ADVERTISEMENT

ನಂಬಿಕೆ ಲೋಕ; ತಾಕಲಾಟ

‘..ನಾವು ಏನನ್ನು ನೆಚ್ಚಿ ಬರೆಯುತ್ತಿದ್ದೇವೆ?’ ಗೋಷ್ಠಿ: ಯುವ ಸಾಹಿತಿಗಳ ಬಿಚ್ಚುನುಡಿ

ಪ್ರಕಾಶ ಕುಗ್ವೆ
Published 19 ಜನವರಿ 2019, 20:00 IST
Last Updated 19 ಜನವರಿ 2019, 20:00 IST
‘ನಮ್ಮ ನಂಬಿಕೆಯ ಲೋಕ: ನಾವು ಏನನ್ನು ನೆಚ್ಚಿ ಬರೆಯುತ್ತಿದ್ದೇವೆ?’ ಗೋಷ್ಠಿಯಲ್ಲಿ ಕವಿ ವೀರಣ್ಣ ಮಡಿವಾಳರ ಸಭಿಕರ ಪ್ರಶ್ನೆಗೆ ಉತ್ತರಿಸಿದ ಕ್ಷಣ. ಕವಿಗಳಾದ ರಾಜೇಂದ್ರ ಪ್ರಸಾದ್, ಶ್ರೀದೇವಿ ಕೆರೆಮನೆ, ಎಚ್‌.ಎಸ್. ವೆಂಕಟೇಶಮೂರ್ತಿ, ಕಥೆಗಾರ ಟಿ.ಎಸ್‌. ಗೊರವರ ಇದ್ದರು ಪ್ರಜಾವಾಣಿ ಚಿತ್ರ: ಬಿ.ಎಂ. ಕೇದಾರನಾಥ
‘ನಮ್ಮ ನಂಬಿಕೆಯ ಲೋಕ: ನಾವು ಏನನ್ನು ನೆಚ್ಚಿ ಬರೆಯುತ್ತಿದ್ದೇವೆ?’ ಗೋಷ್ಠಿಯಲ್ಲಿ ಕವಿ ವೀರಣ್ಣ ಮಡಿವಾಳರ ಸಭಿಕರ ಪ್ರಶ್ನೆಗೆ ಉತ್ತರಿಸಿದ ಕ್ಷಣ. ಕವಿಗಳಾದ ರಾಜೇಂದ್ರ ಪ್ರಸಾದ್, ಶ್ರೀದೇವಿ ಕೆರೆಮನೆ, ಎಚ್‌.ಎಸ್. ವೆಂಕಟೇಶಮೂರ್ತಿ, ಕಥೆಗಾರ ಟಿ.ಎಸ್‌. ಗೊರವರ ಇದ್ದರು ಪ್ರಜಾವಾಣಿ ಚಿತ್ರ: ಬಿ.ಎಂ. ಕೇದಾರನಾಥ   

ಧಾರವಾಡ: ‘ನಮಗೆ ನಿರ್ದಿಷ್ಟ ನಂಬಿಕೆಯ ಲೋಕದ ಸಿದ್ಧಾಂತ ಇಲ್ಲ. ಯಾವುದನ್ನು ನೆಚ್ಚಿ ಬರೆಯುತ್ತಿದ್ದೇವೆ ಎನ್ನುವುದೂ ಇನ್ನೂ ಸ್ಪಷ್ಟವಾಗಿಲ್ಲ. ನಮ್ಮ ಬದುಕು, ಪರಂಪರೆ, ಅನುಭವ, ಅಭಿರುಚಿಗಳೇ ನಮ್ಮ ನಂಬಿಕೆಯ ಲೋಕ ಹಾಗೂ ಅವುಗಳನ್ನೇ ನೆಚ್ಚಿ ಬರೆಯುತ್ತಿದ್ದೇವೆ....’

ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ ಎರಡನೇ ದಿನ ಶನಿವಾರದ ಮೊದಲ ಗೋಷ್ಠಿ ‘ನಮ್ಮ ನಂಬಿಕೆಯ ಲೋಕ: ನಾವು ಏನನ್ನು ನೆಚ್ಚಿ ಬರೆಯುತ್ತಿದ್ದೇವೆ?’ ಕುರಿತ ಗೋಷ್ಠಿಯಲ್ಲಿ ಬಹುತೇಕ ಯುವ ಸಾಹಿತಿಗಳು, ಕವಿಗಳು ನೀಡಿದ ಸ್ಪಂದನ ಇದು.

ಕವಿ ರಾಜೇಂದ್ರ ಪ್ರಸಾದ, ‘ಮೊದಲು ಪ್ರೇಮ ನೆಚ್ಚಿ, ನಂತರ ವಿಚಾರ, ಆಮೇಲೆ ಸಿದ್ಧಾಂತ, ಈಗ ಶೂನ್ಯ ನೆಚ್ಚಿ ಕವಿತೆ ಬರೆಯುತ್ತಿದ್ದೇನೆ. ನನಗೆ ಅಡುಗೆ ಮಾಡುವುದು ಕಾವ್ಯದಂತೆ, ಚಿತ್ರಕಲೆಯೂ ಕವಿತೆಯಂತೆ ಕಾಣುತ್ತದೆ. ನನ್ನ ಅಭಿರುಚಿಯೇ ನನ್ನ ನಂಬಿಕೆಯ ಲೋಕ. ಪರಂಪರೆಯನ್ನು ನೆಚ್ಚಿಕೊಂಡು ಕಾವ್ಯಕೃಷಿಯಲ್ಲಿ ತೊಡಗುತ್ತೇನೆ’ ಎಂದರು.‌

ADVERTISEMENT

ಕಥೆಗಾರ ಟಿ.ಎಸ್‌. ಗೊರವರ ಪ್ರತಿಕ್ರಿಯಿಸಿ, ‘ಯಾವುದನ್ನು ನೆಚ್ಚಿಕೊಂಡು ಬರೆಯುತ್ತಿದ್ದೇನೆಂದು ಕರಾರುವಕ್ಕಾಗಿ ಹೇಳಲು ಆಗುತ್ತಿಲ್ಲ. ಸೃಜನಶೀಲ ಶೋಧದ ಹಾದಿ ಇನ್ನೂ ಇರುವುದರಿಂದ ಕೆಲ ಚಹರೆಗಳನ್ನಷ್ಟೇ ದಾಖಲಿಸುತ್ತೇನೆ. ನಾನು ಬೆಳೆದು ಬಂದ ಪರಿಸರ, ತಂದೆ– ತಾಯಿ, ಹಿನ್ನೆಲೆಗಳನ್ನು ಹೇಳುತ್ತಾ ಹೋದರೆ ಅದೊಂದು ಗೋಳಾಟದ ಕಥೆ ಆಗಿಬಿಡುವ ಅಪಾಯ ಇದೆ. ಇಂತಹದೊಂದು ಲೋಕಕ್ಕೆ ಜೀವಚೈತನ್ಯ ತುಂಬುವುದಷ್ಟೇ ನನ್ನ ಕೆಲಸ’ ಎಂದು ವಿಶ್ಲೇಷಿಸಿದರು.

