ADVERTISEMENT

ಧಾರವಾಡದ ವೈದ್ಯ ಸೌದಿಯಲ್ಲಿ ಸೆರೆ:ಬೆಂಗಳೂರು ಸಿಸಿಬಿ ಪೊಲೀಸರ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2012, 19:30 IST
Last Updated 10 ಅಕ್ಟೋಬರ್ 2012, 19:30 IST

ಹುಬ್ಬಳ್ಳಿ: ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಶಂಕಿತ ಉಗ್ರ ಡಾ. ಅಬ್ದುಲ್ ಗನಿ ಉಸ್ಮಾನ್ ಖಾನ್ ಎಂಬಾತನನ್ನು ವಶಕ್ಕೆ ಪಡೆದಿರುವ ಬೆಂಗಳೂರಿನ ಸಿಸಿಬಿ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಮಂಗಳವಾರ ಬೆಂಗಳೂರಿಗೆ ಕರೆ ತಂದಿದ್ದಾರೆ.

ರಿಯಾದ್‌ನ ನ್ಯಾಷನಲ್ ಗಾರ್ಡ್ ಆಸ್ಪತ್ರೆಯಲ್ಲಿ ಅರಿವಳಿಕೆ ತಜ್ಞನಾಗಿದ್ದ ಅಬ್ದುಲ್‌ನನ್ನು ಕೇಂದ್ರ ಗೃಹ ಇಲಾಖೆ ಮನವಿ ಮೇರೆಗೆ ಸೌದಿ ಅರೇಬಿಯಾ ಪೊಲೀಸರು ಆಸ್ಪತ್ರೆಯಲ್ಲಿಯೇ ಬಂಧಿಸಿ ಸಿಸಿಬಿ ಅಧಿಕಾರಿಗಳ ವಶಕ್ಕೆ ನೀಡಿದರು ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ತನಿಖಾಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ಖಚಿತಪಡಿಸಿದರು.

ಬಂಧಿತನನ್ನು ಬೆಂಗಳೂರಿನ ಅಜ್ಞಾತ ಸ್ಥಳದಲ್ಲಿ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ. ಹುಬ್ಬಳ್ಳಿ, ಬೆಂಗಳೂರು, ಹೈದರಾಬಾದ್ ಹಾಗೂ ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಇತ್ತೀಚೆಗೆ ಬಂಧಿತರಾದ 14 ಮಂದಿ ಶಂಕಿತ ಉಗ್ರರ ಪೈಕಿ ಕೆಲವರಿಗೆ ಸೌದಿ ಅರೇಬಿಯಾದಿಂದ ಈತ ನೆರವು ನೀಡುತ್ತಿದ್ದ ಎನ್ನಲಾಗಿದೆ.

ಲಷ್ಕರ್-ಎ-ತೊಯ್ಬಾ ಸಂಘಟನೆಯ ದಕ್ಷಿಣ ಭಾರತದ ಚಟುವಟಿಕೆಗಳನ್ನು ನಿಯಂತ್ರಿಸುತ್ತಿದ್ದ ಪ್ರಮುಖ ಕಮಾಂಡರ್‌ನೊಂದಿಗೆ ಸಂಪರ್ಕ ಹೊಂದಿ ಅಲ್ಲಿಂದಲೇ ಉಗ್ರಗಾಮಿ ಚಟುವಟಿಕೆಗೆ ಅಗತ್ಯ ನೆರವು ನೀಡುತ್ತಿದ್ದ ಎಂಬ ಮಾಹಿತಿ ಬಂಧಿತರ ವಿಚಾರಣೆ ವೇಳೆ ಬಯಲಿಗೆ ಬಂದಿತ್ತು.

ಧಾರವಾಡದ ಸಪ್ತಾಪುರದ ನಿವಾಸಿಯಾದ ಡಾ.ಅಬ್ದುಲ್ ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡಿದ್ದು, ತಾಯಿ ಫಾತಿಮಾ ಖಾನ್ ಜತೆ ನೆಲೆಸಿದ್ದ. ಈತನ ಹಿರಿಯ ಸಹೋದರ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ವಿಜಾಪುರದ ಬಿಎಲ್‌ಡಿಇ ವೈದ್ಯಕೀಯ ಕಾಲೇಜಿನಲ್ಲಿ 2004-05ರಲ್ಲಿ ಎಂಬಿಬಿಎಸ್ ವ್ಯಾಸಂಗ ಮುಗಿಸಿ 2008ರಲ್ಲಿ ಇಲ್ಲಿನ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯದ (ಕಿಮ್ಸ) ಅರಿವಳಿಕೆ ವಿಭಾಗದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪದವಿ ಪಡೆದಿದ್ದ.

ಈತನ ಚಿಕ್ಕಪ್ಪ ಸೌದಿ ಅರೇಬಿಯಾದಲ್ಲಿ ಆಟೊಮೊಬೈಲ್ ಉದ್ಯಮವೊಂದರಲ್ಲಿ ತಂತ್ರಜ್ಞರಾಗಿ ಕೆಲಸ ಮಾಡುತ್ತಿದ್ದ ಹಿನ್ನೆಲೆಯಲ್ಲಿ 2010ರಲ್ಲಿ ಅಲ್ಲಿಗೆ ತೆರಳಿ, ವೈದ್ಯಕೀಯ ವೃತ್ತಿಯಲ್ಲಿ ತೊಡಗಿದ್ದ. ಮಗ ಸೌದಿಗೆ ತೆರಳಿದ ನಂತರ ತಾಯಿ ಫಾತಿಮಾ ಅವರು ಧಾರವಾಡದ ಮನೆ ಖಾಲಿ ಮಾಡಿಕೊಂಡು ಹಿರಿಯ ಮಗನೊಂದಿಗೆ ಬೆಂಗಳೂರಿನ ಶಾಂತಿನಗರದಲ್ಲಿ ವಾಸವಿದ್ದಾರೆ ಎಂದು ತಿಳಿದುಬಂದಿದೆ.

ಶಂಕಿತ ಉಗ್ರ ಡಾ.ಜಾಫರ್ ಇಕ್ಬಾಲ್ ಸೊಲ್ಲಾಪುರಿ ಕಿಮ್ಸನಲ್ಲಿ ಈತನ ಕಿರಿಯ ಸಹಪಾಠಿಯಾಗಿದ್ದು, ಆಗಿನಿಂದಲೂ ನಿಕಟ ಸಂಪರ್ಕ ಹೊಂದಿದ್ದ. ಡಾ. ಗನಿ ಸಹಾಯದಿಂದಲೇ ಜಾಫರ್ ಇಕ್ಬಾಲ್ ಪಾಕಿಸ್ತಾನಕ್ಕೆ ತೆರಳಿದ್ದ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.