ಮಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಸಾಹಿತಿ ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈ (101) ಅವರು ಭಾನುವಾರ ಕಾಸರಗೋಡಿನ ಬದಿಯಡ್ಕ ಗ್ರಾಮದಲ್ಲಿರುವ ಮನೆಯಲ್ಲಿ ವಿಧಿವಶರಾದರು.
ಬಹುಭಾಷಾ ವಿದ್ವಾಂಸರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಮುಂಚೂಣಿ ನಾಯಕರಾಗಿ, ಕಾಸರಗೋಡು ಹೋರಾಟದ ಕ್ರಿಯಾ ಸಮಿತಿಯ ಪ್ರಧಾನ ಸಂಚಾಲಕರಾಗಿ ಹೀಗೆ ಹಲವು ಕ್ಷೇತ್ರಗಳಲ್ಲಿ ಅವಿರತವಾಗಿ ದುಡಿದವರು ಕಿಞ್ಞಣ್ಣ ರೈ. ಮಂಗಳೂರಿನಲ್ಲಿ ನಡೆದ 66ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನೂ ಅವರು ವಹಿಸಿದ್ದರು.
‘ನನ್ನ ಆತ್ಮ ಇರುವುದು ಕಾಸರಗೋಡಿನಲ್ಲಿ. ಕಾಸರಗೋಡಿನ ಆತ್ಮ ಕರ್ನಾಟಕದ ಪರಮಾತ್ಮನಲ್ಲಿ ಸೇರುವ ಹಾಗೆ ಮಾಡಿ. ಆಗ ನನಗೆ ಶಾಶ್ವತ ನೆಮ್ಮದಿ, ಸಂತಸ ಸಿಗ್ತದೆ. ಪ್ರಚಾರ, ಬಹುಮಾನ ಧಾರಾಳ ಸಿಕ್ಕಿದೆ. ಆದರೆ ಕಾಸರಗೋಡಿಗೆ ಮನ್ನಣೆ ಸಿಗಬೇಕು. ಅದೇ ನನ್ನ ಹಂಬಲ.. ಎಂದು ಅವರು ‘ಶತಪೂರ್ತಿ ಸಂಭ್ರಮ’ದ ಸಂದರ್ಭದಲ್ಲಿ ಪ್ರಜಾವಾಣಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.
ಕಿಞ್ಞಣ್ಣ ರೈ ಅವರು ಕಾಸರಗೋಡಿನ ಪೆರಡಾಲ ಗ್ರಾಮದಲ್ಲಿ 1915 ಜೂನ್ 8 ರಂದು ಜನಿಸಿದರು. ಕಿಞ್ಞಣ್ಣ ಎಂದರೆ ತುಳು ಭಾಷೆಯಲ್ಲಿ ಚಿಕ್ಕಣ್ಣ ಅರ್ಥಾತ್ ಕಿರಿಯವ ಎಂದರ್ಥ. ಕಯ್ಯಾರ ಎಂಬುದು ಕವಿ ಕಿಞ್ಞಣ್ಣ ರೈ ಅವರ ತಾಯಿ ಮನೆಯ ಊರಿನ ಹೆಸರು. ಅದು ಉಪ್ಪಳ– ಪೈವಳಿಕೆ ಸಮೀಪದಲ್ಲಿ ಇದೆ. ತಾಯಿ ಮನೆಯ ಹೆಸರನ್ನೇ ಉಳಿಸಿಕೊಂಡಿರುವ ಕವಿ ಕಯ್ಯಾರರು ಇಂದಿಗೂ ಬದಿಯಡ್ಕ ಸಮೀಪದ ಕಲ್ಲರ್ಯದಲ್ಲಿ ತಂದೆ ಮನೆಯಲ್ಲೇ ವಾಸ ಇದ್ದಾರೆ.
ತಂದೆ ದುಗ್ಗಪ್ಪ ರೈ, ತಾಯಿ ದೈಯಕ್ಕ. ಅವರಿಗೆ 6 ಮಂದಿ ಗಂಡು ಮಕ್ಕಳು ಮತ್ತು ಹಾಗೂ ಇಬ್ಬರು ಹೆಣ್ಣುಮಕ್ಕಳು. ಕೈಯಾರರ ಮಗನಾದ ಕೃಷ್ಣ ಪ್ರದೀಪ್ ಕಟ್ಟಿರುವ ಹೊಸ ಮನೆಗೆ ‘ಉಂಞಕ್ಕ’ ಎಂದು ಹೆಸರಿಡಲಾಗಿದೆ. ಇದು ಕಯ್ಯಾರರ ಪತ್ನಿಯ ಹೆಸರು. ಅವರು 2006ರಲ್ಲೇ ಇಹಲೋಕ ತ್ಯಜಿಸಿದ್ದಾರೆ. ಅವರ ಹೆಸರಿನಲ್ಲಿ ಇರುವ ಹೊಸ ಮನೆಯಲ್ಲಿ ಕವಿ ಕಯ್ಯಾರರು ಈಗ ವಾಸ ಇದ್ದರು. ಅವರ ಮೂಲ ಮನೆ ‘ಕವಿತಾ ಕುಟೀರ’ ಪಕ್ಕದಲ್ಲೇ ಇದೆ.
ಕಾಸರಗೋಡಿನ ಬಳಿಯ ಪೆರಡಾಲ ಗ್ರಾಮದ ನವಜೀವನ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. 'ದುಡಿತವೆ ನನ್ನ ದೇವರು' ಎನ್ನುವದು ರೈಯವರ ಆತ್ಮಕಥನ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.