ADVERTISEMENT

ನಕ್ಸಲರಿಗಾಗಿ ಶೋಧ: ಸಿಕ್ಕವರು ಬಾಲಕರು

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2012, 19:42 IST
Last Updated 28 ನವೆಂಬರ್ 2012, 19:42 IST
ಚಾರ್ಮಾಡಿ ಪರಿಸರದಲ್ಲಿ ಪಾಂಡಿಕಟ್ಟ ಎಂಬಲ್ಲಿ ಬುಧವಾರ ಶೋಧ ಕಾರ್ಯದ ವೇಳೆ  ಪತ್ತೆಯಾದ ಟರ್ಪಾಲ್, ಟೇಪ್ ರೆಕಾರ್ಡರ್ ಮತ್ತಿತರ ಪರಿಕರಗಳನ್ನು ಎಎನ್‌ಎಫ್ ಸಿಬ್ಬಂದಿ ಪರಿಶೀಲಿಸಿದರು. 	-ಪ್ರಜಾವಾಣಿ ಚಿತ್ರ
ಚಾರ್ಮಾಡಿ ಪರಿಸರದಲ್ಲಿ ಪಾಂಡಿಕಟ್ಟ ಎಂಬಲ್ಲಿ ಬುಧವಾರ ಶೋಧ ಕಾರ್ಯದ ವೇಳೆ ಪತ್ತೆಯಾದ ಟರ್ಪಾಲ್, ಟೇಪ್ ರೆಕಾರ್ಡರ್ ಮತ್ತಿತರ ಪರಿಕರಗಳನ್ನು ಎಎನ್‌ಎಫ್ ಸಿಬ್ಬಂದಿ ಪರಿಶೀಲಿಸಿದರು. -ಪ್ರಜಾವಾಣಿ ಚಿತ್ರ   

ಮಂಗಳೂರು: ನಕ್ಸಲರು ಅವಿತುಕೊಂಡಿದ್ದಾರೆ ಎಂಬ ಮಾಹಿತಿ ಮೇರೆಗೆ ಚಾರ್ಮಾಡಿ ಘಾಟಿ ಪ್ರದೇಶದ ದಟ್ಟ ಅರಣ್ಯಗಳಲ್ಲಿ ಬುಧವಾರ ಶೋಧ ಕಾರ್ಯ ನಡೆಸಿದ ನಕ್ಸಲ್ ನಿಗ್ರಹ ದಳದ ಪೊಲೀಸರು ಕಾಡಿನ ಮಧ್ಯೆ ಡೇರೆ ಹಾಕುವ ಪರಿಕರಗಳನ್ನೂ ಪತ್ತೆ ಹಚ್ಚಿದರು. ಆದರೆ, ಅಲ್ಲಿದ್ದವರು ನಕ್ಸಲರಲ್ಲ! ಮನೆತೊರೆದು ಕಾಡಿನಲ್ಲಿ ಠಿಕಾಣಿ ಹೂಡಿದ್ದ ವಿದ್ಯಾರ್ಥಿಗಳು!

ಶಾಲೆಗೆ ಹೋಗಲು ಮನಸ್ಸಿಲ್ಲದೇ ಮನೆ ತೊರೆದು ದಟ್ಟ ಕಾಡಿನ ಮಧ್ಯೆ ಡೇರೆ ಹಾಕಲು ಸಿದ್ಧತೆ ನಡೆಸಿದ್ದ ವಿದ್ಯಾರ್ಥಿಗಳಿಬ್ಬರು ಎಎನ್‌ಎಫ್ ಸಿಬ್ಬಂದಿಯನ್ನು ಅಕ್ಷರಶಃ ಬೇಸ್ತು ಬೀಳಿಸ್ದ್ದಿದಾರೆ.

