ADVERTISEMENT

ನಕ್ಸಲ್ ನಿಗ್ರಹ ಪಡೆ ಕಾನ್‌ಸ್ಟೇಬಲ್ ಮಾನೆ ಸಾವು: ಅಧಿಕಾರಿಗಳಿಂದ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2011, 19:30 IST
Last Updated 10 ಅಕ್ಟೋಬರ್ 2011, 19:30 IST

ಬೆಂಗಳೂರು: ನಕ್ಸಲರ ವಿರುದ್ಧದ ಕಾರ್ಯಾಚರಣೆಯಲ್ಲಿ ಮೃತಪಟ್ಟ ನಕ್ಸಲ್ ನಿಗ್ರಹ ಪಡೆ (ಎಎನ್‌ಎಫ್) ಕಾನ್‌ಸ್ಟೇಬಲ್ ಮಹಾದೇವ ಎಸ್.ಮಾನೆ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಗೃಹ ಇಲಾಖೆ ಅಧಿಕಾರಿಗಳು ಗುಪ್ತಚರ ಇಲಾಖೆಯಿಂದ ಹೆಚ್ಚಿನ ಮಾಹಿತಿ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.

`ಬೆಳ್ತಂಗಡಿ ಬಳಿ ಕಾಣಿಸಿಕೊಂಡಿರುವ ನಕ್ಸಲರು ಬಾಡಿಗೆ ಹಂತಕರನ್ನು (ಶೂಟರ್) ಕರೆತಂದಿದ್ದರು ಎಂಬ ಮಾಹಿತಿ ಇದೆ. ಆ ಶೂಟರ್‌ಗಳು ನಕ್ಸಲರಲ್ಲ~ ಎಂದು ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಜಾಮ್‌ದಾರ್  `ಪ್ರಜಾವಾಣಿ~ಗೆ ತಿಳಿಸಿದರು.

`ನಕ್ಸಲರ ಚಲನವಲನಗಳ ಬಗ್ಗೆ ಮಾಹಿತಿ ಕಲೆ ಹಾಕುವಲ್ಲಿ ಗುಪ್ತಚರ ಇಲಾಖೆ ವಿಫಲವಾಗಿಲ್ಲ. ಗುಪ್ತಚರ ಇಲಾಖೆ ಸಮರ್ಥವಾಗಿರುವುದಿಂದಲೇ ರಾಜ್ಯದಲ್ಲಿ ನಕ್ಸಲ್ ಚಟುವಟಿಕೆಗಳು ಹತೋಟಿಯಲ್ಲಿವೆ. ನಕ್ಸಲರ ಜತೆಗಿದ್ದ ಶೂಟರ್‌ಗಳು ಮತ್ತು ಎಎನ್‌ಎಫ್ ಸಿಬ್ಬಂದಿ ನಡುವೆಯೇ ಗುಂಡಿನ ಚಕಮಕಿ ನಡೆದಿದೆ. ನಕ್ಸಲರು ಗುಂಡಿನ ಕಾಳಗದಲ್ಲಿ ನೇರವಾಗಿ ಭಾಗಿಯಾಗಿಲ್ಲ~ ಎಂದು ಅವರು ಹೇಳಿದರು.

`ಎಎನ್‌ಎಫ್‌ಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ನೀಡಲಾಗಿದೆ. ಆ ಶಸ್ತ್ರಾಸ್ತ್ರಗಳ ಬಳಕೆಯ ಬಗ್ಗೆ ಎಲ್ಲ ಸಿಬ್ಬಂದಿಗೂ ಪರಿಣತಿ ಇಲ್ಲ. ರಾತ್ರಿ ವೇಳೆ ಧರಿಸುವ ಕನ್ನಡಕಗಳು, ಹೆಲ್ಮೆಟ್‌ಗಳು, ಗುಂಡು ನಿರೋಧಕ ಜಾಕೆಟ್‌ಗಳು ಹಾಗೂ ಗುಂಡು ನಿರೋಧಕ 25 ವಾಹನಗಳನ್ನು ಸಿಬ್ಬಂದಿಗೆ ನೀಡಲಾಗಿದೆ. ಸಿಬ್ಬಂದಿ ಗುಂಡು ನಿರೋಧಕ ಜಾಕೆಟ್‌ಗಳನ್ನಷ್ಟೇ ಬಳಸುತ್ತಿದ್ದಾರೆ~ ಎಂದು ಮಾಹಿತಿ ನೀಡಿದರು.

ನಕ್ಸಲರು ಶೂಟರ್‌ಗಳನ್ನು ಕರೆದುಕೊಂಡು ಬಂದಿದ್ದರೆ ಎಂಬ ಬಗ್ಗೆ ಈಗಲೇ ಏನು ಹೇಳಲಾಗದು. ಪ್ರಕರಣಕ್ಕೆ ಸಂಬಂಧಿಸಿದಂತೆ ಗುಪ್ತಚರ ಮಾಹಿತಿ ಮತ್ತಿತರ ಸಂಗತಿಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಸಮಗ್ರವಾಗಿ ತನಿಖೆ ನಡೆಸಿದ ನಂತರವಷ್ಟೇ ಆ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಬಹುದು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.