ADVERTISEMENT

ನಲಪಾಡ್ ಜಾಮೀನು ಅರ್ಜಿ ವಜಾ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2018, 19:31 IST
Last Updated 2 ಮಾರ್ಚ್ 2018, 19:31 IST
ನಲಪಾಡ್ ಜಾಮೀನು ಅರ್ಜಿ ವಜಾ
ನಲಪಾಡ್ ಜಾಮೀನು ಅರ್ಜಿ ವಜಾ   

ಬೆಂಗಳೂರು: ವಿದ್ವತ್ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಜೈಲು ಸೇರಿರುವ ಶಾಸಕ ಎನ್‌.ಎ. ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್ ಹಾಗೂ ಆತನ ಸಹಚರರ ಜಾಮೀನು ಅರ್ಜಿಯನ್ನು 63ನೇ ಸಿಟಿ ಸಿವಿಲ್ ನ್ಯಾಯಾಲಯ ಶುಕ್ರವಾರ ವಜಾ ಮಾಡಿತು.

ನಲಪಾಡ್‌ ಹಾಗೂ ಇತರೆ ಆರೋಪಿಗಳ ಪರ ವಕೀಲರು ಪ್ರತ್ಯೇಕವಾಗಿ ಸಲ್ಲಿಸಿದ್ದ ಎರಡು ಜಾಮೀನು ಅರ್ಜಿಗಳ ಸಂಬಂಧ ವಾದ– ಪ್ರತಿವಾದ ಆಲಿಸಿದ್ದ ನ್ಯಾಯಾಧೀಶರಾದ ಪರಮೇಶ್ವರ್‌ ಪ್ರಸನ್ನ, ಆದೇಶವನ್ನು ಕಾಯ್ದಿರಿಸಿದ್ದರು. ಮಧ್ಯಾಹ್ನ 3 ಗಂಟೆಗೆ ಕಲಾಪ ಆರಂಭಿಸಿದ ನ್ಯಾಯಾಧೀಶರು, ಅರ್ಧ ಗಂಟೆವರೆಗೆ ಆದೇಶದ ಪ್ರತಿಯನ್ನು ಪರಿಶೀಲಿಸಿದರು. ಬಳಿಕವೇ ಅರ್ಜಿಗಳ ಸಂಖ್ಯೆ ಕೂಗಿ, ‘ಜಾಮೀನು ಅರ್ಜಿಗಳು ವಜಾ’ ಎಂದು ಪ್ರಕಟಿಸಿದರು.

ಸುದ್ದಿಗಾರರ ಜತೆ ಮಾತನಾಡಿದ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ (ಎಸ್‌ಪಿಪಿ) ಎಂ.ಎಸ್‌. ಶ್ಯಾಮಸುಂದರ್, ‘ಇದು ಗಂಭೀರ ಪ್ರಕ
ರಣ. ತನಿಖೆ ನಡೆಯುತ್ತಿದೆ. ಈ ಸಮಯದಲ್ಲಿ ಆರೋಪಿಗಳು ಜಾಮೀನಿಗೆ ಅರ್ಹರಲ್ಲವೆಂದು ಅಭಿಪ್ರಾಯಪಟ್ಟು ನ್ಯಾಯಾಲಯವು ಅರ್ಜಿಗಳನ್ನು ವಜಾ ಮಾಡಿದೆ’ ಎಂದು ತಿಳಿಸಿದರು.

ADVERTISEMENT

‘ವಿದ್ವತ್‌ಗೆ ಗಂಭೀರ ಗಾಯಗಳಾಗಿದ್ದು, ಅದಕ್ಕೆ ಸಂಬಂಧಪಟ್ಟ ವೈದ್ಯಕೀಯ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದೆವು. ಘಟನೆ ನಡೆದ ಸ್ಥಳದಲ್ಲಿ ನಾವೂ ಇದ್ದೆವು ಎಂದು ಸ್ವತಃ ಆರೋಪಿಗಳೇ ಜಾಮೀನು ಅರ್ಜಿಯಲ್ಲಿ ಬರೆದಿದ್ದರು. ಆರೋಪಿಗಳ ಪೂರ್ವಾಪರ, ನಡೆ ಆಧರಿಸಿ ಜಾಮೀನಿಗೆ ಆಕ್ಷೇಪಣೆ ಸಲ್ಲಿಸಿದ್ದೆವು. ಜಾಮೀನು ಕೊಟ್ಟರೆ ಆರೋಪಿಗಳು ತನಿಖೆ ಮೇಲೆ ಒತ್ತಡ ಹೇರುವ ಸಾಧ್ಯತೆ ಇದೆ. ಗಾಯಾಳು ಹಾಗೂ ಸಾಕ್ಷಿಗಳಿಗೆ ಬೆದರಿಕೆ ಹಾಕುವ ಸಂಭವವಿದೆ ಎಂದು ವಾದಿಸಿದ್ದೆವು. ಈ ಅಂಶಗಳನ್ನು ತಳ್ಳಿಹಾಕುವಂತಿಲ್ಲವೆಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ’ ಎಂದರು.