ಚಾರ್ಮಾಡಿ ಪರಿಸರದಲ್ಲಿ ನಕ್ಸಲರು ಅವಿತಿದ್ದಾರೆ ಎಂಬ ಮಾಹಿತಿ ಆಧಾರದಲ್ಲಿ ಎಎನ್‌ಎಫ್ ಸಿಬ್ಬಂದಿ ಬುಧವಾರ ಶೋಧಕಾರ್ಯ ನಡೆಸುತ್ತಿದ್ದಾಗ ಮುಖ್ಯ ರಸ್ತೆಯಿಂದ 2ಕಿ.ಮೀ ದೂರದಲ್ಲಿ ಕಾಡಿನೊಳಗಿನ ಪಾಂಡಿಕಟ್ಟ ಎಂಬಲ್ಲಿ ಡೇರೆ ಹಾಕಿ ವಾಸಿಸಿದ್ದ ಕುರುಹುಗಳು ಪತ್ತೆಯಾದವು.

ADVERTISEMENT

ಎಎನ್‌ಎಫ್ ಸಿಬ್ಬಂದಿ ಸ್ಥಳಕ್ಕೆ ಧಾವಿಸುತ್ತಿದ್ದಂತೆಯೇ ಸ್ಥಳದಿಂದ ಯಾರೋ ಓಡಿ ತಪ್ಪಿಸಿಕೊಂಡಿದ್ದರು. ಸ್ಥಳದಲ್ಲಿ ಸುಮಾರು 5 ಕೆ.ಜಿ ಕುಚ್ಚಲಕ್ಕಿ, ಚಾ ಹುಡಿ, ಸಕ್ಕರೆ, ಮೆಣಸಿನ ಹುಡಿ, ಉಪ್ಪು ಹಾಗೂ ಊಟದ ತಟ್ಟೆ, ಲೋಟಗಳು, ಟೇಪ್ ರೆಕಾರ್ಡರ್, ಒಂದು ಗರಗಸ, ಮಚ್ಚು ಮತ್ತು ಸೀಮೆಎಣ್ಣೆ ಕ್ಯಾನ್ ಸಿಕ್ಕಿತ್ತು.

ಸ್ಥಳದಲ್ಲಿ 2 ಕೋಳಿಗಳೂ ಸಿಕ್ಕಿದ್ದು, ಈ ಪೈಕಿ ಒಂದು ಮೃತಪಟ್ಟಿತ್ತು. ಆರಂಭದಲ್ಲಿ ಇದು ನಕ್ಸಲರದೇ ಡೇರೆ ಎಂದು ಭಾವಿಸಿದ್ದ ಪೊಲೀಸರು ಸ್ಥಳೀಯರನ್ನು ಕರೆಸಿ ವಿಚಾರಿಸಿದರು. ಅಲ್ಲಿದ್ದ ಪರಿಕರಗಳೆಲ್ಲ ಕಾಡಿನಂಚಿನ ಚಾರ್ಮಾಡಿ ಗ್ರಾಮದಿಂದ ಕದ್ದೊಯ್ದವುಗಳೆಂದು ತಿಳಿದುಬಂತು. ಕಾಡಿನಲ್ಲಿ ಡೇರೆ ಹಾಕಲು ಸಿದ್ದತೆ ನಡೆಸಿದ್ದ ವಿದ್ಯಾರ್ಥಿಗಳೂ ಸಂಜೆ ವೇಳೆ ಉಜಿರೆಯಲ್ಲಿ ಪತ್ತೆಯಾಗುವ ಮೂಲಕ ದಿನವಿಡೀ ನಡೆದ ಪ್ರಹಸನ ತಾರ್ಕಿಕ ಅಂತ್ಯ ಕಂಡಿತು.

