ADVERTISEMENT

ನಾಗರಹೊಳೆಯಲ್ಲಿ ಹುಲಿ ಸಂತತಿ ಹೆಚ್ಚಳ

ಅಭಯಾರಣ್ಯದಲ್ಲಿವೆ 91 ವ್ಯಾಘ್ರ, ಸಂತತಿ ವೃದ್ಧಿಸಿಕೊಳ್ಳಲು ಉತ್ತಮ ಆಹಾರ ಚಕ್ರ ಕಾರಣ; ಗಣತಿಯಿಂದ ಬೆಳಕಿಗೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2017, 19:30 IST
Last Updated 5 ಜುಲೈ 2017, 19:30 IST
ನಾಗರಹೊಳೆ ಕೆರೆಯೊಂದರ ಬಳಿ ಪತ್ತೆಯಾದ ಹುಲಿ
ನಾಗರಹೊಳೆ ಕೆರೆಯೊಂದರ ಬಳಿ ಪತ್ತೆಯಾದ ಹುಲಿ   

ಹುಣಸೂರು: ಪಶ್ಚಿಮಘಟ್ಟಗಳ ಸಾಲಿಗೆ ಸೇರಿದ ರಾಜೀವ್‌ಗಾಂಧಿ ವನ್ಯಧಾಮದಲ್ಲಿ (ನಾಗರಹೊಳೆ) ಹುಲಿ ಸಂತತಿ ಹೆಚ್ಚಳವಾಗಿದೆ.

ನಾಗರಹೊಳೆ ರಾಷ್ಟ್ರೀಯ ಹುಲಿ ಯೋಜನೆ ಜಾರಿ ಬಳಿಕ ವ್ಯಾಘ್ರ ಸಂತತಿ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಈಗ ಒಟ್ಟು 91 ಹುಲಿಗಳಿದ್ದು, ಕಳೆದ ಸಾಲಿಗಿಂತ ಈ ಬಾರಿ 8 ಹುಲಿ ಹೆಚ್ಚಾಗಿವೆ. ಸಂತತಿ ವೃದ್ಧಿಸಿಕೊಳ್ಳಲು ಇಲ್ಲಿ ಉತ್ತಮ ಆಹಾರ ಚಕ್ರ ಇರುವುದೇ ಪ್ರಮುಖ ಕಾರಣ ಎನ್ನಲಾಗಿದೆ.

‘ಕಳೆದ ನವೆಂಬರ್‌– ಡಿಸೆಂಬರ್‌ ತಿಂಗಳಲ್ಲಿ ನಡೆದ 45 ದಿನಗಳ ಗಣತಿಯಲ್ಲಿ 8 ಹುಲಿ ಹೆಚ್ಚಾಗಿರುವುದು ಕಂಡು ಬಂದಿದೆ. 2015–16ರಲ್ಲಿ 81 ಹುಲಿಗಳಿದ್ದವು. 2016–17ರಲ್ಲಿ 91 ಹುಲಿ ಪತ್ತೆಯಾಗಿವೆ’ ಎಂದು ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಮಣಿಕಂಠನ್‌ ತಿಳಿಸಿದ್ದಾರೆ.

ADVERTISEMENT

ನಾಗರಹೊಳೆಗೆ ಸೇರಿದ 640 ಚದರ ಕಿ.ಮೀ ವ್ಯಾಪ್ತಿಯಲ್ಲಿ, ಹುಲಿಗಳು ಹೆಚ್ಚಾಗಿ ಸಂಚರಿಸುವ ಪ್ರದೇಶ ಹಾಗೂ ಕೆರೆಯಂಗಳದಲ್ಲಿ 360 ಕ್ಯಾಮೆರಾ ಅಳವಡಿಸಿ ಗಣತಿ ನಡೆಸಲಾಯಿತು. ಬಳಿಕ ಕಂಪ್ಯೂಟರ್‌ನಲ್ಲಿ ಹುಲಿ ಮೈ ಮೇಲಿನ ಪಟ್ಟೆ ಆಧರಿಸಿ ಅವುಗಳ ವಯಸ್ಸು ಮತ್ತು ಲಿಂಗ ವಿಂಗಡಿಸಲಾಗಿದೆ. 8 ವಲಯಗಳ 195 ಸ್ಥಳಗಳಲ್ಲಿ ಕ್ಯಾಮೆರಾ ಅಳವಡಿಸಲಾಗಿತ್ತು.

ಭೂಪ್ರದೇಶ:ಪ್ರತಿಯೊಂದು ಹುಲಿಯೂ ತನ್ನದೇ ಆದ ವ್ಯಾಪ್ತಿ ಹೊಂದಿರುತ್ತದೆ. ವೈಜ್ಞಾನಿಕವಾಗಿ ಒಂದು ಗಂಡು ಹುಲಿ 10 ಚದರ ಕಿ.ಮೀ (2,500 ಎಕರೆ) ವ್ಯಾಪ್ತಿ ಗುರುತಿಸಿಕೊಂಡಿರುತ್ತದೆ. ಹೆಣ್ಣು ಹುಲಿ 5 ಕಿ.ಮೀ ವ್ಯಾಪ್ತಿ ಹೊಂದಿರುತ್ತದೆ. ಮರಿಗಳು ತಾಯಿಯೊಂದಿಗೆ ಬೆಳೆಯುತ್ತವೆ.