ಇವರೆಲ್ಲರಿಗಿಂತ ಭಿನ್ನ ನಿಲುವು ಕವಯಿತ್ರಿ ಶ್ರೀದೇವಿ ಕೆರೆಮನೆ ಅವರದ್ದು. ‘ನನ್ನ ಸುತ್ತಲಿನ ಪರಿಸರವೇ ನನ್ನ ನಂಬಿಕೆಯ ಲೋಕ. ಸ್ತ್ರೀ ಸಂವೇದನೆಯನ್ನೇ ನೆಚ್ಚಿ ಬರೆಯುತ್ತಿದ್ದೇನೆ’ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

‌‘ನಿಮ್ಮ ಕವಿತೆಗಳಲ್ಲಿ ‘ನಾವು’ ಹೆಚ್ಚಾಗಿ ಬರುತ್ತದೆ. ಇದು ‘ನಾನು’ ಕೇಂದ್ರಿತ ಕಾಲ. ಹೀಗೇಕೆ?’ ಎಂದು ಗೋಷ್ಠಿ ನಿರ್ದೇಶಕ ಡಾ.ಎಚ್‌.ಎಸ್. ವೆಂಕಟೇಶಮೂರ್ತಿ ಪ್ರಶ್ನಿಸಿದಾಗ, ಅದಕ್ಕೂ ಶ್ರೇದೇವಿ ಅವರು, ‘ಇದು ನನ್ನೊಬ್ಬಳದ್ದೇ ಸಂಕಷ್ಟ ಅಲ್ಲ. ಹೆಣ್ಣು ಎನ್ನುವ ಕಾರಣಕ್ಕೆ ಹೆಣ್ಣು ಮಕ್ಕಳಿಗೆ ಸಾಕಷ್ಟು ಅಡೆ–ತಡೆಗಳು ಎದುರಾಗುತ್ತವೆ. ಆ ಎಲ್ಲಾ ಹೆಣ್ಣುಗಳ ಪ್ರತಿನಿಧಿ ನಾನು. ಹಾಗಾಗಿ, ಕವಿತೆಗಳಲ್ಲಿ ‘ನನ್ನ’ ಬದಲು ‘ನಾವು’ ಬರುತ್ತದೆ’ ಎಂದು ಉತ್ತರಿಸಿದರು.

‘ಕವಿತೆ ಎನ್ನುವುದು ಅತ್ಯಂತ ಖಾಸಗಿಯದ್ದು; ಏಕಾಂತದಲ್ಲಿ ಸಂಭ್ರಮಿಸುವಂತಹದ್ದು. ಅದರ ಅಂಗಛೇದ ಕಷ್ಟದ ಕೆಲಸ’ ಎಂದು ವೆಂಕಟೇಶಮೂರ್ತಿ ಸೂಚ್ಯವಾಗಿ ಹೇಳಿ, ಗೋಷ್ಠಿ ಮುಕ್ತಾಯಗೊಳಿಸಿದರು.

ವಿಮರ್ಶಕ ಅಳಿವಿನ ಅಂಚಿನ ಪ್ರಾಣಿ!

ಇಂದು ಜಗತ್ತಿನಲ್ಲಿ ಅಳಿವಿನ ಅಂಚಿನಲ್ಲಿರುವ ಟಾಪ್‌ ಫೈವ್ ಪ್ರಾಣಿಗಳಲ್ಲಿ ವಿರ್ಮಶಕನೂ ಒಬ್ಬ.

ಹೀಗೆಂದು ಚಟಾಕಿ ಹಾರಿಸುತ್ತಲೇ ಚರ್ಚೆಗೆ ತಿದಿ ಒತ್ತಿದರು ಹಿರಿಯ ವಿಮರ್ಶಕ ಓ.ಎಲ್‌. ನಾಗಭೂಷಣಸ್ವಾಮಿ.ಸಾಹಿತ್ಯ ಸಂಭ್ರಮ ಟ್ರಸ್ಟ್‌ ಅಧ್ಯಕ್ಷ ರಾಘವೇಂದ್ರ ಪಾಟೀಲ ಅವರು, ವಿಮರ್ಶಾ ನ್ಯಾಯ ನಿಮಗೆ ಸಿಕ್ಕಿದೆಯೇ ಎಂದು ವೇದಿಕೆಯಲ್ಲಿನ ಯುವ ಸಾಹಿತಿಗಳನ್ನು ಪ್ರಶ್ನಿಸಿದಾಗ ಈ ಚರ್ಚೆಯನ್ನುನಾಗಭೂಷಣಸ್ವಾಮಿ ಮುಂದುವರಿಸಿದರು.

