊಳಿಸಲು ಆದೇಶಿಸಬೇಕು ಎಂದು ಅದರಲ್ಲಿ ಕೋರಲಾಗಿದೆ.

`ಅನಿತಾರ ಜೊತೆ ವಿವಾಹ ಆಗಿರುವ ಬಗ್ಗೆಯಾಗಲೀ ಅಥವಾ ರಾಧಿಕಾರ ಜೊತೆಗಿನ ತಮ್ಮ ಸಂಬಂಧದ ಕುರಿತಾಗಲೀ ಯಾವತ್ತಿಗೂ ಕುಮಾರಸ್ವಾಮಿ ಅಲ್ಲಗಳೆದಿಲ್ಲ. ಹಿಂದು ಜನಾಂಗದ  ವ್ಯಕ್ತಿಯೊಬ್ಬರು ಈ ರೀತಿ ದ್ವಿಪತ್ನಿತ್ವ ಅನುಸರಿಸಿರುವುದು ಭಾರತೀಯ ದಂಡ ಸಂಹಿತೆಯ 495ನೇ ಕಲಮಿನ ಅಡಿ ಅಪರಾಧ. ಎಲ್ಲ ಜನತೆಗೂ ಕಾನೂನು ಒಂದೇ ತೆರನಾಗಿ ಇದೆ. ಇವರು ಗಣ್ಯ ವ್ಯಕ್ತಿ ಎಂಬ ಕಾರಣಕ್ಕೆ ಕ್ರಮ ತೆಗೆದುಕೊಳ್ಳದೇ ಇರುವುದು ಸರಿಯಲ್ಲ~ ಎಂದು ಅವರು ದೂರಿದ್ದಾರೆ.

ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ಶುಕ್ರವಾರ ವಿಚಾರಣೆ ಮುಂದೂಡಿದೆ.

ತಡೆಯಾಜ್ಞೆ ವಿಸ್ತರಣೆ

ಕೆರೆ ಕಾಮಗಾರಿಯೊಂದಕ್ಕೆ ಸಂಬಂಧಿಸಿದಂತೆ  ಸ್ಪೀಕರ್ ಕೆ.ಜಿ.ಬೋಪಯ್ಯ ಅವರ ವಿರುದ್ಧ ಲೋಕಾಯುಕ್ತ ಪೊಲೀಸರು ನಡೆಸುತ್ತಿರುವ ತನಿಖೆಗೆ ನೀಡಲಾಗಿದ್ದ ತಡೆಯಾಜ್ಞೆಯನ್ನು ಇದೇ 25ರವರೆಗೆ ವಿಸ್ತರಿಸಿ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ.

ಕೊಡಗು ಜಿಲ್ಲೆಯ ದೊಡ್ಡರೇಷ್ಮೆಹಡ್ಲು ಕೆರೆ ಕಾಮಗಾರಿಯಲ್ಲಿ ವಂಚನೆ ಎಸಗಿರುವ ಆರೋಪ ಇವರ ಮೇಲಿದೆ. ಈ ಆರೋಪಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲಾ ಪಂಚಾಯಿತಿ ಸದಸ್ಯೆ ಕೇಚಮಾಡ ಸರಿತಾ ಪೂಣಚ್ಚ ಅವರು ಲೋಕಾಯುಕ್ತಕ್ಕೆ ದೂರು ದಾಖಲು ಮಾಡ್ದ್ದಿದರು. ಈ ದೂರಿನ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲು ಮಾಡಿದ್ದಾರೆ. ಮಡಿಕೇರಿಯ ಸೆಷನ್ಸ್ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಇವುಗಳ ರದ್ದತಿಗೆ ಅವರು ಹೈಕೋರ್ಟ್ ಅನ್ನು ಕೋರಿದ್ದಾರೆ. ನ್ಯಾಯಮೂರ್ತಿ ಸುಭಾಷ್ ಬಿ. ಅಡಿ ಅವರು ವಿಚಾರಣೆ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.