ADVERTISEMENT

ನರಭಕ್ಷಕ ಹುಲಿಯಲ್ಲ: ಗ್ರಾಮಸ್ಥರ ಶಂಕೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2013, 19:30 IST
Last Updated 5 ಡಿಸೆಂಬರ್ 2013, 19:30 IST

ಮೈಸೂರು (ಚಿಕ್ಕಬರಗಿ):  ಅರಣ್ಯ ಸಿಬ್ಬಂದಿ ಸೆರೆ ಹಿಡಿದಿರು­ವುದು ನರಭಕ್ಷಕ ಹುಲಿಯಲ್ಲ ಎಂದು ಎಚ್‌.ಡಿ. ಕೋಟೆ ತಾಲ್ಲೂಕಿನ ಚಿಕ್ಕಬರಗಿ ಗ್ರಾಮದ ಜನತೆ ಶಂಕಿಸಿದ್ದಾರೆ.

ಕಾರ್ಯಾಚರಣೆ ಆರಂಭಿಸಿದ ಕೆಲವೇ ಗಂಟೆಗಳಲ್ಲಿ ಹುಲಿಯನ್ನು ಸೆರೆ ಹಿಡಿದಿರುವುದಕ್ಕೆ ಅನುಮಾನ ವ್ಯಕ್ತಪಡಿಸಿ­ರುವ ಜನತೆ,  ಸೀಗೆವಾಡಿ ಹಾಡಿಯಲ್ಲಿ ದಸರಾ ಆನೆಗ­ಳೊಂದಿಗೆ ಎರಡು ದಿನ ಕಾರ್ಯಾಚರಣೆ ನಡೆಸಿದರೂ ಅರಣ್ಯ ಸಿಬ್ಬಂದಿಗೆ ನರಭಕ್ಷಕ ಹುಲಿ ಜಾಡು ಪತ್ತೆ ಮಾಡಲು ಆಗಿರಲಿಲ್ಲ. ನಂತರ ಕಾರ್ಯಾ­ಚರಣೆಯನ್ನೇ ಸ್ಥಗಿತಗೊಳಿಸಿ­ದ್ದರು.

ಡಿ. 4ರಂದು ವ್ಯಾಪಕ ಕಾರ್ಯಾಚರಣೆ ನಡೆಸಿದರೂ, ಹುಲಿ ಗರ್ಜನೆ ಕೇಳಿಸಿ 29 ಗುಂಡುಗಳನ್ನು ಹಾರಿಸಿದ್ದರೂ ಹುಲಿ ಇರುವಿಕೆ ಸುಳಿವು ಸಿಕ್ಕಿರಲಿಲ್ಲ. ಆದರೆ, ಗುರುವಾರ ಕಾರ್ಯಾಚರಣೆ ಆರಂಭಿಸಿದ ಕೆಲವೇ ಗಂಟೆಗಳಲ್ಲಿ ಅದೂ ಹುಲಿ ಅಟ್ಟಹಾಸಕ್ಕೆ ಬಲಿಯಾದ ಚಿಕ್ಕಬರಗಿ ಗ್ರಾಮದ ಬಸಪ್ಪನ ಮೃತದೇಹ ಪತ್ತೆಯಾದ 150 ಮೀಟರ್‌ ಅಂತರದಲ್ಲಿ ಹುಲಿಯನ್ನು ಸೆರೆ ಹಿಡಿದಿರುವುದು ಅಚ್ಚರಿ ಮತ್ತು ಅನುಮಾನ ಮೂಡಿಸಿದೆ ಎಂದು ಗ್ರಾಮದ ರೈತ ಮುಖಂಡರಾದ ಗಂಗಾಧರಪ್ಪ ಮತ್ತು ಇತರರು ಆರೋಪಿಸಿ­ದ್ದಾರೆ. ಅಲ್ಲದೇ ಇದು ಬೇರೆಯದೇ ಹುಲಿ ಎಂದು ಅವರು ದೂರಿದ್ದಾರೆ.
ಮತ್ತೊಮ್ಮೆ ಕಾರ್ಯಾಚರಣೆ ನಡೆಸಿ ನರಭಕ್ಷಕ ಹುಲಿಯನ್ನು ಹಿಡಿಯಬೇಕು ಎಂದು ಆಗ್ರಹಿಸಿದ್ದಾರೆ.

ಮೈಸೂರು ವರದಿ:  ರಾಜ್ಯ ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿನಯ್‌ ಲೂತ್ರಾ ಅವರು ಮೃಗಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾರ್ಯಾಚರಣೆಗೆ ಸಂಬಂಧಿಸಿದ ವಿಡಿಯೊ ತುಣುಕುಗಳು ಇವೆ. ಸೆರೆ ಸಿಕ್ಕಿರುವುದು ಕಾಡಂಚಿನ ಗ್ರಾಮಗಳಲ್ಲಿ ಮೂವರನ್ನು ಭಕ್ಷಿಸಿದ್ದ ಹುಲಿಯೇ, ಅನುಮಾನ ಬೇಡ ಎಂದು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.