ADVERTISEMENT

ನಾಡೋಜ ಪದವಿ ಪ್ರದಾನ : ಕನ್ನಡವೂ ಅನ್ನ ನೀಡುವ ಭಾಷೆಯಾಗಲಿ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2010, 9:10 IST
Last Updated 22 ಡಿಸೆಂಬರ್ 2010, 9:10 IST
ನಾಡೋಜ ಪದವಿ ಪ್ರದಾನ : ಕನ್ನಡವೂ ಅನ್ನ ನೀಡುವ ಭಾಷೆಯಾಗಲಿ
ನಾಡೋಜ ಪದವಿ ಪ್ರದಾನ : ಕನ್ನಡವೂ ಅನ್ನ ನೀಡುವ ಭಾಷೆಯಾಗಲಿ   

ಹಂಪಿ:  ಕನ್ನಡ ಓದಿದವನಿಗೆ ಉದ್ಯೋಗ ಸಾಧ್ಯತೆಗಳು ನಿರ್ಮಾಣವಾಗದಿದ್ದಲ್ಲಿ ಕನ್ನಡ ಬಗ್ಗೆ ಒಲವು ಮೂಡಲಾರದು. ಇಂಗ್ಲಿಷ್ ಅನ್ನದ ಭಾಷೆಯಾದಂತೆಯೇ ಕನ್ನಡವೂ ಅನ್ನ ನೀಡುವ ಭಾಷೆಯಾಗಬೇಕು ಎಂದು ರಾಷ್ಟ್ರೀಯ ಮೌಲ್ಯಾಂಕನ ಮತ್ತು ಗುಣಾಂಕ ಪರಿಷತ್‌ನ ನಿರ್ದೇಶಕ ಪ್ರೊ.ಎಚ್.ಎ.ರಂಗನಾಥ ಅಭಿಪ್ರಾಯಪಟ್ಟರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ನವರಂಗ ಬಯಲು ರಂಗಮಂದಿರಲ್ಲಿ ಮಂಗಳವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ 19ನೇ ನುಡಿಹಬ್ಬದಲ್ಲಿ ಘಟಿಕೋತ್ಸವ ಭಾಷಣ ಮಾಡಿದ ಅವರು, ತಂತ್ರಜ್ಞಾನದ ಬೆಳವಣಿಗೆಯ ಹಿನ್ನೆಲೆಯಲ್ಲಿ ಕನ್ನಡದ ಬಳಕೆಯ ಸ್ವರೂಪ ಬದಲಾಗಿದೆ. ಬದಲಾದ ಭಾಷೆಯ ಬಗ್ಗೆ ಯುವಜನತೆಗೆ ತಿಳಿವಳಿಕೆ ನೀಡುವುದರ ಜತೆಗೆ, ಕನ್ನಡ ಭಾಷಾಭಿವೃದ್ಧಿಯ ಕಡೆಗೆ ವೈಜ್ಞಾನಿಕ ಚಿಂತನೆ ನಡೆಸಬೇಕಿದೆ ಎಂದರು.

ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳು ಬೋಧಿಸುವ ವಿಷಯಗಳೇ ಅಲ್ಲದೆ, ಕೃಷಿ, ವಿಜ್ಞಾನ ಹಾಗೂ ತಂತ್ರಜ್ಞಾನ, ಕಾನೂನು, ವೈದ್ಯಕೀಯ, ಮಹಿಳಾ, ಸಂಸ್ಕೃತ ಹೀಗೆ ಇಲ್ಲಿ ಯಾವುದೇ ಜ್ಞಾನಶಿಸ್ತಿನ ವಿಭಾಗಗಳನ್ನು ತೆರೆಯಬಹುದಾದ್ದರಿಂದ ಕನ್ನಡ ವಿಶ್ವವಿದ್ಯಾಲಯದ ವಿಸ್ತರಣೆಗೆ ವಿಪುಲ ಅವಕಾಶಗಳಿವೆ. ಇದನ್ನು ಬಳಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.

ಕನ್ನಡ ಭಾಷೆ ಅವಸಾನದ ಅಂಚಿನಲ್ಲಿದೆ ಎಂಬ ಹುನ್ನಾರ ಈ ಹಿಂದೆ ಪ್ರಚಲಿತವಾಗಿತ್ತು. ಕೋಟ್ಯಂತರ ಮಂದಿ ಮಾತನಾಡುವ ಭಾಷೆ ತಕ್ಷಣದಲ್ಲಿ ಅವಸಾನ ಹೊಂದುತ್ತದೆ ಎಂಬುದು ಅಪಕ್ವ ಕಲ್ಪನೆ. ಮೈಸೂರು ರಾಜ್ಯ ರೂಪುಗೊಂಡಾಗ ಕರ್ನಾಟಕದಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಶೇ. 62ರಷ್ಟಿತ್ತು. ಆ ಪ್ರಮಾಣ ಈಗಲೂ ಅದರ ಆಸುಪಾಸಿನಲ್ಲಿದ್ದು, ವೃದ್ಧಿಯಾಗಿಲ್ಲ ಎಂದು ತಿಳಿಸಿದರು.

ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ, ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ, ಬಯಲಾಟದ ಕಲಾವಿದೆ ಪದ್ಮಮ್ಮ ಹರಿಜನ ಅವರಿಗೆ ಇದೇ ಸಂದರ್ಭದಲ್ಲಿ ಪ್ರಸಕ್ತ ಸಾಲಿನ ’ನಾಡೋಜ’ ಗೌರವ ಪದವಿ ಪ್ರದಾನ ಮಾಡಲಾಯಿತು.

ನಾಡೋಜ ಗೌರವಕ್ಕೆ ಪಾತ್ರರಾಗಿರುವ ಹಿನ್ನೆಲೆ ಗಾಯಕ ಡಾ.ಪಿ.ಬಿ. ಶ್ರೀನಿವಾಸ್, ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರು ನುಡಿಹಬ್ಬದಲ್ಲಿ ಗೈರುಹಾಜರಾಗಿದ್ದು ಅನೇಕರಲ್ಲಿ ನಿರಾಸೆ ಮೂಡಿಸಿತು.

ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್. ಆಚಾರ್ಯ ನುಡಿ  ಹಬ್ಬಕ್ಕೆ ಚಾಲನೆ ನೀಡಿದರು. ಕುಲಪತಿ ಡಾ.ಎ.ಮುರಿಗೆಪ್ಪ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಲಸಚಿವ ಡಾ.ಮಂಜುನಾಥ ಬೇವಿನಕಟ್ಟಿ ವಂದಿಸಿದರು. 50ಕ್ಕೂ ಹೆಚ್ಚು ಸಂಶೋಧನಾ ವಿದ್ಯಾರ್ಥಿಗಳಿಗೆ ಡಿಲಿಟ್, ಎಂ.ಫಿಲ್, ಪಿಎಚ್.ಡಿ ಪ್ರದಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.