ADVERTISEMENT

ನವ ಸಾಕ್ಷರರ ಕಲಿಕಾ ಮಟ್ಟ ನಿರ್ಧರಿಸಲು ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2011, 17:25 IST
Last Updated 23 ಫೆಬ್ರುವರಿ 2011, 17:25 IST

ಗದಗ:  ವಯಸ್ಕರ ಶಿಕ್ಷಣದ ವಿವಿಧ ಯೋಜನೆಗಳಲ್ಲಿ ಸಾಕ್ಷರರಾಗಿರುವವರ ಕಲಿಕಾ ಮಟ್ಟವನ್ನು ಮೌಲ್ಯಮಾಪನ ಮಾಡಲು ಪರೀಕ್ಷೆಯೊಂದನ್ನು ಆಯೋಜಿಸಲಾಗಿದೆ.ವಯಸ್ಕರ ಶಿಕ್ಷಣ ನಿರ್ದೇಶನಾಲಯ, ರಾಷ್ಟ್ರೀಯ ಸಾಕ್ಷರತಾ ಮಿಷನ್ ಸಹಯೋಗದೊಂದಿಗೆ ಆಯೋಜಿಸಿರುವ ಈ ಪರೀಕ್ಷೆಯನ್ನು ಏರ್ಪಾಡು ಮಾಡುವ ಹೊಣೆಗಾರಿಕೆಯನ್ನು ರಾಷ್ಟ್ರೀಯ ಮುಕ್ತ ಶಾಲಾ ಶಿಕ್ಷಣ ಸಂಸ್ಥೆಗೆ ವಹಿಸಲಾಗಿದೆ.

ರಾಜ್ಯದ ಬೆಳಗಾವಿ, ಗದಗ, ಹಾವೇರಿ, ಬಾಗಲಕೋಟೆ, ಕೊಪ್ಪಳ, ಬೀದರ್, ಬಳ್ಳಾರಿ, ಚಿತ್ರದುರ್ಗ, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ರಾಯಚೂರು, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳಲ್ಲಿ ಮೌಲ್ಯ ನಿರ್ಧಾರಣ ಪರೀಕ್ಷೆ ಮಾರ್ಚ್ 6ರಂದು ನಡೆಯುತ್ತದೆ. ಈ ಜಿಲ್ಲೆಗಳ ಸುಮಾರು 2849 ಗ್ರಾಮ ಪಂಚಾಯ್ತಿಯ ಕೇಂದ್ರ ಸ್ಥಾನದಲ್ಲಿ ಏಕಕಾಲಕ್ಕೆ ಪರೀಕ್ಷೆ ಏರ್ಪಡಿಸಲಾಗಿದೆ. ಆದರೆ ಪರೀಕ್ಷಾರ್ಥಿಗಳು ಬೆಳಿಗ್ಗೆ 10ರಿಂದ ಸಂಜೆ 5ರ ತನಕ ಯಾವುದೇ ಸಮಯದಲ್ಲಾದರೂ ಬಂದು ಪರೀಕ್ಷೆ ಹಾಜರಾಗಬಹುದು. ಪರೀಕ್ಷೆಯ ಅವಧಿ ಮೂರು ಗಂಟೆಗಳಾಗಿರುತ್ತದೆ. ಪ್ರತಿಯೊಂದು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 70 ಜನರನ್ನು ಪರೀಕ್ಷೆಗೆ ಹಾಜರು ಪಡಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದ್ದು, ರಾಜ್ಯದಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಮಂದಿ ಹಾಜರಾಗುತ್ತಾರೆ ಎಂದು ಅಂದಾಜಿಸಲಾಗಿದೆ.

