ಬೆಂಗಳೂರು: ‘ನಾನೂ ಒಂದು ಟ್ರಸ್ಟ್ ಸ್ಥಾಪಿಸುತ್ತೇನೆ. ಹಣ ಕೊಡಿಸಿ....’ ಹೀಗೆ ಚಟಾಕಿ ಹಾರಿಸಿದ್ದು, ಬೇರೆ ಯಾರೂ ಅಲ್ಲ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ.
ಪ್ರೇರಣಾ ಟ್ರಸ್ಟ್‌ಗೆ ಅಕ್ರಮವಾಗಿ ಹಣ ಸಂದಾಯವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಆಗ್ರಹಿಸಿ ಪ್ರತಿಪಕ್ಷಗಳ ಸದಸ್ಯರು ವಿಧಾನಸಭೆಯಲ್ಲಿ ಮಂಗಳವಾರ ಧರಣಿ ನಡೆಸಿದರು. ಗದ್ದಲ ಹೆಚ್ಚಾದ ಮೇಲೆ ಸದನವನ್ನು ಅರ್ಧ ಗಂಟೆ ಕಾಲ ಮುಂದೂಡಲಾಯಿತು. ಆ ನಂತರ ಸದನದಲ್ಲೇ ಇದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಉದ್ದೇಶಿಸಿ ಸಿದ್ದರಾಮಯ್ಯ ಈ ರೀತಿ ಹೇಳಿದರು.
‘ನಿಮ್ಮ ಟ್ರಸ್ಟ್‌ಗಳಿಗೆ ಕೋಟಿಗಟ್ಟಲೆ ಹಣ ಬರುತ್ತಿದೆ. ಅದೇ ರೀತಿ ನಮ್ಮ ಟ್ರಸ್ಟ್‌ಗಳಿಗೂ ಹಣ ಬರುವುದಾದರೆ ನಾವೂ ಒಂದು ಟ್ರಸ್ಟ್ ಸ್ಥಾಪಿಸುತ್ತೇವೆ. ಹಣ ಕೊಡಿಸುತ್ತೀರಾ’ ಎಂದು ಪ್ರಶ್ನಿಸಿದರು.
ಈ ಪ್ರಶ್ನೆಗೆ ಮುಗುಳ್ನಗೆಯ ಉತ್ತರ ನೀಡಿದ ಮುಖ್ಯಮಂತ್ರಿ ಅವರಿಗೆ ಕಾಂಗ್ರೆಸ್‌ನ ಎ.ಮಂಜು ಅವರಿಂದ ಮತ್ತೊಂದು ಪ್ರಶ್ನೆ ಎದುರಾಯಿತು. ಈ ಹಗರಣ ಕುರಿತು ಸಿದ್ದರಾಮಯ್ಯ ನೇತೃತ್ವದಲ್ಲಿ ಸದನ ಸಮಿತಿ ಏಕೆ ರಚಿಸಬಾರದು ಎಂದು ಅವರು ಪ್ರಶ್ನಿಸಿದರು. ಇದಕ್ಕೆ ಯಡಿಯೂರಪ್ಪ ಉತ್ತರಿಸಿ, ‘ಅವರ ನೇತೃತ್ವದಲ್ಲಿ ಸದನ ಸಮಿತಿ ಮಾಡಿದರೆ ಅಷ್ಟೇ’ ಎಂದು ಮುಗುಮ್ಮಾಗಿ ಉತ್ತರಿಸಿದರು.
ಆ ವೇಳೆಗೆ ಆರ್.ಎಲ್.ಜಾಲಪ್ಪ ಅವರ ಪುತ್ರ, ದೊಡ್ಡಬಳ್ಳಾಪುರದ ಬಿಜೆಪಿ ಶಾಸಕ ಜೆ.ನರಸಿಂಹಸ್ವಾಮಿ ಪ್ರತ್ಯಕ್ಷರಾದರು. ಅವರನ್ನು ಉದ್ದೇಶಿಸಿ, ಸಿದ್ದರಾಮಯ್ಯ ಸೇರಿದಂತೆ ಇತರ ಪ್ರತಿಪಕ್ಷ ಶಾಸಕರು ‘ಅವರ ತಂದೆ ಜಾಲಪ್ಪ ಅವರು ಆರೋಪ ಬಂದ ತಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ನಿಮ್ಮ ವಿರುದ್ಧ ಎಲ್ಲ ದಾಖಲೆಗಳು ಇದ್ದರೂ ನೀವು ರಾಜೀನಾಮೆ ನೀಡುತ್ತಿಲ್ಲ’ ಎಂದು ಛೇಡಿಸಿದರು.
ಅದಕ್ಕೆ ಯಡಿಯೂರಪ್ಪ ಉತ್ತರಿಸಿ, ‘ಜಾಲಪ್ಪ ಕೊನೆಗೆ ನಿರ್ದೋಷಿ ಎಂದು ತೀರ್ಮಾನವಾಯಿತು. ಅದನ್ನೂ ಗಮನದಲ್ಲಿ ಇಟ್ಟುಕೊಳ್ಳಿ’ ಎಂದು ತಿರುಗೇಟು ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.