ಬೆಂಗಳೂರು: ‘ನಿನ್ನಿಷ್ಟದಂತೆ, ನಿನಗೆ ಬೇಕಾದಂತೆ ಬರೆಯುವಂತಿಲ್ಲ. ನಮ್ಮ ಮರ್ಜಿಗೆ ಅನುಗುಣವಾಗಿ ನಾವು ಹೇಳಿದಂತೆಯೇ ಬರೆಯಬೇಕು ಹಾಗೂ ಮಾತನಾಡಬೇಕು ಎಂದು ಲೇಖಕರಿಗೆ ಭಯ ಹುಟ್ಟಿಸುವವರ ಸಂಖ್ಯೆ ಹೆಚ್ಚಾಗಿದೆ. ಇಂದು ನಮ್ಮ ಲೇಖನಿಗಳ ಮೇಲೆ ಕೆಲವರು ಹಿಡಿತ ಸಾಧಿಸಲಾರಂಭಿಸಿದ್ದಾರೆ’ ಎಂದು ಹಿರಿಯ ಸಾಹಿತಿ ಸಾರಾ ಅಬೂಬಕ್ಕರ್ ತೀವ್ರ ಆತಂಕ ವ್ಯಕ್ತಪಡಿಸಿದರು.
ಕರ್ನಾಟಕ ಲೇಖಕಿಯರ ಸಂಘದ ಆಶ್ರಯದಲ್ಲಿ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ನಡೆದ ಏಳನೇ ಕರ್ನಾಟಕ ಲೇಖಕಿಯರ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಡುಂಢಿ ಕೃತಿಯ ಲೇಖಕ ಯೋಗೇಶ್ ಮಾಸ್ಟರ್ ಅವರನ್ನು ಇತ್ತೀಚೆಗೆ ಬಂಧಿಸಿ ಕೃತಿ ಮುಟ್ಟುಗೋಲು ಹಾಕಿಕೊಳ್ಳಲಾಯಿತು. ಪಿ.ವಿ. ನಾರಾಯಣ, ಎಚ್. ಎಸ್. ಶಿವಪ್ರಕಾಶ್, ಜಯಪ್ರಕಾಶ್ ಮಾವಿನಕುಳಿ ಅವರ ಕೃತಿಗಳನ್ನೂ ಈ ಹಿಂದೆ ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಮಹಿಳಾ ಸಾಹಿತಿಗಳ ಮೇಲೂ ಆಕ್ರಮಣ ಮಾಡಲು ನಮ್ಮ ಪುರುಷ ಪ್ರಧಾನ ವ್ಯವಸ್ಥೆ ಹಿಂಜರಿಯಲಿಲ್ಲ. ಇಂತಹ ಘಟನೆಗಳಿಗೆಲ್ಲ ಜನರ ಮತಾಂಧತೆ ಹಾಗೂ ಅಸಹನೆಯೇ ಕಾರಣ’ ಎಂದು ಅವರು ಟೀಕಿಸಿದರು.
‘ಲೇಖಕರನ್ನು ಯಾರೂ ಎಂದಿಗೂ ತಡೆಯ ಬಾರದು. ಬರೆದದ್ದೆಲ್ಲವೂ ಎಲ್ಲರಿಗೂ ಇಷ್ಟವಾಗಬೇ ಕೆಂದೇನೂ ಇಲ್ಲ. ಬರಹ ಇಷ್ಟವಾಗದಿದ್ದರೆ ಪ್ರಶ್ನಿಸ ಬಹುದು, ಟೀಕೆ ಮಾಡಬಹುದು, ಪ್ರತಿಭಟಿಸ ಬಹುದು. ಆದರೆ, ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವುದನ್ನು ಸಹಿಸಲು ಎಂದಿಗೂ ಸಾಧ್ಯವಿಲ್ಲ’ ಎಂದು ಅವರು ತಿಳಿಸಿದರು.
‘ಮಹಿಳಾ ಸಾಹಿತ್ಯ ಕ್ಷೇತ್ರದಲ್ಲಿ ಅಂದಿನಿಂದಲೇ ಕಾಣುತ್ತಿದ್ದ ಅವೇ ಮುಖಗಳು ಕಾಣಿಸುತ್ತಿವೆ. ಹೊಸ ಮುಖಗಳ ಸಂಖ್ಯೆ ಕಡಿಮೆಯಾಗಿದೆ. ಇಂದು ವಿದ್ಯಾವಂತ ಮಹಿಳೆಯರ ಆಕರ್ಷಣೆ ಬೇರೆ ಕ್ಷೇತ್ರದ ಕಡೆಗೆ ತಿರುಗುತ್ತಿದೆ. ಯುವಜನರನ್ನು ಸಾಹಿತ್ಯದ ಕಡೆಗೆ ಆಕರ್ಷಿಸುವ ಕಾರ್ಯಕ್ರಮಗಳು ಕಡಿಮೆಯಾಗುತ್ತಿವೆ’ ಎಂದರು.
‘21ನೇ ಶತಮಾನದ ಹೊಸ ಕೊಡುಗೆ ಸಾಮೂಹಿಕ ಅತ್ಯಾಚಾರ. ಪುಟ್ಟ ಮಕ್ಕಳ ಮೇಲೂ ಅತ್ಯಾಚಾರ ಎಸಗಲಾಗುತ್ತಿದೆ’ ಎಂದು ಅವರು ಕಿಡಿಕಾರಿದರು.
