ADVERTISEMENT

ನಕಲಿ ಉತ್ತರ ಪತ್ರಿಕೆ ಜಾಲ ಪತ್ತೆ: ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 15 ಮೇ 2012, 19:30 IST
Last Updated 15 ಮೇ 2012, 19:30 IST

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದಲ್ಲಿ ನಕಲಿ ಉತ್ತರಪತ್ರಿಕೆ, ಅಂಕಪಟ್ಟಿ, ಪ್ರಮಾಣಪತ್ರಗಳನ್ನು ಸೃಷ್ಟಿಸುತ್ತಿದ್ದ ವ್ಯವಸ್ಥಿತ ಜಾಲದ ಆರು ಜನ ಆರೋಪಿಗಳನ್ನು ಭದ್ರಾವತಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಬಂಧಿತರಿಂದ ಉತ್ತರಪತ್ರಿಕೆ ಹಾಗೂ ಅಂಕಪಟ್ಟಿಗಳನ್ನು ಸೃಷ್ಟಿಸಲು ಬಳಸುತ್ತಿದ್ದ ಸೀಲು, ಉತ್ತರ ಪತ್ರಿಕೆ ಹಾಗೂ ಅಂಕಪಟ್ಟಿ ಬಂಡಲ್, ರೂ 2.30ಲಕ್ಷ ನಗದು ಸೇರಿದಂತೆ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳೆಲ್ಲರೂ ವಿಶ್ವವಿದ್ಯಾಲಯದ ಉದ್ಯೋಗಿಗಳಾಗಿದ್ದು, ಪರೀಕ್ಷಾಂಗ ವಿಭಾಗ ಸೇರಿದಂತೆ ಬೇರೆ ಬೇರೆ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದರು. 

ಖಚಿತ ಮಾಹಿತಿ ಮೇರೆಗೆ ಈ ಉದ್ಯೋಗಿಗಳ ನಿವಾಸಗಳಿರುವ ಲಕ್ಕವಳ್ಳಿ, ಶಂಕರಘಟ್ಟ ಸೇರಿದಂತೆ ವಿ.ವಿ ಸುತ್ತಮುತ್ತ ಎಂಟು ಕಡೆಗಳಲ್ಲಿ ಭದ್ರಾವತಿ ಡಿವೈಎಸ್ಪಿ ಪಿ. ಶ್ರೀಧರರಾವ್ ನೇತೃತ್ವದ ತಂಡ ದಾಳಿ ನಡೆಸಿತು.

ಶಿವಕುಮಾರ್, ದೂದ್ಯನಾಯ್ಕ, ರಾಮು, ಸಿದ್ದಾಚಾರ್, ದೇವರಾಜ್ ಹಾಗೂ ಶಶಿಕುಮಾರ್ ಆರೋಪಿಗಳಾಗಿದ್ದು, ಇವರಲ್ಲಿ ದೇವರಾಜ್ ಮತ್ತು ಶಶಿಕುಮಾರ್ ಏಜೆನ್ಸಿ ಮೂಲಕ ವಿಶ್ವವಿದ್ಯಾಲಯದಲ್ಲಿ ನೇಮಕಗೊಂಡ ನೌಕರರು.

ದಾಳಿ ವೇಳೆಯಲ್ಲಿ ವಿಶ್ವವಿದ್ಯಾಲಯದ ಕುಲಪತಿ ಸೇರಿದಂತೆ ಎಲ್ಲ ಉನ್ನತ ಹುದ್ದೆಗಳ ಸೀಲುಗಳು, 2 ಸಾವಿರ ಖಾಲಿ ಉತ್ತರಪತ್ರಿಕೆಗಳು, ಸಾಕಷ್ಟು ನಕಲಿ ಅಂಕಪಟ್ಟಿಗಳು, ನಕಲಿ ಪದವಿ ಪ್ರಮಾಣಪತ್ರಗಳು, ವಿಶ್ವವಿದ್ಯಾಲಯದ ಲೆಟರ್‌ಹೆಡ್‌ಗಳು ಪತ್ತೆಯಾಗಿವೆ.

ಅಲ್ಲದೇ, ಶಿವಕುಮಾರ್ ಅವರ ಮನೆಯಲ್ಲಿ ರೂ 1.62 ಲಕ್ಷ ನಗದು, ದೂದ್ಯನಾಯ್ಕ ಮನೆಯಲ್ಲಿ ರೂ 78 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ. ಈ ಹಣವನ್ನು ಕಸದ ಬುಟ್ಟಿಯಲ್ಲಿ ತುರುಕಿದ್ದು, ದಾಳಿ ವೇಳೆಯಲ್ಲಿ ಕಂಡುಬಂದಿದೆ.

`ಕರ್ನಾಟಕ ಗೃಹ ಮಂಡಳಿಯ ಸಹಾಯಕ ಎಂಜಿನಿಯರ್ ಹಾಲೇಶಪ್ಪ ಪ್ರಕರಣದ ಜಾಡು ಹಿಡಿದು ತನಿಖೆ ಆರಂಭಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಈ ಜಾಲದಲ್ಲಿ ಉನ್ನತ ಹುದ್ದೆಯ ಅಧಿಕಾರಿಗಳು ಶಾಮೀಲಾಗಿರುವ ಸಂಶಯಗಳಿವೆ.
 
ಇನ್ನಷ್ಟು ತನಿಖೆಯ ಅಗತ್ಯವಿದೆ. ಬಹಳಷ್ಟು ವರ್ಷಗಳಿಂದ ಈ ಜಾಲ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿತ್ತು ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ~ ಎಂದು ಡಿವೈಎಸ್ಪಿ ಶ್ರೀಧರರಾವ್ `ಪ್ರಜಾವಾಣಿ~ಗೆ ತಿಳಿಸಿದರು.  

`ಎಂಟು ಸ್ಥಳಗಳಲ್ಲಿ ದಾಳಿ ನಡೆಸಲಾಯಿತು. ಸೋಮವಾರ ಸಂಜೆ ಏಳು ಗಂಟೆಗೆ ಆರಂಭವಾದ ಕಾರ್ಯಾಚರಣೆ, ಮಂಗಳವಾರ ಮಧ್ಯಾಹ್ನ ಮೂರು ಗಂಟೆಯವರೆಗೆ ನಡೆಯಿತು~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.