ADVERTISEMENT

ನಾಗಾ ಸಾಧುಗಳ ಆಶೀರ್ವಾದ ಪಡೆದ ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2017, 19:56 IST
Last Updated 2 ಅಕ್ಟೋಬರ್ 2017, 19:56 IST
ನಾಗಾ ಸಾಧುಗಳ ಆಶೀರ್ವಾದ ಪಡೆದ ಯಡಿಯೂರಪ್ಪ
ನಾಗಾ ಸಾಧುಗಳ ಆಶೀರ್ವಾದ ಪಡೆದ ಯಡಿಯೂರಪ್ಪ   

ಬೆಂಗಳೂರು: ಉತ್ತರ ಭಾರತದಿಂದ ಬಂದಿದ್ದ ನಾಗಾ ಸಾಧುಗಳನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ಮನೆಗೆ ಕರೆಸಿಕೊಂಡು ಆಶೀರ್ವಾದ ಪಡೆದರು.

ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ‘ಮಿಷನ್‌–150’ ಗುರಿಯನ್ನು ಬಿಜೆಪಿ ವರಿಷ್ಠರು ಯಡಿಯೂರಪ್ಪ ಅವರಿಗೆ ನೀಡಿದ್ದಾರೆ. ಅಲ್ಲದೆ, ಮುಖ್ಯಮಂತ್ರಿ ಅಭ್ಯರ್ಥಿ ಎಂದೂ ಘೋಷಿಸಿದ್ದಾರೆ.

ನವರಾತ್ರಿ ಸಮಯದಲ್ಲಿ ನಗರಕ್ಕೆ ಬಂದಿದ್ದ ನಾಗಾಸಾಧುಗಳನ್ನು ಮಹಾನವಮಿ (ಸೆ.29) ದಿನ ಬೆಳಿಗ್ಗೆ 11 ಗಂಟೆಗೆ ಡಾಲರ್ಸ್‌ ಕಾಲೊನಿಯ ತಮ್ಮ ಮನೆಗೆ ಬರ ಮಾಡಿಕೊಂಡ ಯಡಿಯೂರಪ್ಪ, ತಮ್ಮ ಅಪೇಕ್ಷೆಗಳನ್ನು ಅವರ ಮುಂದೆ ಅರುಹಿದ್ದಾರೆ. ಸುಮಾರು 40 ನಿಮಿಷ ಅವರ ಮನೆಯಲ್ಲೇ ಇದ್ದ ಸಾಧುಗಳು, ‘ವಿಜಯ ಸಿಗಲಿ’ ಎಂದು ಆಶೀರ್ವದಿಸಿದ್ದಾರೆ.

ADVERTISEMENT

‘ವಿಜಯಕ್ಕಾಗಿ ವಿಜಯದಶಮಿ ಆಚರಿಸಲಾಗುತ್ತಿದೆ. ನಿಮ್ಮ ಬಯಕೆ ಈಡೇರಬೇಕಾದರೆ ವಿಜಯದಶಮಿಯಂದು (ಸೆ.30) ತಂಜಾವೂರಿಗೆ ಹೋಗಿ ಬೃಹದೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಬೇಕು ಎಂದೂ ಸಾಧುಗಳು ಸಲಹೆ ಮಾಡಿದರು. ಯಡಿಯೂರಪ್ಪ, ಅದೇ ದಿನ ತಂಜಾವೂರಿಗೆ ತೆರಳಿದ್ದರು’ ಎಂದು ಮೂಲಗಳು ಹೇಳಿವೆ.

‘ಪ್ರವಾಸದಲ್ಲಿದ್ದ ನಾಗಾ ಸಾಧುಗಳು ಅನಿರೀಕ್ಷಿತವಾಗಿ ಬೆಂಗಳೂರಿಗೆ ಭೇಟಿ ನೀಡಿದ್ದರು. ಅವರು ದಿಢೀರನೇ ಯಡಿಯೂರಪ್ಪ ಅವರ ಮನೆಗೆ ಬಂದಿದ್ದರು. ಅಭ್ಯಾಗತರಾಗಿ ಮನೆಗೆ ಬಂದಿದ್ದ ಸಾಧುಗಳನ್ನು ಸತ್ಕರಿಸಿದ ಪಕ್ಷದ ಅಧ್ಯಕ್ಷರು ನಾಡಿನಲ್ಲಿ ಶಾಂತಿ, ಸುಭಿಕ್ಷೆ ನೆಲೆಸುವಂತೆ ಆಶೀರ್ವದಿಸುವಂತೆ ಕೋರಿದರು’ ಎಂದು ಬಿಜೆಪಿ ಅಧ್ಯಕ್ಷರ ಆಪ್ತ ಮೂಲಗಳು ತಿಳಿಸಿವೆ.

‘ನಾವು ಅನುಷ್ಠಾನ ನಿರತ ಸಾಧುಗಳು. 2018ರಲ್ಲಿ ನೀವೇ ರಾಜ್ಯದ ಮುಖ್ಯಮಂತ್ರಿಯಾಗುತ್ತೀರಿ’ ಎಂಬುದಾಗಿ ಸಾಧುಗಳು ಆಶೀರ್ವದಿಸಿದರು’ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.