ಪರೀಕ್ಷೆಯಲ್ಲಿ ಓದುವುದು (50 ಅಂಕ), ಬರೆಯುವುದು (50 ಅಂಕ), ಲೆಕ್ಕಚಾರ (50 ಅಂಕ) ಎಂಬ ಮೂರು ವಿಭಾಗಗಳನ್ನು ಮಾಡಿಕೊಳ್ಳಲಾಗಿದೆ. ಮೈಸೂರಿನಲ್ಲಿರುವ ರಾಜ್ಯ ಸಂಪನ್ಮೂಲ ಕೇಂದ್ರವು ಗ್ರಾಮ ಪಂಚಾಯ್ತಿ ವಯಸ್ಕರ ಶಿಕ್ಷಣ ಕೇಂದ್ರಗಳ ಮೂಲಕ ಪ್ರಶ್ನೆ ಪತ್ರಿಕೆಗಳನ್ನು ವಿತರಣೆ ಮಾಡುತ್ತದೆ. ಅರ್ಹ ಶಿಕ್ಷಕರ ಮೂಲಕ ತಾಲ್ಲೂಕು ಮಟ್ಟದಲ್ಲಿ ಉತ್ತರ ಪತ್ರಿಕೆಯನ್ನು ಮೌಲ್ಯಮಾಪನ ಮಾಡಲಾಗುತ್ತದೆ. ಒಂದು ವಿಭಾಗದಿಂದ ಕನಿಷ್ಠ 20 ಅಂಕಗಳನ್ನು ತೆಗೆದುಕೊಳ್ಳಬೇಕು. ಮೂರು ವಿಭಾಗದಿಂದ ಸರಾಸರಿ 70 ಅಂಕಗಳನ್ನು ಪಡೆದುಕೊಂಡ ಅಭ್ಯರ್ಥಿಗಳನ್ನು ಪಾಸು ಎಂದು ತೀರ್ಮಾನಿಸಲಾಗುತ್ತದೆ. ನಂತರ ಪ್ರಮಾಣ ಪತ್ರ ವಿತರಣೆ ಮಾಡಲಾಗುತ್ತದೆ.

ಪರೀಕ್ಷೆಯ ಉದ್ದೇಶ: ವಯಸ್ಕರ ಶಿಕ್ಷಣ ಎಂದರೆ ಸುಮ್ಮನೆ ಕಲಿಯುವುದು ಎನ್ನುವುದೇ ಆಗಿತ್ತು. ನವಸಾಕ್ಷರರು ತಮಗೆ ಕೊಟ್ಟಿರುವ ಪಠ್ಯ ಸಾಮಗ್ರಿಗಳನ್ನು ಎಷ್ಟರ ಮಟ್ಟಿಗೆ ಅರ್ಥೈಸಿಕೊಂಡಿದ್ದಾರೆ. ಎಷ್ಟು ಅರ್ಥ ಮಾಡಿಕೊಳ್ಳುವರು, ಮನನದ ಮಟ್ಟ ಎಷ್ಟಿದೆ ಎಂಬುದರ ಮಾಹಿತಿಯನ್ನು ಕಲೆ ಹಾಕುವ ಪ್ರಕ್ರಿಯೆ ಜಿಲ್ಲಾ ಮಟ್ಟದಲ್ಲಿ ನಡೆದಿದೆಯಾದರೂ ಅದಕ್ಕೆ ರಾಷ್ಟ್ರ ಮಟ್ಟದಲ್ಲಿ ದೃಢೀಕರಣವನ್ನು ಇಲ್ಲಿವರೆಗೂ ನೀಡಿರಲಿಲ್ಲ. ಆದ್ದರಿಂದ ಈಗ ನಡೆಸುತ್ತಿರುವ ಮೂಲ ಸಾಕ್ಷರತಾ ಪರೀಕ್ಷೆಯಿಂದ ರಾಷ್ಟ್ರ ಮಟ್ಟದಲ್ಲಿ ಮಾನ್ಯತೆ ದೊರಕುತ್ತದೆ. ಅಲ್ಲದೆ ತತ್ಸಮಾನ ಪರೀಕ್ಷೆಗಳಿಗೆ ಅರ್ಹತೆ ಪಡೆದುಕೊಳ್ಳಲು ಇದು ಸಹಾಯಕವಾಗುತ್ತದೆ ಎಂದು ರಾಜ್ಯ ಸಂಪನ್ಮೂಲ ಕೇಂದ್ರದ ಸಂಯೋಜಕ ವರದಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು ಪ್ರಮಾಣಪತ್ರ ಪಡೆದುಕೊಂಡವರಿಗೆ ಔಪಚಾರಿಕ ಶಿಕ್ಷಣ ವ್ಯವಸ್ಥೆಯಲ್ಲಿ ತತ್ಸಮಾನ ಪರೀಕ್ಷೆಗಳನ್ನು ಬರೆಯುವ ಅವಕಾಶವೂ ಇದೆ. ಇದರಿಂದಾಗಿ ಅರ್ಧಕ್ಕೆ ಶಾಲೆ ಬಿಟ್ಟು ಬೇರೆ ಕೆಲಸದಲ್ಲಿ ತೊಡಗಿರುವ ಅನೇಕ ಮಂದಿಗೆ ಬಹಳ ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.