ಮೂರು ದಿನಗಳ ಹಿಂದೆಯೇ ಕಾಣೆಯಾಗಿದ್ದರು: ಚಾರ್ಮಾಡಿಯ ನಿವಾಸಿಗಳಾದ ಮಹಮ್ಮದ್ ಶುಕೂರ್ ( 14)  ಹಾಗೂ ಜಾಫರ್ ಸಲಾಂ (12) (ಇಬ್ಬರ ಹೆಸರೂ ಬದಲಿಸಲಾಗಿದೆ) ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದರು. ಈ ಪೈಕಿ ಮಹಮ್ಮದ್ ಚಾರ್ಮಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 8ನೇ ತರಗತಿ ವಿದ್ಯಾರ್ಥಿ, ಜಾಫರ್ ಉಜಿರೆ ಅನುದಾನಿತ ಸರ್ಕಾರಿ ಶಾಲೆಯ 4ನೇ ತರಗತಿಯ ವಿದ್ಯಾರ್ಥಿ.

ಶಾಲೆ ತಪ್ಪಿಸಿ ಅಡಗಿ ಕೊಳ್ಳುವುದು ಈ ವಿದ್ಯಾರ್ಥಿಗಳ ಖಯಾಲಿ. ಈ ಹಿಂದೆ ನಾಲ್ಕು ಬಾರಿ ಅವರು ನಾಪತ್ತೆಯಾಗಿದ್ದರು. ಆಗ ಪೋಷಕರು ಪೊಲೀಸರಿಗೆ ದೂರನ್ನೂ ನೀಡಿದ್ದರು. ಒಮ್ಮೆ ಉಜಿರೆಯಲ್ಲಿ, ಮತ್ತೊಮ್ಮೆ ಉಳ್ಳಾಲದಲ್ಲಿ ಅವರನ್ನು ಪತ್ತೆಹಚ್ಚಲಾಗಿತ್ತು. ಒಮ್ಮೆ ಅವರಾಗಿಯೇ ಮನೆಗೆ ಮರಳಿದ್ದರು. ಹಾಗಾಗಿ ಈ ಬಾರಿ ಮಕ್ಕಳು ನಾಪತ್ತೆಯಾದಾಗ ಮನೆಯವರು ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಆದರೆ ವಿಷಯವನ್ನು ಪೊಲೀಸರ ಗಮನಕ್ಕೆ ತಂದಿದ್ದರು.

ಶಾಲೆಗೆ ಹೋಗುವುದನ್ನು ಶಾಶ್ವತವಾಗಿ ತಪ್ಪಿಸಿಕೊಳ್ಳಲು ಬಯಸಿದ್ದ ಬಾಲಕರಿಬ್ಬರು ಕಾಡಿನಲ್ಲಿ ಟೆಂಟ್ ಹಾಕಿ ಅಲ್ಲೇ ಉಳಿದುಕೊಳ್ಳಲು ನಿರ್ಧರಿಸಿದ್ದರು. ಇದಕ್ಕಾಗಿ ಸಮೀಪದ ಸಂಬಂಧಿಕರ ಮನೆಯಿಂದ ಟಾರ್ಪಲ್, ಇನ್ನೊಂದು ಮನೆಯಿಂದ ಅಕ್ಕಿ, ಮಚ್ಚು, ಟಾರ್ಚ್, ಬೆಂಕಿಪೊಟ್ಟಣ, ಮೊಂಬತ್ತಿ ಮತ್ತಿತರ ಸಾಮಗ್ರಿ ಕದ್ದೊಯ್ದಿದ್ದರು. ಸಮೀಪದ ಬಡಗಿಯೊಬ್ಬರ ಮನೆಯಿಂದ ಗರಗಸವನ್ನೂ ಕದ್ದಿದ್ದರು. ಅವರು ಕದ್ದೊಯ್ದಿದ್ದ ಎರಡು ಕೋಳಿಗಳ ಪೈಕಿ ಒಂದು ಸತ್ತು ಬಿದ್ದಿತ್ತು.

