ADVERTISEMENT

ನಾಯಕತ್ವದ ಬಗ್ಗೆ ಮಾತನಾಡಲಾರೆ: ಸಿ.ಎಂ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2012, 19:30 IST
Last Updated 8 ಮಾರ್ಚ್ 2012, 19:30 IST

ಬೆಂಗಳೂರು: `ಪಕ್ಷದ ವರಿಷ್ಠರ ಸೂಚನೆ ಅನ್ವಯ `ನಾಯಕತ್ವ~ ವಿಚಾರದಲ್ಲಿ ಬಹಿರಂಗವಾಗಿ ಯಾವುದೇ ಹೇಳಿಕೆ ನೀಡುವುದಿಲ್ಲ~ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಹೇಳಿದರು.

ಗೃಹ ಕಚೇರಿ `ಕೃಷ್ಣಾ~ದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, `ರಾಜ್ಯ ಸರ್ಕಾರದ ನಾಯಕತ್ವ ಕುರಿತು ಕೆಲವು ಶಾಸಕರು ನೀಡುತ್ತಿರುವ ಹೇಳಿಕೆಗಳ ಕುರಿತು ನಾನು ಪ್ರತಿಕ್ರಿಯೆ ನೀಡಲಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ರದ್ದುಮಾಡಿ ಹೈಕೋರ್ಟ್ ನೀಡಿರುವ ಆದೇಶದಿಂದ ನನಗೂ ಸಂತಸವಾಗಿದೆ~ ಎಂದರು.

ಅಕ್ರಮ ಗಣಿಗಾರಿಕೆ ಕುರಿತು ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅವರು ಲೋಕಾಯುಕ್ತರಾಗಿದ್ದಾಗ ನೀಡಿದ ವರದಿ ಕುರಿತು ರಾಜ್ಯ ಸರ್ಕಾರ ಲೋಕಾಯುಕ್ತ ಸಂಸ್ಥೆಯಿಂದ ಕೆಲವು ಸ್ಪಷ್ಟನೆಗಳನ್ನು ಕೇಳಿತ್ತು. ಹೈಕೋರ್ಟ್ ಬುಧವಾರ ನೀಡಿರುವ ಆದೇಶದಿಂದ ಸರ್ಕಾರ ಕೇಳಿದ್ದ ಸ್ಪಷ್ಟನೆಗಳಿಗೆ ಹೆಚ್ಚಿನ ಪುಷ್ಟಿ ದೊರೆತಂತಾಗಿದೆ ಎಂದು ಮುಖ್ಯಮಂತ್ರಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

`ಯಡಿಯೂರಪ್ಪ ವಿರುದ್ಧ ಇನ್ನೂ ಹಲವಾರು ಪ್ರಕರಣಗಳು ಇವೆಯಲ್ಲವೆ?~ ಎಂದು ಮುಂಬೈನಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ, `ಹೌದು, ಆ ಪ್ರಕರಣಗಳ ಕುರಿತು ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳುತ್ತದೆ ಎಂದು ಉತ್ತರಿಸಿದ್ದೆ. ಆ ಹೇಳಿಕೆಗೆ ಈಗಲೂ ಬದ್ಧ. ಯಡಿಯೂರಪ್ಪ ಅವರ ಕುರಿತು ದುರುದ್ದೇಶದಿಂದ ಯಾವುದೇ ಮಾತು ಆಡಿಲ್ಲ~ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.