ADVERTISEMENT

ಧೈರ್ಯ ಇದ್ದರೆ ವರದಿ ತಿರಸ್ಕರಿಸಿ: ಹೆಗ್ಡೆ ಸವಾಲು

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2011, 19:30 IST
Last Updated 14 ಅಕ್ಟೋಬರ್ 2011, 19:30 IST

ಬೆಂಗಳೂರು: `ಧೈರ್ಯವಿದ್ದರೆ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ತನಿಖಾ ವರದಿಯನ್ನು ಯಾವುದೇ ಕಾರಣ ನೀಡದೇ ತಿರಸ್ಕರಿಸಲಿ. ವರದಿ ನೀಡಿದ ನನಗೆ ಕಾನೂನಿನ ಪರಿಜ್ಞಾನ ಇಲ್ಲ ಎಂಬರ್ಥ ಕಲ್ಪಿಸುವ ಗೊಂದಲಗಳನ್ನು ಹಬ್ಬಿಸುವುದು ಬೇಡ~ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅವರು ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದರು.


ಲೋಕಾಯುಕ್ತ ವರದಿಗೆ ಸಂಬಂಧಿಸಿದಂತೆ ಮೂರು ಅಂಶಗಳ ಬಗ್ಗೆ ಲೋಕಾಯುಕ್ತದಿಂದಲೇ ಸಲಹೆ ಪಡೆಯಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಈ ಬಗ್ಗೆ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, `ನಾನು ಕಾನೂನಿನ ವ್ಯಾಪ್ತಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಕಾನೂನಿನ ಅಡಿಯಲ್ಲಿ ಲೋಕಾಯುಕ್ತರು ಹೊಂದಿರುವ ಅಧಿಕಾರವನ್ನು ಮಾತ್ರವೇ ಬಳಸಿದ್ದೇನೆ~ ಎಂದರು.

ಯಾರ ಹೆಸರನ್ನೂ ಬಿಟ್ಟಿಲ್ಲ: `ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಹೆಸರನ್ನು ನಾನು ವರದಿಯಿಂದ ಕೈಬಿಟ್ಟಿಲ್ಲ. ಕಾನೂನಿನ ಪ್ರಕಾರ ನಾನು ರಾಜ್ಯಪಾಲರಿಗೆ ವರದಿ ಸಲ್ಲಿಸಿದ್ದೆ. ಹಿಂದಿನ ರಾಜ್ಯಪಾಲರು ಧರ್ಮಸಿಂಗ್ ವಿರುದ್ಧದ ಆರೋಪಗಳನ್ನು ಕೈಬಿಡುವ ನಿರ್ಧಾರ ಕೈಗೊಂಡಿದ್ದಾರೆ. ಆದರೂ, ಅವರಿಂದ ನಷ್ಟ ವಸೂಲಿ ಮಾಡಲು ರಾಜ್ಯ ಸರ್ಕಾರಕ್ಕೆ ಅವಕಾಶ ಇತ್ತು. ಯಾವುದೇ ಕ್ರಮ ಕೈಗೊಳ್ಳದೆ ಕಾಲಹರಣ ಮಾಡಿದವರು ಈಗ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ~ ಎಂದು ಹೇಳಿದರು.

`2004ರವರೆಗೂ ಮುಖ್ಯಮಂತ್ರಿ ಹುದ್ದೆಯಲ್ಲಿ ಇದ್ದವರ ಹೆಸರು ಸೇರಿಸಿಲ್ಲ ಎಂಬ ಕಾರಣಕ್ಕೆ ಎಲ್ಲರೂ ಟೀಕಿಸುತ್ತಿದ್ದಾರೆ. ಆದರೆ, ತನಿಖೆಯ ಅವಧಿಯಲ್ಲಿ ಸರ್ಕಾರ ಒದಗಿಸಿದ ದಾಖಲೆಗಳು ಮತ್ತು ನಾವು ಪತ್ತೆಮಾಡಿದ ವಿಷಯಗಳ ಆಧಾರದಲ್ಲಿ ಮಾತ್ರ ವರದಿ ನೀಡಲು ಸಾಧ್ಯ. ಯಾವುದೇ ದಾಖಲೆಗಳ ಆಧಾರವಿಲ್ಲದೇ ಯಾರ ವಿರುದ್ಧವೂ ಆರೋಪ ಮಾಡಲಾಗದು.
 
ಕಾಂಗ್ರೆಸ್‌ಗೆ ಸಹಾಯ ಮಾಡುವ ಉದ್ದೇಶದಿಂದ ವ್ಯಕ್ತಿಯೊಬ್ಬರ ಹೆಸರನ್ನು ವರದಿಯಲ್ಲಿ ಪ್ರಸ್ತಾಪಿಸಿಲ್ಲ ಎಂಬ ವದಂತಿ ಹಬ್ಬಿಸಲಾಗುತ್ತಿದೆ. ಆದರೆ, ಇದೇ ವರದಿಯ ವಿಷಯದಲ್ಲಿ ಕಾಂಗ್ರೆಸ್ ಮುಖಂಡರೇ ನನ್ನ ಮೇಲೆ ನಿರಂತರ ವಾಗ್ದಾಳಿ ನಡೆಸುತ್ತಿದ್ದರು ಎಂಬುದು ಆರೋಪ ಮಾಡುವವರಿಗೆ ಗೊತ್ತಿಲ್ಲವೇ~ ಎಂದು ಸಂತೋಷ್ ಹೆಗ್ಡೆ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT