ADVERTISEMENT

ನಾಳೆಯಿಂದ ಯುವ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯಕಾರಿಣಿ

​ಪ್ರಜಾವಾಣಿ ವಾರ್ತೆ
Published 29 ಮೇ 2012, 19:30 IST
Last Updated 29 ಮೇ 2012, 19:30 IST

ಹುಬ್ಬಳ್ಳಿ: ಇದೇ 31ರಿಂದ ಜೂನ್ 2ರವರೆಗೆ ನಗರದಲ್ಲಿ ನಡೆಯಲಿರುವ  ರಾಷ್ಟ್ರೀಯ ಯುವ ಕಾಂಗ್ರೆಸ್‌ನ ಕಾರ್ಯಕಾರಿಣಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್‌ಗಾಂಧಿ ಪಾಲ್ಗೊಳ್ಳಲಿದ್ದಾರೆ ಎಂದು ರಾಜ್ಯ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಅರ್ಷದ್ ರಿಜ್ವಾನ್ ಮಂಗಳವಾರ ಇಲ್ಲಿ ಹೇಳಿದರು.

1972 ಹಾಗೂ 1983ರಲ್ಲಿ ಕ್ರಮವಾಗಿ ಭಾಲ್ಕಿ ಹಾಗೂ ಬೆಂಗಳೂರಿನಲ್ಲಿ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಕಾರ್ಯಕಾರಿಣಿ ನಡೆದಿತ್ತು. 30 ವರ್ಷ ನಂತರ ಮತ್ತೆ ಆತಿಥ್ಯದ ಅವಕಾಶ ಲಭಿಸಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನೊಂದು ವರ್ಷ ಬಾಕಿ ಇದ್ದು, ಯುವ ಕಾಂಗ್ರೆಸ್‌ನ ಬಲವರ್ಧನೆ ಹಾಗೂ ಸಂಘಟನೆಯ ನಿಟ್ಟಿನಲ್ಲಿ ಕಾರ್ಯಕಾರಿಣಿ ಮಹತ್ವ ಪಡೆದಿದೆ ಎಂದರು. ಇದೇ 31ರಂದು ನಗರದ ನವೀನ್ ಹೋಟೆಲ್‌ನಲ್ಲಿ ಆರಂಭವಾಗಲಿರುವ ಕಾರ್ಯಕಾರಿಣಿಯನ್ನು ಸಂಸದೆ ಹಾಗೂ ಯುವ ಕಾಂಗ್ರೆಸ್ ಉಸ್ತುವಾರಿ ಕಾರ್ಯದರ್ಶಿ ಮೀನಾಕ್ಷಿ ನಟರಾಜನ್ ಉದ್ಘಾಟಿಸಲಿದ್ದಾರೆ.

ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿತೇಂದರ್ ಸಿಂಗ್, ಯುವ ಕಾಂಗ್ರೆಸ್ ರಾಷ್ಟ್ರೀಯ ಘಟಕದ ಅಧ್ಯಕ್ಷ ರಾಜೀವ್ ಸಾಥರ್ ಅವರು ಪಾಲ್ಗೊಳ್ಳಲಿದ್ದಾರೆ.ದೇಶದ ಎಲ್ಲಾ ರಾಜ್ಯಗಳ ಯುವ ಕಾಂಗ್ರೆಸ್ ಘಟಕಗಳ ಅಧ್ಯಕ್ಷರು, ರಾಷ್ಟ್ರೀಯ ಪದಾಧಿಕಾರಿಗಳು ಸೇರಿದಂತೆ 70 ಮಂದಿ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರತಿನಿಧಿಗಳ ವಾಸ್ತವ್ಯಕ್ಕೆ ಈಗಾಗಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ಜೂನ್ 2ರಂದು ಬೆಳಿಗ್ಗೆ ಹುಬ್ಬಳ್ಳಿಗೆ ಆಗಮಿಸಲಿರುವ ರಾಹುಲ್‌ಗಾಂಧಿ, ಎನ್‌ಎಸ್‌ಯುಐ ಅದೇ ದಿನ ನಗರದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ಕಾರ್ಯಕಾರಿಣಿ ಉದ್ಘಾಟಿಸಿ ನೇರವಾಗಿ ಯುವ ಕಾಂಗ್ರೆಸ್ ಸಭೆಗೆಆಗಮಿಸಲಿದ್ದಾರೆ. ಮಧ್ಯಾಹ್ನ 3ರವರೆಗೆ ಕಾರ್ಯಕಾರಿಣಿಯಲ್ಲಿ ಪಾಲ್ಗೊಂಡು ನಂತರ ನೆಹರೂ ಮೈದಾನದಲ್ಲಿ ನಡೆಯುವ ಯುವ ಕಾಂಗ್ರೆಸ್ ಸಂಘರ್ಷ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಹೊರತುಪಡಿಸಿರೆ ಪಕ್ಷದ ಯಾವುದೇ ನಾಯಕರು ಇಲ್ಲಿಯವರೆಗೆ ಕಾರ್ಯಕ್ರಮದ ಸಿದ್ಧತೆಯಲ್ಲಿ ಕಾಣಿಸಿಕೊಂಡಿಲ್ಲ. ಪಕ್ಷದ ಮುಖಂಡರು ಹಾಗೂ ಯುವಕಾಂಗ್ರೆಸ್ ನಡುವೆ ಹೊಂದಾಣಿಕೆಯ ಕೊರತೆಯೇ ಎಂಬ ಪ್ರಶ್ನೆಗೆ ಸಿದ್ಧತೆಯ ಹೊಣೆ ನಮ್ಮದೇ ಆಗಿದೆ. ಮುಂದಿನ ದಿನಗಳಲ್ಲಿ ಎಲ್ಲರೂ ಬರಲಿದ್ದಾರೆ ಎಂದರು.

ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿಶ್ವರಂಜನ್ ಮೊಹಾಂತಿ, ಯುವ ಕಾಂಗ್ರೆಸ್ ರಾಜ್ಯ ಘಟಕದ ಉಪಾಧ್ಯಕ್ಷ ಪಿಯಾಂಕ ಖರ್ಗೆ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಜಿಲ್ಲಾ ಉಸ್ತುವಾರಿ ಗೋಪಾಲ ನಾಯಕ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮೋಹನ ಅಸುಂಡಿ, ಉಪಾಧ್ಯಕ್ಷ ನಾಗರಾಜ ಗೌರಿ, ಬಸವರಾಜ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.