ADVERTISEMENT

ನಕಲಿ ಮದ್ಯ ತಯಾರಿ ಆತಂಕ: ತಿಮ್ಮಾಪೂರ್‌

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2017, 19:30 IST
Last Updated 28 ಅಕ್ಟೋಬರ್ 2017, 19:30 IST

ಬೆಂಗಳೂರು: ‘ಕೈಗಾರಿಕೆಗಳಿಗೆ ಸ್ಪಿರಿಟ್ ಪೂರೈಕೆಗಿದ್ದ ನಿರ್ಬಂಧವನ್ನು ಕೇಂದ್ರ ಸರ್ಕಾರ ಸಡಿಲಿಸಿರುವುದರಿಂದ ನಕಲಿ ಮದ್ಯ ತಯಾರಿಕೆ ಆತಂಕ ಎದುರಾಗಿದೆ’ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ್‌ ಹೇಳಿದರು.

ಮಾಧ್ಯಮ ಪ್ರತಿನಿಧಿಗಳ ಜೊತೆ ಶನಿವಾರ ಮಾತನಾಡಿದ ಅವರು, ‘ಕೈಗಾರಿಕೆಗಳಿಗೆ ಸ್ಪಿರಿಟ್ ಪೂರೈಕೆಗೆ ನಿಯಂತ್ರಣ ಹೇರುವ ಅಗತ್ಯವಿದೆ. ಈ ಸಂಬಂಧ ಶೀಘ್ರದಲ್ಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು’ ಎಂದರು.

‘ಡಿಸ್ಟಿಲರಿಗಳಿಂದ ಕೈಗಾರಿಕೆಗಳಿಗೆ ಪೂರೈಕೆಯಾಗುವ ಸ್ಪಿರಿಟ್‌ ಮೇಲೆ ನಿಯಂತ್ರಣ ಹೇರುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇತ್ತು. ಆದರೆ, ಕೇಂದ್ರ ಸರ್ಕಾರ ಹೊಸ ಕಾಯ್ದೆ ಜಾರಿಗೆ ತಂದ ಬಳಿಕ ಆ ಅಧಿಕಾರ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

ADVERTISEMENT

ಹೊಸ ಪರವಾನಗಿ ಇಲ್ಲ: ‘ಜನಸಂಖ್ಯೆ ಆಧರಿಸಿ ಹೊಸ ಮದ್ಯದಂಡಿಗಳಿಗೆ ಪರವಾನಗಿ ನೀಡಬೇಕೆಂಬ ಬೇಡಿಕೆ ಬಹುದಿನಗಳಿಂದ ಇದೆ. ಆದರೆ, ಈ ಸಂಬಂಧ ಸಮಾಲೋಚನೆ ನಡೆಸಲಾಗುವುದು’ ಎಂದ ಅವರು, ಹೊಸ ಮದ್ಯದಂಗಡಿಗಳಿಗೆ ಪರವಾನಗಿ ನೀಡಲು ತೀವ್ರ ವಿರೋಧವಿದೆ ಎಂದರು.

‘ರಾಜ್ಯದಲ್ಲಿ ಹೊಸದಾಗಿ 900 ಎಂಎಸ್‌ಐಎಲ್ ಮದ್ಯದಂಗಡಿ ತೆರೆಯಲು ಕ್ರಮ ವಹಿಸಿದ್ದು, ಈ ಪೈಕಿ ಈಗಾಗಲೇ 139 ಅಂಗಡಿಗಳನ್ನು ತೆರೆಯಲಾಗಿದೆ. ಮದ್ಯದ ದರ ಪಟ್ಟಿಯಲ್ಲಿನ ಚಿಲ್ಲರೆ ಸಮಸ್ಯೆ ಸರಿಪಡಿಸಲಾಗುವುದು’ ಎಂದು ಅವರು ತಿಳಿಸಿದರು.

‘ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಮದ್ಯ ಪೂರೈಸುವ ವಸತಿಗೃಹಗಳಿಗೆ (ಲಾಡ್ಜ್) ಪರವಾನಗಿ ನೀಡುವ ವಿಷಯದಲ್ಲಿ ಇರುವ ಷರತ್ತು ಸಡಿಲಿಸಲಾಗುವುದು. ಕೊಠಡಿಗಳ ಸಂಖ್ಯೆ ಕಡಿಮೆ ಇದ್ದರೂ ಪರವಾನಗಿ ನೀಡಲು ಉದ್ದೇಶಿಸಲಾಗಿದೆ’ ಎಂದೂ ಸಚಿವರು ಹೇಳಿದರು.

‘ರಾಜ್ಯದಾದ್ಯಂತ ಶಾಲಾ ಕಾಲೇಜುಗಳ ಆವರಣಗಳಲ್ಲಿ ಮಾದಕ ವಸ್ತುಗಳ ಮಾರಾಟ ನಿಯಂತ್ರಣಕ್ಕೆ ಅಬಕಾರಿ ತನಿಖಾದಳ ಬಲಪಡಿಸಲಾಗಿದೆ. ಶಿವಮೊಗ್ಗ, ಉಡುಪಿ, ಮಂಗಳೂರು, ಕೋಲಾರ ಮತ್ತು ಬೆಂಗಳೂರಿನಲ್ಲಿ ತನಿಖಾ ತಂಡ ಚುರುಕುಗೊಳಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.