ADVERTISEMENT

ನರ್ಸಿಂಗ್ ಕಾಲೇಜುಗಳಿಗೆ ವಂಚನೆ: ಮಹಿಳೆ ಸೆರೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2012, 19:30 IST
Last Updated 10 ಜನವರಿ 2012, 19:30 IST

ಹುಬ್ಬಳ್ಳಿ: ರಾಜ್ಯದ ವಿವಿಧೆಡೆ ನರ್ಸಿಂಗ್ ಕಾಲೇಜುಗಳಿಗೆ ಹೆಚ್ಚಿನ ಸೀಟು ಕೊಡಿಸುವ ಭರವಸೆ ನೀಡಿ, ಲಕ್ಷಾಂತರ ರೂಪಾಯಿ ವಂಚಿಸಿದ್ದ ಕೇರಳದ ಮಹಿಳೆಯೊಬ್ಬರನ್ನು ಅಶೋಕನಗರ ಪೊಲೀಸರು ಬಂಧಿಸಿದ್ದಾರೆ.

 ಕಾಸರಗೋಡಿನ ಸುಹೇರಾ ರೆಹಮಾನ್ (45) ಎಂಬಾಕೆ ಬಂಧನಕ್ಕೆ ಒಳಗಾದ ಮಹಿಳೆಯಾಗಿದ್ದಾರೆ.
ಕೇರಳದಿಂದ ವಿದ್ಯಾರ್ಥಿಗಳನ್ನು ಕರೆತಂದು ಕಾಲೇಜಿನಲ್ಲಿ ಪ್ರವೇಶ ಕೊಡಿಸುವುದಾಗಿ ಹೇಳಿ ನಗರದ ವಿವಿಧ ನರ್ಸಿಂಗ್ ಕಾಲೇಜುಗಳ ಆಡಳಿತ ಮಂಡಳಿಯಿಂದ ಹಣ ಪಡೆದಿದ್ದರೆಂದು ದೂರಲಾಗಿದೆ.

ವಿಘ್ನೇಶ್ವರ ನರ್ಸಿಂಗ್ ಕಾಲೇಜಿನ ಅಧ್ಯಕ್ಷ ಎನ್.ಎನ್.ಕಡಬಗೇರಿ ಅಶೋನಗರ ಠಾಣೆಯಲ್ಲಿ ಸುಹೇರಾ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದರು. ಶ್ರೀನಿಧಿ ಎಜುಕೇಶನ್ ಕನ್ಸಲ್ಟನ್ಸಿ ಎಂಬ ಸಂಸ್ಥೆ ಹೆಸರಿನಲ್ಲಿ ಮಧ್ಯವರ್ತಿಗಳಾಗಿ ಬಂದು, ಆಡಳಿತ ಮಂಡಳಿ ಜತೆ ಒಪ್ಪಂದ ಮಾಡಿಕೊಂಡಿದ್ದರು.

ಕೇರಳದಿಂದ ವಿದ್ಯಾರ್ಥಿಗಳನ್ನು ಕರೆತಂದು ಬಿಎಸ್ಸಿ ನರ್ಸಿಂಗ್ ಮತ್ತು ಸಾಮಾನ್ಯ ನರ್ಸಿಂಗ್ ಕೋರ್ಸ್‌ಗಳಿಗೆ ಪ್ರವೇಶ ಕೊಡಿಸಲಾಗುವುದು ಎಂಬ ಭರವಸೆ ನೀಡಿ ರೂ 2.25 ಲಕ್ಷ ಹಣ ಪಡೆದು ವಂಚಿಸಿದ್ದಾರೆ~ ಎಂದು ಅವರು ದೂರಿನಲ್ಲಿ ವಿವರಿಸಿದ್ದರು.

ಮಹಿಳಾ ವಿದ್ಯಾಪೀಠದ ನರ್ಸಿಂಗ್ ಕಾಲೇಜಿನ ಆಡಳಿತಮಂಡಳಿಗೂ ವಂಚಿಸಿರುವ ಆಕೆ, ನಾಲ್ಕು ಲಕ್ಷ ರೂಪಾಯಿ  ಪಡೆದಿದ್ದರು ಎಂದು ಆರೋಪಿಸಲಾಗಿದೆ. ಈ ವಿಷಯವಾಗಿ ಕಾಲೇಜು ಆಡಳಿತ ಮಂಡಳಿ ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.

`ನಮ್ಮಿಂದ ಹಣ ಪಡೆದಿದ್ದಲ್ಲದೇ ಹಲವು ಬಾರಿ ವಿಚಾರಿಸಿದಾಗ ವಿದ್ಯಾರ್ಥಿಗಳನ್ನು ಕರೆದುಕೊಂಡು ಶೀಘ್ರವೇ ಬರುತ್ತೇನೆ~ ಎಂಬ ಸಂದೇಶ ಕಳುಹಿಸುತ್ತಿದ್ದರು~ ಎಂದು ಮಹಿಳಾ ವಿದ್ಯಾಪೀಠದ ಕಾರ್ಯದರ್ಶಿ ಕೆ.ಟಿ. ಪಾಟೀಲ ~ಪ್ರಜಾವಾಣಿ~ಗೆ ತಿಳಿಸಿದರು.

ತುಮಕೂರಿನ ನರ್ಸಿಂಗ್ ಕಾಲೇಜಿಗೂ ಸುಹೇರಾ ಇದೇ ರೀತಿ ವಂಚಿಸಿದ್ದರು ಎನ್ನಲಾಗಿದೆ. ತುಮಕೂರಿನ ಪೊಲೀಸರು ಆಕೆಯನ್ನು ಕೆಲ ದಿನಗಳ ಹಿಂದೆ ಬಂಧಿಸಿದ್ದರು. ಸೋಮವಾರ ಜಾಮೀನು ಪಡೆದು ಸುಹೇರಾ ಹೊರ ಬರುತ್ತಿದ್ದಂತೆ ಅಶೋಕನಗರ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಸುಹೇರಾ ಅವರನ್ನು ಮಂಗಳವಾರ ಕೋರ್ಟ್‌ಗೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ಆರೋಪಿಯನ್ನು 13ರವರೆಗೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.