ಬಸ್ಸಿನಲ್ಲಿ ಪತ್ತೆ: ಶೋಧ ಕಾರ್ಯದ ವೇಳೆ ಸ್ಥಳದಿಂದ ತಪ್ಪಿಸಿಕೊಂಡಿದ್ದ ಬಾಲಕರು ಚಾರ್ಮಾಡಿ ಘಾಟಿಯಲ್ಲಿ ಯಾವುದೋ ವಾಹನ ಹತ್ತಿ ಅಲ್ಲಿಂದ ಉಜಿರೆಗೆ ಬಂದಿದ್ದರು. ಸಂಜೆ ಉಜಿರೆಯಿಂದ ಚಾರ್ಮಾಡಿಗೆ ಮರಳುವಾಗ ಬಸ್‌ನಲ್ಲಿದ್ದ ಬಾಲಕರನ್ನು ಸ್ಥಳೀಯರು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದರು.

ಎಎನ್‌ಎಫ್ ಕಮಾಂಡರ್ ಅಲೋಕ್ ಕುಮಾರ್ ನೇತೃತ್ವದಲ್ಲಿ ನಡೆದ ಶೋಧ ಕಾರ್ಯದ ವೇಳೆ ನಕ್ಸಲರ ಪರಿಕರಗಳು ಪತ್ತೆಯಾಗಿವೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾ ಪೊಲೀಸ್ ವರಿಷ್ಠ ಅಭಿಷೇಕ್ ಗೋಯಲ್, ಎಎಸ್‌ಪಿ ಅನುಚೇತ್ ಮತ್ತಿತರರೂ ಸ್ಥಳಕ್ಕೆ ಧಾವಿಸಿದ್ದರು. 

ಕಾಡಿನಲ್ಲಿ ಮೂರು ರಾತ್ರಿ ಕಳೆದರು!
ಭಾನುವಾರ ಮನೆಯಿಂದ ತಪ್ಪಿಸಿಕೊಂಡ ಬಾಲಕರು ಮೂರು ರಾತ್ರಿಗಳನ್ನು ದಟ್ಟ ಕಾಡಿನಲ್ಲೇ ಕಳೆದಿದ್ದಾರೆ. ಈ ನಡುವೆ ಉಜಿರೆಗೆ ಬಂದು ಊಟ ಮಾಡಿಕೊಂಡು ಮತ್ತೆ ಕಾಡಿಗೆ ಮರಳಿದ್ದಾರೆ. ಉಜಿರೆ ಪೇಟೆಯಿಂದ ಕಲ್ಲಂಗಡಿ ಹಣ್ಣು, ಬಾಳೆಹಣ್ಣುಗಳನ್ನು ಖರೀದಿಸಿ ಕೊಂಡೊಯ್ದಿದ್ದಾರೆ. ಅವರು ಅಕ್ಕಿ ಮತ್ತಿತರ ಪದಾರ್ಥಗಳನ್ನು ಕೊಂಡೊಯ್ದಿದ್ದರೂ, ಪಾತ್ರೆ ಸಿಕ್ಕಿರಲಿಲ್ಲ. ಹಾಗಾಗಿ ಕಾಡಿನಲ್ಲಿ ಅಡುಗೆ ಮಾಡಿರಲಿಲ್ಲ.

ಭಯ ಆಗಿಲ್ಲ: ರಾತ್ರಿ ಇಡೀ ಕಾಡಿನಲ್ಲಿ ಕಳೆಯಲು ಯಾವುದೇ ಭಯ ಆಗಿಲ್ಲ ಎಂದು ಬಾಲಕರು ವಿಚರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾರೆ.

`ಸದ್ಯಕ್ಕೆ ಮಕ್ಕಳ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಕೊಳ್ಳದೇ, ಅವರನ್ನು ಪೋಷಕರ ವಶಕ್ಕೆ ಒಪ್ಪಿಸುತ್ತೇವೆ' ಎಂದು ಎಎಸ್‌ಪಿ ಅನುಚೇತ್ `ಪ್ರಜಾವಾಣಿ'ಗೆ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.