ಮಧ್ಯಂತರ ಜಾಮೀನು ಕೋರಿ ಅರ್ಜಿ: ನಲಪಾಡ್ ಪರ ವಕೀಲ ಟಾಮಿ ಸೆಬಾಸ್ಟಿಯನ್‌, ‘ಆದೇಶ ಆಶ್ಚರ್ಯವನ್ನುಂಟು ಮಾಡಿಲ್ಲ. ಮಧ್ಯಂತರ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ. ಶನಿವಾರವೇ ಅರ್ಜಿ ಸಲ್ಲಿಸಲಿದ್ದೇವೆ. ಸೋಮವಾರ ಅಥವಾ ಮಂಗಳವಾರ ಅರ್ಜಿ ವಿಚಾರಣೆಗೆ ಬರಬಹುದು’ ಎಂದರು.

‘ಸಣ್ಣ ವಿಷಯವನ್ನೇ ವೈಭವೀಕರಿಸಿ ಮಾಧ್ಯಮದವರು ಹಾಗೂ ಎಸ್‌ಪಿಪಿ ದೊಡ್ಡದು ಮಾಡಿದರು. ಮೀಡಿಯಾ ಹಬ್‌ನಿಂದಲೇ ಈ ಅರ್ಜಿ ವಜಾ ಆಗಿದೆ. ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದರಿಂದ ಮನೆಗೆ ಹೋಗುವಂತೆ ವಿದ್ವತ್‌ಗೆ ವೈದ್ಯರು ಹೇಳಿದ್ದರು. ಆದರೆ, ಆರೋಪಿಗಳಿಗೆ ಜಾಮೀನು
ಸಿಗಬಾರದೆಂಬ ಉದ್ದೇಶದಿಂದ ಆಸ್ಪತ್ರೆಯಲ್ಲೇ ಉಳಿದಿದ್ದಾರೆ’ ಎಂದು ಹೇಳಿದರು.

ನಲಪಾಡ್‌ ಸಹಚರರ ಪರ ವಕೀಲ ಎಸ್‌.ಬಾಲನ್‌, ‘ಈ ನ್ಯಾಯಾಲಯ ಇಲ್ಲ ಎಂದರೆ, ಇನ್ನೊಂದು ನ್ಯಾಯಾಲಯ ಇದೆ. ಅದು ಇಲ್ಲವೆಂದರೆ ಸುಪ್ರೀಂ ಕೋರ್ಟ್ ಇದೆ’ ಎಂದರು.

ವಿದ್ವತ್‌ ಹೇಳಿಕೆ ಪಡೆದ ಸಿಸಿಬಿ

ಮಲ್ಯ ಆಸ್ಪತ್ರೆಗೆ ಶುಕ್ರವಾರ ಸಂಜೆ ಭೇಟಿ ನೀಡಿದ ಸಿಸಿಬಿ ಪೊಲೀಸರು, ಗಾಯಾಳು ವಿದ್ವತ್‌ ಹೇಳಿಕೆ ಪಡೆದರು.

ಇನ್‌ಸ್ಪೆಕ್ಟರ್‌ ಅಶ್ವತ್ಥ್ ಗೌಡ ನೇತೃತ್ವದ ತಂಡವು ವಿಶೇಷ ವಾರ್ಡ್‌ನಲ್ಲಿ ವೈದ್ಯರ ಸಮ್ಮುಖದಲ್ಲಿ ಹೇಳಿಕೆ ದಾಖಲಿಸಿಕೊಂಡಿತು ಎಂದು ಗೊತ್ತಾಗಿದೆ.

‘ಈ ಹಿಂದೆ ಎರಡು ಬಾರಿ ಆಸ್ಪತ್ರೆಗೆ ಬಂದರೂ ಹೇಳಿಕೆ ಸಿಕ್ಕಿರಲಿಲ್ಲ. ಈಗ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡುಬಂದಿದ್ದರಿಂದ ಹೇಳಿಕೆ ಪಡೆದಿದ್ದೇವೆ. ಅದನ್ನು ಪರಿಶೀಲಿಸಲಿದ್ದೇವೆ’ ಎಂದು ಸಿಸಿಬಿ ಪೊಲೀಸರು ತಿಳಿಸಿದರು.

‘ಬಲಗಾಲಿನ ಮೂಳೆ ಮುರಿದಿದ್ದರಿಂದ ರೆಸ್ಟೋರೆಂಟ್‌ನಲ್ಲಿ ಕಾಲು ಚಾಚಿಕೊಂಡು ಕುಳಿತಿದ್ದೆ. ಅಷ್ಟಕ್ಕೇ ಜಗಳ ತೆಗೆದು ನನ್ನ ಮೇಲೆ ಹಲ್ಲೆ ಮಾಡಿದರು. ಕ್ಷಮೆ ಕೇಳಿದರೂ ಬಿಡದೆ, ಬಾಟಲಿಯಿಂದ ಮುಖಕ್ಕೆ ಹೊಡೆದರು. ಆಗ ನಾನು ಪ್ರಜ್ಞೆ ತಪ್ಪಿ ಬಿದ್ದೆ’ ಎಂದು ವಿದ್ವತ್‌ ಹೇಳಿಕೆಯಲ್ಲಿ ತಿಳಿಸಿರುವುದಾಗಿ ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.