ಹುಲಿಗಳಿಗೆ ನಾಗರಹೊಳೆ ಉತ್ತಮ ವಾಸಸ್ಥಳವಾಗಿದೆ. ಸಂತತಿ ವೃದ್ಧಿಯಾಗಲು ಆಹಾರ ಭದ್ರತೆಯೂ ಮುಖ್ಯ. ಅರಣ್ಯದಲ್ಲಿ ಜಿಂಕೆ, ಕಡವೆ ಮತ್ತು ಕಾಡು ಎಮ್ಮೆ ಸಂತತಿ ಹೆಚ್ಚಾಗಿದ್ದು, ಉತ್ತಮ ಆಹಾರ ಹುಲಿಗಳಿಗೆ ಸಿಗುತ್ತಿದೆ ಎನ್ನುತ್ತಾರೆ ಅರಣ್ಯಾಧಿಕಾರಿಗಳು.

ಹೆಚ್ಚಳ: ನಾಗರಹೊಳೆ ವ್ಯಾಪ್ತಿಯಲ್ಲಿ 2014–15ರಲ್ಲಿ ಪ್ರತಿ 100 ಕಿ.ಮೀ ವ್ಯಾಪ್ತಿಯಲ್ಲಿ 8 ಹುಲಿಗಳು ವಾಸವಾಗಿದ್ದವು. 2015–16ರಲ್ಲಿ 10 ಹಾಗೂ 2016–17ರಲ್ಲಿ 8 ಹುಲಿ ಹಾಗೂ 1ರಿಂದ 2 ವರ್ಷದ ಒಳಗಿನ 27 ಮರಿಗಳು ಇವೆ. ಇವುಗಳ ವಾಸಸ್ಥಳದ ಪರಿಮಿತಿಯೂ ವೃದ್ಧಿಯಾಗಿದೆ.

ಬಂಡೀಪುರದಲ್ಲಿ 1,040 ಚದರ ಕಿ.ಮೀ ವ್ಯಾಪ್ತಿಯಲ್ಲಿ ಅರಣ್ಯ ಹರಡಿಕೊಂಡಿದ್ದರೂ ನಾಗರಹೊಳೆಯಲ್ಲೇ ಹೆಚ್ಚು ಹುಲಿ ಕಾಣಬಹುದಾಗಿದೆ.

ಹುಲಿ ಕಾರಿಡಾರ್‌ ರಕ್ಷಣೆ: ನಾಗರಹೊಳೆಗೆ ಹೊಂದಿಕೊಂಡಂತೆ ವೈನಾಡು, ಬಂಡೀಪುರ, ಮಧುಮಲೈ, ಬಿ.ಆರ್‌ ಟೈಗರ್ ಪ್ರಾಜೆಕ್ಟ್, ಸತ್ಯಮಂಗಲ, ಕಾವೇರಿ ವನ್ಯಜೀವಿಧಾಮ, ಮಲೆಮಹದೇಶ್ವರ ಅರಣ್ಯ ಪ್ರದೇಶಗಳಿವೆ. ಇಲ್ಲಿ ಹುಲಿಗಳು ಯಾವುದೇ ಅಡ್ಡಿ ಇಲ್ಲದೆ ಓಡಾಡಿಕೊಂಡಿದ್ದವು.

ಆದರೆ, ಕೆಲವು ಭಾಗದಲ್ಲಿ ಹುಲಿ ಕಾರಿಡಾರ್‌ಗೆ ತೊಂದರೆ ಎದುರಾಗಿ, ದಕ್ಷಿಣ ಭಾರತದಲ್ಲಿ ಹುಲಿ ಸಂತತಿಗೆ ಆತಂಕ ಎದುರಾಗಿತ್ತು. ಇತ್ತೀಚೆಗೆ ಅರಣ್ಯ ಇಲಾಖೆ ತೆಗೆದುಕೊಂಡ ಪರಿಣಾಮಕಾರಿ ಕ್ರಮಗಳಿಂದ ಹುಲಿ ಸಂತತಿ ವೃದ್ಧಿಯಾಗಿದೆ ಎಂದು ಮಣಿಕಂಠನ್ ಹೇಳುತ್ತಾರೆ.

***

ಮಧ್ಯಪ್ರದೇಶದ ಸರ್ಸಿಕಾ ಅರಣ್ಯದಲ್ಲಿ ಅತಿ ಹೆಚ್ಚು ಹುಲಿ ಕಂಡು ಬರುತ್ತಿದ್ದ ಸ್ಥಳವಾಗಿತ್ತು. ಆದರೆ, ಹುಲಿ ಮತ್ತು ಮಾನವ ಸಂಘರ್ಷದಿಂದಾಗಿ ಆ ಭಾಗದಲ್ಲಿ ಹುಲಿ ಸಂತತಿ ನಶಿಸಿದೆ
ಮಣಿಕಂಠನ್‌, ನಾಗರಹೊಳೆ ಹುಲಿ ಯೋಜನಾ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.