‘ವಿಮರ್ಶಕ ಇಂದು ಹಲವು ರೀತಿಯ ಒತ್ತಡಗಳಿಗೆ ಸಿಲುಕಿದ್ದಾನೆ. ಒತ್ತಡದಲ್ಲಿ ವಿಮರ್ಶೆ ಬರೆದರೂ ತಾನು ಅಪೇಕ್ಷಿಸಿದ ರೀತಿಯಲ್ಲಿ ಬರೆದಿಲ್ಲ ಎಂಬ ಕಾರಣಕ್ಕೆ ಹಲವರು ಮುನ್ನುಡಿ ಕೈಬಿಟ್ಟ ಉದಾಹರಣೆಗಳಿವೆ. ಕೆಲವರಿಗೆ ಹೊಗಳಿದರೆ, ‘ಸುಮ್ಮನೆ ಹೊಗಳುತ್ತಿದ್ದೀರಿ; ನಿಜ ಹೇಳುತ್ತಿಲ್ಲ’ ಎಂದು ಆಕ್ಷೇಪಿಸುತ್ತಾರೆ.ವಿಮರ್ಶೆಯಲ್ಲಿ ಕವಿ ಬಗ್ಗೆ ಮೌಲ್ಯಮಾಪನ ಮಾಡುತ್ತಿಲ್ಲ; ಕವಿತೆ ಬಗ್ಗೆ ಮಾಡುತ್ತಿದ್ದೇನೆ ಎಂದು ನಂಬಿಸುವುದು ಬರೆದ ಕವಿಗಿಂತಲೂ ಕಷ್ಟದ ಕೆಲಸ ವಿಮರ್ಶಕನದ್ದು’ ಎಂದರು.

‘ಕವಿಗೆ, ಕವಿತೆ ಪ್ರಕಟವಾದಾಗ ಓದುಗರು ನೀಡುವ ಸ್ಪಂದನ ತಟ್ಟಿದ ಹಾಗೆ ವಿಮರ್ಶೆ ತಟ್ಟುವುದಿಲ್ಲ. ವಿಮರ್ಶಕ ಸ್ಪಂದನ ಇಟ್ಟುಕೊಂಡು ಬರೆದರೆ ಜತೆ ವಿಮರ್ಶಕರೇ ಉಗಿದು ಉಪ್ಪಿನಕಾಯಿ ಹಾಕುತ್ತಾರೆ’ ಎಂದು ತಮಾಷೆಯಾಗಿಯೇ ಹೇಳಿದರು.

*ಏಕಲವ್ಯ ಬೆರಳು ಕತ್ತರಿಸಿಕೊಟ್ಟ ಯಾತನೆ ನನ್ನನ್ನು ಕಾಡುತ್ತಿದ್ದು, ಆ ಕಳೆದುಕೊಂಡ ಬೆರಳುಗಳ ಹುಡುಕಾಟವೇ ನನ್ನ ಕಾವ್ಯದ ಲೋಕ.
ವೀರಣ್ಣ ಮಡಿವಾಳರ, ಕವಿ

*ನನ್ನ ಬರವಣಿಗೆಯ ಹಿಂದಿನ ತಾತ್ವಿಕತೆ ಹೆಣ್ತನ. ಇದು ನನಗೆ ಸ್ಪಷ್ಟವಾಗಿದ್ದರಿಂದಲೇ ನಾನು ಮತ್ತಷ್ಟು ಜವಾಬ್ದಾರಿಯಿಂದ ಬರೆಯಲು ಸಾಧ್ಯವಾಗಿದೆ.
–ಶ್ರೀದೇವಿ ಕೆರೆಮನೆ,ಕವಯತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.