ADVERTISEMENT

`ಧಾರವಾಡಕ್ಕಿದೆ ಜಗಳದ ಇತಿಹಾಸ'

​ಪ್ರಜಾವಾಣಿ ವಾರ್ತೆ
Published 25 ಜನವರಿ 2013, 19:59 IST
Last Updated 25 ಜನವರಿ 2013, 19:59 IST
`ಲೇಖಕರೊಂದಿಗೆ ಸಂವಾದ'ದಲ್ಲಿ ಡಾ.ಚಂದ್ರಶೇಖರ ಪಾಟೀಲ ಮಾತನಾಡಿದರು. ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ ಇದ್ದಾರೆ
`ಲೇಖಕರೊಂದಿಗೆ ಸಂವಾದ'ದಲ್ಲಿ ಡಾ.ಚಂದ್ರಶೇಖರ ಪಾಟೀಲ ಮಾತನಾಡಿದರು. ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ ಇದ್ದಾರೆ   

ಧಾರವಾಡ: `ಯಾವುದೇ ಸಾಹಿತ್ಯಕ್ಕೆ ಸಾಮಾಜಿಕ ದೃಷ್ಟಿಕೋನ ಬಹಳ ಮುಖ್ಯ. ಬದುಕಿನಿಂದ ವಿಮುಖವಾದ ಸಾಹಿತ್ಯ  ಮುಖ್ಯವಾಗುವುದಿಲ್ಲ' ಎಂದು ಹಿರಿಯ ಕವಿ, ನಾಟಕಕಾರ ಡಾ. ಚಂದ್ರಶೇಖರ ಪಾಟೀಲ (ಚಂಪಾ) ಇಲ್ಲಿ ಅಭಿಪ್ರಾಯಪಟ್ಟರು.

ಸಾಹಿತ್ಯ ಸಂಭ್ರಮದ ಮೊದಲ ದಿನದ ಕೊನೆಯ ಗೋಷ್ಠಿ `ಲೇಖಕರೊಂದಿಗೆ ಸಂವಾದ'ದಲ್ಲಿ ಸಭಿಕರ ಪ್ರಶ್ನೆಗಳಿಗೆ ಉತ್ತರಿಸಿದ ಅವರು `ಆದಿಕವಿ ಪಂಪನಿಂದ ನಮ್ಮೆಲ್ಲ ಸಾಹಿತಿಗಳ ಉದ್ದೇಶ ಕೂಡ ಇದೇ ಆಗಿದೆ' ಎಂದರು.

ಸಂವಾದದುದ್ದಕ್ಕೂ ತಮ್ಮ ಎಂದಿನ ಹಾಸ್ಯ, ಲೇವಡಿ, ತುಂಟತನ, ಚುಚ್ಚುಮಾತುಗಳಿಂದಲೇ ಉತ್ತರಿಸುತ್ತ ಸಾಗಿದ ಅವರು, ನಿರಂತರವಾಗಿ ತಾವು ದ.ರಾ. ಬೇಂದ್ರೆ ಅವರೊಂದಿಗೆ  ಜಗಳವಾಡಿದ್ದನ್ನು ಸಮರ್ಥಿಸಿ ಕೊಂಡರು. ಆದರೆ ಬೇಂದ್ರೆ ಅವರೊಂದಿಗೆ ವೈಚಾರಿಕ ಜಗಳ ಬೇರೆ, ಕವಿ `ಅಂಬಿಕಾತಯನದತ್ತ'ರ ಕವನಗಳಿಗೆ ಮನಸೋಲುವುದು  ಬೇರೆ. `ಶಂಬಾ ಜೋಷಿ, ಬೇಂದ್ರೆಯವರ ಜಗಳದ ಮುಂದೆ ನಮ್ಮದೇನಲ್ಲ. ಧಾರವಾಡಕ್ಕೆ ಜಗಳದ್ದೇ ಆದ ಬಹುದೊಡ್ಡ ಇತಿಹಾಸವಿದೆ' ಎಂದು ಹಾಸ್ಯಮಾಡಿದರು.

`ನೀವು ಏನೇ  ಬರೆದರೂ ವಿವಾದವಾಗುತ್ತದಲ್ಲ' ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, `ನಾನು ವಿವಾದಕ್ಕೆ ಒಳಗಾಗಲಿ ಎಂದು ಬರೆಯವುದಿಲ್ಲ. ಆದರೆ ಒಂದು ನಿರ್ದಿಷ್ಟ ತತ್ವ ಸಿದ್ಧಾಂತಗಳಿಗೆ ಬದ್ಧವಾಗಿ ಬರೆಯುವುದರಿಂದ ಅದು ವಿವಾದವಾಗುತ್ತದೆ' ಎಂದರು.

`ನೀವು ಸಾಹಿತ್ಯಕ್ಕಿಂತ ರಾಜಕಾರಣದ ವಿಷಯಗಳಿಗೆ ಹೆಚ್ಚು ಹತ್ತಿರವಾಗುತ್ತಿದ್ದೀರಲ್ಲ, ಯಾಕೆ ರಾಜಕಾರಣಿ ಆಗಬಾರದು' ಎನ್ನುವ ಪ್ರಶ್ನೆಗೆ `ಜೆಪಿ ಚಳವಳಿಯಲ್ಲಿ ಪಾಲ್ಗೊಂಡಾಗಿನಿಂದಲೇ ನಾನು ಒಂದರ್ಥದಲ್ಲಿ ರಾಜಕಾರಣದಲ್ಲಿ ಧುಮುಕಿದ್ದೆ. ಅದು ನನಗೆ ಹೊಸದೇನಲ್ಲ. ನನ್ನ ವ್ಯಕ್ತಿತ್ವವೇ ಹಾಗೇ. ಓದು, ಬರಹ, ಹೋರಾಟ, ಚಳವಳಿ, ನನ್ನ ಬದುಕೇ ಹೋರಾಟದ್ದು. ಅದನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ' ಎಂದರು.

`ಹಿರಿಯ ವಿಮರ್ಶಕ ಡಾ.ಚಿದಾನಂದ ಮೂರ್ತಿ ಅವರನ್ನು ಪದೇ ಪದೇ ಟೀಕಿಸಲು ಕಾರಣ' ಎನ್ನುವ ಸಭಿಕರೊಬ್ಬರ ಪ್ರಶ್ನೆಗೆ ಉತ್ತರಿಸಿದ ಅವರು, `ಅವರ ಬಗ್ಗೆ ನನಗೆ ಅಪಾರ ಗೌರವ ಇದೆ. ಗೋಕಾಕ್ ಚಳವಳಿಯವರೆಗೂ ಅವರ ಬಗ್ಗೆ ಗೌರವವಿತ್ತು. ನಂತರ ಅವರು ಕೇಸರೀಕರಣದತ್ತ ಒಲವು ತೋರಿಸಲು ಪ್ರಾರಂಭಿಸಿದಾಗಿನಿಂದ ಕಡಿಮೆಯಾಗಿದೆ' ಎಂದು ನಕ್ಕರು. ತಮ್ಮ ಎರಡು ಕವನಗಳನ್ನು ಚಂಪಾ ಇದೇ ಸಂದರ್ಭದಲ್ಲಿ ವಾಚಿಸಿದರು.
ಕವಿ. ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ ಗೋಷ್ಠಿಯ ನಿರ್ದೇಶಕರಾಗಿದ್ದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.