‘ಅನ್ಯ ಜಾತಿಯ ವ್ಯಕ್ತಿಯನ್ನು ಮದುವೆಯಾದ ಕಾರಣಕ್ಕಾಗಿ ಮಕ್ಕಳನ್ನು ಕೊಲೆ ಮಾಡುವ ಹೃದಯಹೀನ ನಡವಳಿಕೆ ಕೂಡಾ ಈ ಶತಮಾನದ ಕೊಡುಗೆ. ತನ್ನನ್ನು ಪ್ರೀತಿಸಲಿಲ್ಲ ಎಂಬ ಕಾರಣಕ್ಕಾಗಿ ಹೆಣ್ಣು ಮಕ್ಕಳ ಮೇಲೆ ಆ್ಯಸಿಡ್ ಎರಚಿ ಆಕೆ ಜೀವನಪೂರ್ತಿ ನರಳುವಂತೆ ಮಾಡಲಾಗುತ್ತಿದೆ. ಪಟ್ಟಿ ಮಾಡುತ್ತಾ ಹೋದರೆ ಕೊನೆಯೇ ಇಲ್ಲದಂತಾ ಗುತ್ತದೆ. ಇಂತಹ ಎಲ್ಲ ಹಿಂಸೆ, ದೌರ್ಜನ್ಯಗಳಿಂದ ಬಹಳಷ್ಟು ನೋವು ಅನುಭವಿಸುವವರು ಮಹಿಳೆ ಯರೇ ಆಗಿರುತ್ತಾರೆ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ವೆಬ್‌ಸೈಟ್‌ಗೆ ಚಾಲನೆ ನೀಡಿದ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ, ‘ಪುರುಷರೂ ಅಡುಗೆ ಮನೆಗೆ
ಪ್ರವೇಶಕ್ಕೆ ಮಹಿಳೆಯರು ಅನುವು ಮಾಡಿಕೊಡಬೇಕು’ ಎಂದರು.
ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ವಸುಂಧರ ಭೂಪತಿ, ಸಂಘದ ಸಾಧನೆ ವಿವರಿಸಿದರು.
‘ಮಾಹಿತಿ ಕೋಶ’ವನ್ನು ಚಿಂತಕ ಡಾ.ಜಿ.ರಾಮಕೃಷ್ಣ ಲೋಕಾರ್ಪಣೆ ಮಾಡಿದರು. ಸಂಘದ ಹಿಂದಿನ ಅಧ್ಯಕ್ಷೆಯರನ್ನು ಸನ್ಮಾನಿಸಲಾಯಿತು.
ಇದಕ್ಕೂ ಮುನ್ನ ಬಿಬಿಎಂಪಿ ಕಚೇರಿ ಮುಂಭಾಗದಿಂದ ರವೀಂದ್ರ ಕಲಾಕ್ಷೇತ್ರದ ವರೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಿತು.
ಲೇಖಕಿಯಾಗುವುದು ಕಷ್ಟ
‘ಸಮಾಜದಲ್ಲಿ ಮಾನವ ಹಕ್ಕು ಉಲ್ಲಂಘನೆ, ದೌರ್ಜನ್ಯ, ಕ್ರೌರ್ಯದ ವಿರುದ್ಧ ಧ್ವನಿ ಎತ್ತುವ ಎಲ್ಲ ಲೇಖಕರೂ ಸ್ತ್ರೀವಾದಿ ಬರಹಗಾರರೇ’ ಎಂದು ಸಮ್ಮೇಳನ ಉದ್ಘಾಟಿಸಿದ ಒಡಿಶಾ ಭಾಷೆಯ ಹಿರಿಯ ಸಾಹಿತಿ ಪ್ರತಿಭಾ ರಾಯ್ ವ್ಯಾಖ್ಯಾ ನಿಸಿದರು.
‘ಲೇಖಕಿಯಾಗುವುದು ಕಷ್ಟ. ನಾನು ಸಾಹಿತಿಯಾದುದು ಪವಾಡ. ಉದ್ಯೋಗ ಹಾಗೂ ಕುಟುಂಬ ನಿರ್ವಹಣೆ ಜೊತೆ ಲೇಖಕಿಯಾಗಿ ಮುಂದುವರಿಯುವುದು ಕಷ್ಟದ ಸಂಗತಿ’ ಎಂದರು.
ಯಥೇಚ್ಛ ವಸ್ತು
ಒಂದು ಕೃತಿ ರಚಿಸಲು ಇಂದು ಲೇಖಕಿಯರು ವಸ್ತುವಿಗಾಗಿ ಹುಡು ಕಾಡಬೇಕಿಲ್ಲ. ಪತ್ರಿಕೆಗಳ ಪುಟಗಳನ್ನು ತಿರುವಿದರೆ ಸಾಕು, ಮಹಿಳಾ ದೌರ್ಜನ್ಯದ ನೂರಾರು ವರದಿಗಳು ನಮ್ಮ ಕಣ್ಮುಂದೆ ನರ್ತಿಸುತ್ತವೆ.
ಸಾರಾ ಅಬೂಬಕ್ಕರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.